ಭಾರಿ ಪ್ರಮಾಣದಲ್ಲಿ ಭ್ರಷ್ಟಾಚಾರ: ಬಾಳೆಕುಂದ್ರಿ ಗ್ರಾಪಂ ಅಧ್ಯಕ್ಷರ ವಿರುದ್ಧ ಕ್ರಿಮಿನಲ್ ಕೇಸ್, ಸದಸ್ಯತ್ವ ರದ್ದಿಗೆ ಶಿಫಾರಸ್ಸು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭಾರೀ ಪ್ರಮಾಣದಲ್ಲಿ ಭ್ರಷ್ಟಾಚಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಿದ ಪ್ರಾದೇಶಿಕ ಆಯುಕ್ತರ ನ್ಯಾಯಾಲಯ, ಬಾಳೆಕುಂದ್ರಿ ಕೆಎಚ್ ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಕ್ರಿಮಿನಿಲ್ ಪ್ರಕರಣ ದಾಖಲಿಸಿದ್ದಲ್ಲದೆ, ಅವರ ಸದಸ್ಯತ್ವ ರದ್ದುಪಡಿಸಲು ಸರಕಾರಕ್ಕೆ ಶಿಫಾರಸ್ಸು ಮಾಡಿದೆ.
ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಉಪಾಧ್ಯಕ್ಷ ಯುವರಾಜ ಜಾಧವ ಅವರ ಸಹೋದರ ಪ್ರಶಾಂತ ಅನಂತರಾವ್ ಜಾಧವ ಬಾಳೆಕುಂದ್ರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು. 26,78,473 ರೂ. ಅವ್ಯವಹಾರ ನಡೆಸಿರುವ ಆರೋಪ ಇವರ ಮೇಲಿದೆ. ಹಾಗಾಗಿ ಅವರ ಸದಸ್ಯತ್ವವನ್ನು ತಕ್ಷಣವೇ ರದ್ದುಪಡಿಸಬೇಕು ಎಂದು ಪ್ರಾದಶಿಕ ಆಯುಕ್ತರು ಸರಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ. ಅಲ್ಲದೆ ಅವರ ವಿರುದ್ಧ ಹಲವಾರು ಗಂಭೀರ ಆರೋಪಗಳನ್ನು ಮಾಡಲಾಗಿದೆ.
ಜೊತೆಗೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೂನಂ ಘಾಟಡೆ ಅವರನ್ನು ಅಮಾನತು ಮಾಡಿ, ತದನಂತರದಲ್ಲಿ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಪುನರ್ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಏನಿದು ಪ್ರಕರಣ?
ಬಾಳೆಕುಂದ್ರಿ ಕೆಎಚ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ ಜಾಧವ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿಕೊಂಡು 14ನೇ ಹಣಕಾಸು ಯೋಜನೆ ಅಡಿ 7,37,042 ರೂಪಾಯಿ ಖರ್ಚು ಮಾಡಿರುವ ಬಗ್ಗೆ ಹಾಗೂ ಇದರೊಂದಿಗೆ 5,37,000 ರೂ. ಮೊತ್ತಕ್ಕೆ ಯಾವುದೇ ದಾಖಲೆಗಳನ್ನು ನಿರ್ವಹಿಸದೆ ಇರುವ ಬಗ್ಗೆ ಮತ್ತು 2018 -19ನೇ ಸಾಲಿಗೆ ಸಂಬಂಧಿಸಿದಂತೆ ಎಸ್ಕ್ರೋ ಖಾತೆಯಲ್ಲಿನ 13,17,650 ರೂ ಗಳನ್ನು ಕೆಟಿಪಿಪಿ ಕಾಯ್ದೆಯನುಸಾರ ಬಳಸದೆ ಹಾಗೂ ಗ್ರಾಮ ಪಂಚಯಿತಿಯ ಕರವಸೂಲಾತಿಯಲ್ಲಿ 86,781 ರೂ.ಗಳನ್ನು ಸರಕಾರಿ ಖಾತೆಗೆ ಭರಿಸದೆ ಸ್ವಂತ ಉಪಯೋಗಕ್ಕಾಗಿ ಬಳಸಿ, ಒಟ್ಟೂ 26,78,473 ರೂ.ಗಳಷ್ಟು ಮೊತ್ತದ ಗ್ರಾಮ ಪಂಚಾಯಿತಿಯ ಅನುದಾನವನ್ನು ದುರಪಯೋಗಪಡಿಸಿಕೊಂಡ ಆರೋಪವನ್ನು ಜಿಲ್ಲಾ ಪಂಚಾಯಿತಿ ಸಿಇಒ ಹೊರಿಸಿದ್ದರು.
