ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಜಿಲ್ಲೆಯಲ್ಲಿ ತೀವ್ರ ಬರಗಾಲವಿದೆ, ಕುಡಿಯುವ ನೀರಿನ ಸಮಸ್ಯೆ, ಜನರು ಗುಳೆ ಹೋಗುವಂತಹ ಸಮಸ್ಯೆಗಳಿದ್ದು, ಎಲ್ಲ ಅಧಿಕಾರಿಗಳು ಕ್ರೀಯಾಶೀಲವಾಗಿ ಬರ ನಿರ್ವಹಣೆಯ ಕೆಲಸ ಮಾಡಬೇಕು ಎಂದು ಕಂದಾಯ ಹಾಗೂ ಬರ ಅಧ್ಯಯನ ರಾಜ್ಯ ಸಚಿವ ಸಂಪುಟದ ಉಪ ಸಮಿತಿಯ ಅಧ್ಯಕ್ಷರು ಹಾಗೂ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಆದೇಶಿಸಿದ್ದಾರೆ.
ಮಂಗಳವಾರ ಜಿಲ್ಲೆಯ ಆಯ್ದ ಬರಪೀಡಿತ ಪ್ರದೇಶಗಳ ವಸ್ತುಸ್ಥಿತಿ ಅಧ್ಯಯನ ನಡೆಸಿ ಜಿಲ್ಲಾ ಪಂಚಾಯತ್ ಕಚೇರಿ ಸಭಂಗಣದಲ್ಲಿ ಪ್ರಕೃತಿ ವಿಕೋಪದಿಂದ ಸಂಭವಿಸಿದ ಹಾನಿ ಹಾಗೂ ಬರನಿರ್ವಹಣೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು.
ಮುಂದಿನ ಏಳು ದಿನಗಳಲ್ಲಿ ಹೆಚ್ಚು ಇಳುವರಿ ಇರುವ ಕೊಳವೆ ಬಾವಿಗಳನ್ನು ಗುರುತಿಸಿಕೊಳ್ಳಬೇಕು. ಕೊಳವೆ ಬಾವಿ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ಸಿದ್ಧತೆ ಮಾಡಿಕೊಳ್ಳುವಂತೆ ಎಲ್ಲ ತಹಶೀಲ್ದಾರರುಗಳಿಗೆ ಸೂಚನೆ ನೀಡಿದರು.
ಬರಪೀಡಿತ ತಾಲೂಕುಗಳಲ್ಲಿ ನೂರು ದಿನಗಳಿಂದ ನೂರಾ ಐವತ್ತು ದಿನಗಳಿಗೆ ಕೆಲಸ ನೀಡಲು ಆದೇಶ ಮಾಡಲಾಗಿದೆ. ಈ ನಿಟ್ಟಿನಲ್ಲಿ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿಕೊಂಡು ಜನರಿಗೆ ಸ್ಥಳೀಯವಾಗಿ ಕೆಲಸ ನೀಡಬೇಕು ಎಂದು ತಿಳಿಸಿದರು.
ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಗ್ರಾಮವಾರು ಕಡ್ಡಾಯವಾಗಿ ಪ್ರವಾಸ ಮಾಡಬೇಕು. ಹಳ್ಳಿಗಳಿಗೆ ಹೋಗಿ ಜನರ ಸಮಸ್ಯೆಗಳನ್ನು ಖುದ್ದಾಗಿ ಆಲಿಸಬೇಕು. ಬರ ನಿರ್ವಹಣೆಗೆ ತ್ವರಿತವಾಗಿ ಪರಿಹಾರ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ತಾಲೂಕಾವಾರು ಪ್ರತಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ, ಜಾನುವಾರುಗಳಿಗೆ ನೀರು ಮತ್ತು ಮೇವಿನ ಸಮಸ್ಯೆ, ಜನರಿಗೆ ಉದ್ಯೋಗ ಕಲ್ಪಿಸುವ ಕುರಿತಂತೆ ಚರ್ಚಿಸಿ ಕ್ರಮವಹಿಸಬೇಕು. ಬರ ಪರಿಹಾರಕ್ಕೆ ಯಾವುದೇ ಅನುದಾನದ ಕೊರತೆ ಇಲ್ಲ. ನೀವು ಬೇಡಿಕೆ ಸಲ್ಲಿಸಿದರೆ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.
ಪ್ರತಿ ಜಿಲ್ಲಾಡಳಿತಕ್ಕೆ ಕುಡಿಯುವ ನೀರು ನಿರ್ವಹಣೆಗಾಗಿ ಕನಿಷ್ಠ ಐದು ಕೋಟಿ ರೂ. ಅನುದಾನ ಲಭ್ಯವಿರುವಂತೆ ಬಿಡುಗಡೆ ಮಾಡಲಾಗಿದೆ. ಪ್ರತಿ ತಾಲೂಕು ಆಡಳಿತದಲ್ಲಿ ೨೫ ರಿಂದ ೪೦ ಲಕ್ಷ ರೂ.ವರೆಗೆ ಅನುದಾನ ಲಭ್ಯವಿರುದಾಗಿ ಸಭೆಯಲ್ಲಿ ಜಿಲ್ಲಾಧಿಕಾರಿ ಮಾಹಿತಿ ಒದಗಿಸಿದ್ದಾರೆ. ಜನರಿಗೆ ತೊಂದರೆಯಾಗದಂತೆ ಬರ ನಿರ್ವಹಣೆ ಮಾಡಿ ಎಂದು ಸಲಹೆ ನೀಡಿದರು.
