ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕರಾವಳಿ, ಕೊಡಗು, ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಬಹುತೇಕ ಕಡೆ ಭಾರಿ ಮಳೆಯಾಗುತ್ತಿದ್ದು, ಕೆಲವೆಡೆ ಹೈ ಅಲರ್ಟ್ ಘೋಷಿಸಲಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಕಳೆದ 2 ದಿನದಿಂದ ನಿರಂತರ ಮಳೆಯಾಗುತ್ತಿದ್ದು, ಹಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಅನೇಕ ಕಡೆ ಮನೆಗಳಿಗೆ ನೀರು ನುಗ್ಗಿದೆ. ಬಸವನಗಲ್ಲಿಯಲ್ಲಿ ಮನೆಯ ಗೋಡೆ ಕುಸಿದು ಕಾರು ಜಖಂಗೊಂಡಿದೆ.
ಜಿಲ್ಲೆಯ ಎಲ್ಲ ನದಿ ತೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಬೆಂಗಳೂರು -ಪುಣಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಳಗಾವಿ ಹೊರವಲಯದಲ್ಲಿ ನೀರು ನಿಂತಿದ್ದು ಸಂಚಾರ ಅಸ್ತವ್ಯಸ್ತಗೊಂಡಿದೆ. ನವಿಲುತೀರ್ಥ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ. ಯಾವುದೇ ಕ್ಷಣದಲ್ಲಿ ನೀರನ್ನು ಹೊರಗೆ ಬಿಡುವ ಸಾಧ್ಯತೆ ಇದೆ. ಮಹಾರಾಷ್ಟ್ರ ಗಡಿ ಭಾಗದಲ್ಲೂ ಭಾರಿ ಮಳೆಯಾಗುತ್ತಿರುವುದರಿಂದ ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳು ತುಂಬಿ ಹರಿಯುತ್ತಿವೆ.
ಧಾರವಾಡ ಜಿಲ್ಲೆಯಲ್ಲೂ ಎಡೆಬಿಡದೆ ಮಳೆಯಾಗುತ್ತಿದೆ. ಪ್ರವಾದಲ್ಲಿ ಸಿಲುಕಿದ್ದ ಇಬ್ಬರು ಬೈಕ್ ಸವಾರರನ್ನು ರಕ್ಷಿಸಲಾಗಿದೆ. ಇನ್ನೂ
ಖಾನಾಪುರ ವರದಿ
ಖಾನಾಪುರ ತಾಲೂಕಿನಾದ್ಯಂತ ಸತತ ಮೂರು ದಿನ ಮಳೆಯ ಅಬ್ಬರ: ಮತ್ತೆ ಪ್ರವಾಹದ ಭೀತಿ, ನದಿ ತೀರದ ಜನರಿಗೆ ತಾಲೂಕಾಡಳಿತದ ಎಚ್ಚರಿಕೆ ಗಂಟೆ
ಕಕ್ಕೇರಿ : ಕಳೆದ ಎರಡು-ಮೂರು ದಿನಗಳಿಂದ ಖಾನಾಪುರ ತಾಲೂಕಿನಲ್ಲಿ ನಿರಂತರ ಮಳೆ ಸುರಿಯುತ್ತಿರುವುದರಿಂದ ಕಾಡು ಪ್ರದೇಶದ ಹಾಗೂ ನದಿ ತೀರದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ನದಿ ಮತ್ತು ಹಳ್ಳಗಳ ಸುತ್ತಲೂ ಇರುವ ನೂರಾರು ಎಕರೆ ಪ್ರದೇಶದ ಜಮೀನುಗಳಲ್ಲಿ ನೀರು ನುಗ್ಗಿ ನಾಟಿ ಮಾಡಿದ ಸಸಿಗಳು ನೀರಲ್ಲಿ ಮುಳುಗಿವೆ. ಪಶ್ಚಿಮ ಭಾಗದ ಕಣಕುಂಬಿ, ಜಾಂಬೋಟಿ, ಗುಂಜಿ ಮತ್ತು ಲೋಂಡಾ ಭಾಗದ ಸುಮಾರು ಹಳ್ಳಿಗಳು ಹಾಗೂ ಪೂರ್ವ ಭಾಗದ ಅವರೊಳ್ಳಿ, ಕೊಡಚವಾಡ, ಚಿಕ್ಕದಿನಕೊಪ್ಪ, ಮುಗಳಿಹಾಳ, ಪಾರಿಶ್ವಾಡ, ಹಟ್ಟಿಹೊಳಿ, ಬಿಳಕಿ, ಕಗ್ಗಣಗಿ, ಹಿರೇಮುನವಳ್ಳಿ, ಚಿಕ್ಕಮುನವಳ್ಳಿ ಭಾಗದ ಸಾಕಷ್ಟು ರೈತರ ಜಮೀನುಗಳು ಹಳ್ಳದ ಪ್ರವಾಹಕ್ಕೆ ಕೊಚ್ಚಿ ಹೋಗಿವೆ. ಖಾನಾಪುರ ತಾಲೂಕಿನ ಮಲಪ್ರಭಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.
