Kannada NewsKarnataka NewsLatest

ನಿಪ್ಪಾಣಿಗೆ ಸರಕಾರಿ ಪದವಿ ಮಹಾವಿದ್ಯಾಲಯ – ಸಚಿವೆ ಶಶಿಕಲಾ ಜೊಲ್ಲೆ

ಜೊಲ್ಲೆ ಉದ್ಯೋಗ ಸಮೂಹದ ಎಕ್ಸಂಬಾದ ಮತ್ತು ಶ್ರೀಪೇವಾಡಿಯ ಶಾಲಾ ಆವರಣದಲ್ಲಿ ಸುಮಾರು ೪೦ ಹಾಸಿಗೆಯ ಕೇರ್ ಸೆಂಟರ್

 

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ – : ’ಸರಕಾರದ ಎಲ್ಲ ಯೋಜನೆಗಳನ್ನು ಪ್ರತಿಯೊಬ್ಬ ಅರ್ಹರ ಮನೆಗೆ ತಲುಪಿಸುವ ನಿಟ್ಟಿನಲ್ಲಿ ನಾನು ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ ಇಬ್ಬರೂ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸುತ್ತ ಬಂದಿದ್ದೇವೆ. ಸಾಮಾಜಿಕ ಧಾರ್ಮಿಕ, ಶೈಕ್ಷಣಿಕ ಮೊದಲಾದ ಎಲ್ಲ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಮತಕ್ಷೇತ್ರದ ಅಭಿವೃದ್ಧಿಗೂ ಅವಿರತವಾಗಿ ಪ್ರಯತ್ನಿಸುತ್ತ ಬಂದಿದ್ದೇವೆ. ಈ ನಿಟ್ಟಿನಲ್ಲಿ ಕಳೆದ ಮೂರು ವರ್ಷಗಳಿಂದ ನಗರದಲ್ಲಿ ಒಂದು ಸರಕಾರಿ ಪದವಿ ಮಹಾವಿದ್ಯಾಲಯವನ್ನು ಆರಂಭಿಸಲು ಪ್ರಯತ್ನ ಮಾಡುತ್ತಿದ್ದೆವು. ಅದಕ್ಕೆ  ಅನುಮೋದನೆ ದೊರಕಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹರ್ಷ ವ್ಯಕ್ತಪಡಿಸಿದರು.
ಬಿಜೆಪಿ ಪಕ್ಷದ ಸ್ಥಳೀಯ ಕಾರ್ಯಾಲಯದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ’ಗಡಿಭಾಗದಲ್ಲಿ ಅಪಾರ ರೈತ ಬಾಂಧವರಿದ್ದಾರೆ. ನನ್ನ ಕ್ಷೇತ್ರದ ಎಲ್ಲ ಅನ್ನದಾತರ ಮಕ್ಕಳಿಗೆ ಗುಣಮಟ್ಟದ ಹಾಗೂ ಉನ್ನತ ಶಿಕ್ಷಣ ದೊರಕಿಸುವ ನಿಟ್ಟಿನಲ್ಲಿ, ಮತ್ತು ಬಡಮಕ್ಕಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದೆಂದು ಪ್ರಯತ್ನಿಸುತ್ತಿದ್ದೆವು. ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ ಈ ನಿಟ್ಟಿನಲ್ಲಿ ಸಹಕರಿಸಿದ್ದು ಸ್ವಂತ ಕಟ್ಟಡದಲ್ಲಿ ಆರಂಭಿಸುವ ನಿಟ್ಟಿನಲ್ಲಿ ಸೂಚಿಸಿದ್ದು ಲೋಕಾರ್ಪಣೆಗಾಗಿ ಬರುವುದಾಗಿ ಖುದ್ದಾಗಿ ಹೇಳಿದ್ದಾರೆ’ ಎಂದರು.
’ಸಧ್ಯದಲ್ಲಿ ಇಲ್ಲಿನ ಮುನಿಸಿಪಲ್ ಪ್ರೌಢಶಾಲೆಯ ಆವರಣದಲ್ಲಿ ಬಿ.ಎ. ಬಿ.ಕಾಂ., ಬಿ.ಎಸ್ಸಿ. ಪದವಿಗಳು ತಲಾ ೧೨೦ ದಾಖಲಾತಿಗಳೊಂದಿಗೆ ಆರಂಭವಾಗಲಿದೆ. ಪ್ರಾಚಾರ್ಯರಾಗಿ ಎ.ಪಿ. ಮುಲ್ಲಾ ಅವರನ್ನು ನಿಯೋಜಿಸಲಾಗಿದ್ದು ಕ್ಷೇತ್ರದ ವಿದ್ಯಾರ್ಥಿಗಳು ಅವರ ಮೊ.ಸಂ. ೯೪೪೮೬೩೦೭೦೧ಗೆ ಸಂಪರ್ಕಿಸಿ ದಾಖಲಾತಿ ಪಡೆಯಬೇಕು’ ಎಂದರು.
’ನಗರ ಸಮೀಪದ ಗವಾನ ಗ್ರಾಮದಲ್ಲಿ ೪೦ ಹಾಸಿಗೆಯ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದ್ದರೂ ಕೋವಿಡ್-೧೯ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ನಗರದಲ್ಲಿಯ ಅಕ್ಕೋಳ ರಸ್ತೆಯಲ್ಲಿರುವ ದೇವರಾಜ ಅರಸು ಮಹಿಳಾ ವಸತಿ ನಿಲಯ, ತಾಲ್ಲೂಕಿನ ಕಾರದಗಾ, ಬೇಡಕಿಹಾಳ ಮೊದಲಾದೆಡೆಯ ಸರಕಾರಿ ವಸತಿ ನಿಲಯಗಳಲ್ಲಿ ಸುಮಾರು ೨೦ ರಿಂದ ೩೦ ಹಾಸಿಗೆಯ ಕೋವಿಡ್ ಕೇರ್ ಸೆಂಟರ್‌ಗಳನ್ನು ಆರಂಭಿಸಲಾಗುವುದು. ಜೊತೆಗೆ ಜೊಲ್ಲೆ ಉದ್ಯೋಗ ಸಮೂಹದ ಎಕ್ಸಂಬಾದ ಮತ್ತು ಶ್ರೀಪೇವಾಡಿಯ ಶಾಲಾ ಆವರಣದಲ್ಲಿ ಸುಮಾರು ೪೦ ಹಾಸಿಗೆಯ ಕೇರ್ ಸೆಂಟರ್ ಆರಂಭಿಸಲು ಸೂಚಿಸಲಾಗಿದೆ’ ಎಂದ ಅವರು ಎಲ್ಲರೂ ಮಾಸ್ಕ್, ಸ್ಯಾನಿಟೈಜರ್ ಉಪಯೋಗಿಸುತ್ತ ಅಂತರ ಕಾಯ್ದುಕೊಳ್ಳುವುದೊಂದಿಗೆ ತಮ್ಮ ಆರೋಗ್ಯದ ಕಾಳಜಿ ವಹಿಸಿ ಎಂದು ಸಾರ್ವಜನಿಕರಲ್ಲಿ ಕೇಳಿಕೊಂಡರು.
ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಹೊಸ ಸರಕಾರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಎ.ಪಿ. ಮುಲ್ಲಾ ಮಾತನಾಡಿದರು. ಸ್ಥಳೀಯ ನಗರಸಭೆ ಪೌರಾಯುಕ್ತ ಮಹಾವೀರ ಬೋರನ್ನವರ, ಸದಸ್ಯ ರಾಜು ಗುಂಡೇಶಾ, ಮೊದಲಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button