ಉದ್ಯೋಗ ಖಾತ್ರಿ ಯೋಜನೆಯಡಿ ಬದು ನಿರ್ಮಾಣ, ಕೃಷಿ ಹೊಂಡ ಕೆರೆಗಳ ಪುನಶ್ಚೇತನ, ಕೆರೆ ಹೂಳೆತ್ತುವ ಕಾಮಗಾರಿಯನ್ನು ಕೈಗೊಳ್ಳಿ, ಟಾಸ್ಕ್ಪೋರ್ಸ್ ಅಡಿ ಲಭ್ಯವಿರುವ ಅನುದಾನವನ್ನು ಬಳಸಿ ಕೊಳವೆ ಬಾವಿಗಳ ಪುನಶ್ಚೇತನ ಕಾಮಗಾರಿಗಳನ್ನು ಕೈಗೊಳ್ಳಿ, ಪೈಪ್ಲೈನ್ಗಳ ಅಳವಡಿಕೆ, ಮೋಟರ್ಗಳ ಅಳವಡಿಕೆಮಾಡಿ ಎಂದು ಹೇಳಿದರು
ಕಳೆದ ೧೮ ವರ್ಷದಲ್ಲಿ ೧೪ ವರ್ಷಗಳ ಕಾಲ ರಾಜ್ಯ ಬರ ಪರಿಸ್ಥಿತಿಯನ್ನು ಎದುರಿಸುತ್ತಿದೆ. ನೀವೆಲ್ಲರೂ ಬರ ನಿರ್ವಹಣೆಯಲ್ಲಿ ಭಾಗಿಗಳಾಗಿದ್ದೀರಿ. ಬರ ಪರಿಸ್ಥಿತಿ ನಿರ್ವಹಣೆಯ ಇತಿಹಾಸದ ಆಧಾರದ ಮೇಲೆ ಸಮಸ್ಯಾತ್ಮಕ ಹಳ್ಳಿಗಳು ಯಾವುವೂ, ಯಾವ ಕಾಲದಲ್ಲಿ ಸಮಸ್ಯೆ ಎದುರಾಗುತ್ತದೆ ಎಂಬುದು ಮೊದಲೆ ನಿಮಗೆ ತಿಳಿದಿರುತ್ತದೆ. ಈ ಕುರಿತಂತೆ ಪೂರ್ವ ಸಿದ್ಧತೆಯನ್ನು ಮಾಡಿಕೊಂಡು ಸಮಸ್ಯೆ ಎದುರಾಗುವ ಮುನ್ನವೇ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮವಹಿಸಿ ಎಂದು ಹೇಳಿದರು.
ಕೇಂದ್ರ ಸರ್ಕಾರದ ಮಾನದಂಡ, ಮಾರ್ಗಸೂಚಿಯಂತೆ ಬರ ಪರಿಹಾರ ಹಣ ವಿತರಣೆ ಕೆಲಸ ನಡೆಯುತ್ತದೆ. ಈ ನಿಯಮಾವಳಿ ಅನುಸಾರವೇ ಎಲ್ಲರೂ ಕೆಲಸ ಮಾಡಬೇಕಾಗುತ್ತದೆ. ಮುಂಗಾರಿನಲ್ಲಿ ೧೬,೬೦೦ ಕೋಟಿ ರೂ. ಬೆಳೆ ನಷ್ಟವಾಗಿರುವ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಮಾರ್ಗಸೂಚಿಯಂತೆ ೨,೪೩೪ ಕೋಟಿ ರೂ. ಪರಿಹಾರವನ್ನು ಕೇಳಿದ್ದೇವೆ ಎಂದು ಹೇಳಿದರು.
ಜಿಲ್ಲಾಧಿಕಾರಿ ಎಸ್.ಬಿ. ಬೊಮ್ಮನಹಳ್ಳಿ, ಜಲಾಶಯಗಳ ನೀರಿನ ಮಟ್ಟ, ಮಳೆ, ಮೇವು, ಕುಡಿಯುವ ನೀರಿನ ಸರಬರಾಜು ವ್ಯವಸ್ಥೆ ಕುರಿತು ವಿವರಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ವಿ.ರಾಜೇಂದ್ರ ಅವರು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯ ಪ್ರಗತಿ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಸಂಸದ ಸುರೇಶ ಅಂಗಡಿ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅರಣ್ಯ ಪರಿಸರ ಸಚಿವ ಸತೀಶ ಜಾಕಿರಹೊಳಿ, ಸಂಸದ ಪ್ರಕಾಶ ಹುಕ್ಕೇರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ಐಹೊಳೆ ಪ್ರಾದೇಶಿಕ ಆಯುಕ್ತ ಪಿ.ಎ.ಮೇಘಣ್ಣನವರ, ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.