ಹವಾಮಾನ ಇಲಾಖೆಯ ಪ್ರಕಾರ ಇನ್ನೂ ಮೂರ್ನಾಲ್ಕು ದಿನ ಭಾರಿ ಮಳೆ ಆಗುವ ಸಂಭವ ಇದೆ. ಆದ್ದರಿಂದ ತಾಲೂಕಿನ ನದಿ ಹಳ್ಳ-ಕೊಳ್ಳದ ಎಲ್ಲ ಜನತೆ ಸುರಕ್ಷಿತ ಸ್ಥಳದಲ್ಲಿ ವಾಸಿಸಬೇಕೆಂದು ಖಾನಾಪುರ ತಾಲೂಕಾಡಳಿತ ಸಾರ್ವಜನಿಕರಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.
ಖಾನಾಪುರ ತಾಲೂಕಿನ ಜೀವನದಿ ಮಲಪ್ರಭೆ ಜನ್ಮತಾಳಿದ ಕಣಕುಂಬಿ ಪ್ರದೇಶದಲ್ಲಿ ನಿನ್ನೆಯ ದಿನ ೨೨೬ಮಿ.ಮೀ ಮಳೆ ಆಗಿದ್ದರಿಂದ, ಬೆಳಗಾಗುವಷ್ಟರಲ್ಲಿ ಜಾಂಬೋಟಿ ಹತ್ತಿರದ ಹಬ್ಬನಹಟ್ಟಿ ಗ್ರಾಮದ ಬಳಿ ಮಲಪ್ರಭಾ ನದಿಯ ಮಧ್ಯಭಾಗದಲ್ಲಿ ಇರುವ ಹನುಮಾನ ಮಂದಿರ ಮುಳುಗಡೆಯಾಗಿದೆ. ಆದ್ದರಿಂದ ಖಾನಾಪುರ ತಾಲೂಕಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ಸಂಭವನೀಯ ಪ್ರವಾಹವನ್ನು ಎದುರಿಸಲು ಸಿದ್ಧವಾದ ಶಾಸಕಿ ಡಾಅಂಜಲಿ ನಿಂಬಾಳಕರ ಪಡೆ
ಕಕ್ಕೇರಿ: ಖಾನಾಪುರ ತಾಲೂಕಿನಲ್ಲಿ ೨-೩ ದಿಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದ ಹಳ್ಳ-ಕೊಳ್ಳಗಳು, ಮಲಪ್ರಭಾ ನದಿ, ಹೊಲ-ಗದ್ದೆಗಳು ತುಂಬಿ ಹರಿಯುತ್ತಿದ್ದು, ರೈತರು ಭತ್ತ ನಾಟಿ ಮಾಡಿದ ಹೊಲಗಳು ಕೊರಕಲು ಬಿದ್ದಿವೆ. ನದಿ ದಡದ ಜನರ ವಾಸಸ್ಥಳಗಳಿಗೆ ನೀರು ನುಗ್ಗುತಿದ್ದು ಅವರ ಬದುಕು ಅತಂತ್ರವಾಗುವ ಸ್ಥಿತಿಯಲ್ಲಿದೆ.ತುಂಬಿ ಹರಿಯುತ್ತಿರುವ ನದಿಗೆ ಅಡ್ಡಲಾಗಿ ನಿರ್ಮಿತ ಬಹುಗ್ರಾಮಗಳ ರಸ್ತೆಗಳು ಸಂಪರ್ಕ ಕಳೆದುಕೊಳ್ಳುವ ಹಂತದಲ್ಲಿವೆ.
ಇದನ್ನು ಗಮನಿಸುತ್ತಿರುವ ಶಾಸಕಿ ಡಾ.ಅಂಜಲಿ ಹೇಮಂತ ನಿಂಬಾಳಕರ ಅವರು ಜಲಾವೃತಗೊಂಡ ಸ್ಥಳಗಳಿಗೆ ಭೇಟಿ ನೀಡಿ ತುರ್ತು ಪರಹಾರಕ್ಕೆ ತಮ್ಮ ತಂಡಕ್ಕೆ ಸಲಹೆ ಸೂಚನೆ ನೀಡಿದ್ದಾರೆ. ಅದರಂತೆ ಪಟ್ಟಣದ ಮಲಪ್ರಭಾ ನದಿ ಸೇತುವೆಗೆ ಬುಧವಾರ ಶಾಸಕಿ ಭೇಟಿ ನೀಡಿ ಪ್ರವಾಹದ ಪರಿಸ್ಥಿತಿಯನ್ನು ಖುದ್ದಾಗಿ ಪರಿಶೀಲಿಸಿದರು. ಅವಶ್ಯ ಕ್ರಮಗಳಿಗಾಗಿ ಸಿದ್ಧತೆ ನಡೆಸಿದ್ದಾರೆ.
(ವರದಿ -ಈಶ್ವರ ಜಿ.ಸಂಪಗಾವಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