ಆರೋಪಗಳು ಬಲವಾಗಿದ್ದರೂ ಕ್ರಿಮಿನಲ್ ಮೊಕದ್ದಮೆ ದಾಖಲಿಸದೆ ಇರುವುದನ್ನು ವಿಚರಣೆ ವೇಳೆ ಪ್ರಾದೇಶಿಕ ಆಯುಕ್ತರು ಗಮನಿಸಿ, ತಕ್ಷಣ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಜಿಪಂ ಸಿಇಒಗೆ ಸೂಚಿಸಿದ್ದರು. ಅದರಂತೆ ಜೂನ್ 19ರಂದು ಜಿಲ್ಲಾ ಪಂಚಾಯಿತಿ ಸಿಇಒ ಅವರು ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದಾರೆ.
ವಿಚಾರಣೆ ವೇಳೆ ಪದೇ ಪದೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಜರಾಗಲು ತಿಳಿಸಿದ್ದರೂ ಸ್ವತಃ ಹಾಜರಾಗದೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ತಮಗೆ 3 ಬಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ವ್ಯಾಪಕ ಅನುಭವ ಇರುವುದಾಗಿ ಒಮ್ಮೆ ಹೇಳಿಕೊಂಡು, ನಂತರದಲ್ಲಿ ತಾನು ಚೆಕ್ ಗಳಿಗೆ ಸಹಿ ಮಾಡಿದ್ದು, ತನಗೆ ಹಣಕಾಸಿನ ವಿಚಾರದಲ್ಲಿ ಯಾವುದೇ ಜ್ಞಾನವಿಲ್ಲ ಎಂದು ದ್ವಂದ್ವ ಹೇಳಿಕೆ ನೀಡಿದ್ದಾರೆ ಎನ್ನುವುದು ವಿಚಾರಣೆ ವೇಳೆ ಗಮನಕ್ಕೆ ಬಂದಿದೆ.
ಯಾವುದೇ ವ್ಯಕ್ತಿಯು 3 ಬಾರಿ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದಲ್ಲಿ ಆತನಿಗೆ ಗ್ರಾಮ ಪಂಚಾಯಿತಿ ಯೋಜನೆಗಳನ್ನು ಅನುಮೋದಿಸುವಲ್ಲಿ, ವೆಚ್ಚಗಳನ್ನು ನಿರ್ವಹಿಸುವಲ್ಲಿ, ಟೆಂಡರ್ ಗಳ ಕುರಿತಂತೆ ಹಾಗೂ ಕಾಮಗಾರಿಗಳನ್ನು ಕೈಗೊಳ್ಳಲು ಚೆಕ್ ಗಳಿಗೆ ಸಹಿ ಮಾಡಿ ಹಣವನ್ನು ಬಿಡುಗಡೆ ಮಾಡುವಲ್ಲಿ ತನ್ನ ಪಾತ್ರ, ಜವಾಬ್ದಾರಿ ಏನೆಂದು ತಿಳಿದಿರಲೇಬೇಕಾಗುತ್ತದೆ. ಆದ್ದರಿಂದ ತನಗೆ ಹಣಕಾಸಿನ ವಿಷಯಗಳಲ್ಲಿ ಹಾಗೂ ಅನುಮೋದನೆ ಮಾಡುವಲ್ಲಿ ಯಾವುದೇ ಜ್ಞಾನವಿಲ್ಲವೆಂದು ಮಾಡಿದ ವಾದವು ಆಧಾರ ರಹಿತವಾಗಿ ಹಾಗೂ ಸಾರ್ವಜವಿಕರ ಹಿತಕ್ಕಾಗಿ ಕಾರ್ಯನಿರ್ವಹಿಸುವ ಕಚೇರಿಗಳಲ್ಲಿ ಕಾನೂನಿನ ಜ್ಞಾನದ ಕೊರತೆ ಮತ್ತು ನಿಯಮಗಳ ನಿರ್ಲಕ್ಷ್ಯತೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ವಿಚಾರಣೆ ವೇಳೆ ತೀರ್ಮಾನಿಸಲಾಗಿದೆ.
ರಾಜಕೀಯ ವ್ಯಕ್ತಿಗಳು ಹಾಗೂ ಅಧಿಕಾರಿಗಳು ತನ್ನ ವಿರುದ್ಧ ಪಿತೂರಿ ಮಾಡುತ್ತಿರುವ ಬಗ್ಗೆ ಆರೋಪ ಮಾಡಿದ್ದರೂ ಅದಕ್ಕೆ ಪೂರಕವಾಗಿ ಯಾವುದೇ ಸಾಕ್ಷಿಗಳನ್ನು ಸಲ್ಲಿಸಿಲ್ಲ. ಆದ್ದರಿಂದ ರಾಜಕೀಯ ಪಿತೂರು ಎನ್ನುವ ಹೇಳಿಕೆ ಆಧಾರ ರಹಿತ ಹಾಗೂ ಅಸ್ಪಷ್ಟ ಎಂದು ಸ್ಪಷ್ಟಪಡಿಸಲಾಗಿದೆ.
ಟೆಂಡರ್ ನಿಯಮಗಳನ್ನು ಪಾಲಿಸದೆ, ಗುತ್ತಿಗೆದಾರರು ಏಕೆ ಮತ್ತು ಹೇಗೆ ಆಯ್ಕೆಯಾದರು ಎನ್ನುವುದಕ್ಕೆ ವಿವರಣೆ ನೀಡಲು ಅವರು ವಿಫಲರಾಗಿದ್ದಾರೆ.
ಬಾಳೆಕುಂದ್ರಿ ಕೆಎಚ್ ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಕಾಮಗಾರಿಗೆ ಟೆಂಡರ್ ಕರೆದಿಲ್ಲ. ನಿಗದಿತ ಕಾನೂನು ಪಾಲಿಸಿಲ್ಲ ಎಂದು ಪ್ರಸ್ತುತ ಪಿಡಿಒ ಮತ್ತು ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ತಿಳಿಸಿದ್ದಾರೆ. ಸಾರ್ವಜನಿಕ ಹಣವನ್ನು ಟಂಡರ್ ಕರೆಯದೆ ಖರ್ಚು ಮಾಡಿದ್ದಾರೆ. ಹಾಗಾಗಿ ಅವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ವಿಚಾರಣಾಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಶಾಂತ ಜಾಧವ ಒಂದು ಬಾರಿಯೂ ವಿಚಾರಣೆಗೆ ಹಾಜರಾಗದೆ, ನ್ಯಾಯವಾದಿಗಳ ಮೂಲಕ ನ್ಯಾಯಾಲಯದ ನಿರ್ಣಯದಿಂದ ತಪ್ಪಿಸಿಕೊಳ್ಳಲು ಪದೇ ಪದೆ ಕಾಲಾವಕಾಶ ಕೋರುತ್ತಿದ್ದಾರೆ. ಆದರೆ ಕಾಲಾವಕಾಶ ಕೊಡುವುದರಲ್ಲಿ ಯಾವುದೇ ಅರ್ಥವಿಲ್ಲ. ಅವರು ತಮ್ಮ ಅಧಿಕಾರ ಅವಧಿ ಮುಕ್ತಾಯವಾಗುವವರೆಗೆ ವಿಚಾರಣೆಯನ್ನು ಮುಂದುವರಿಸಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ತೀರ್ಮಾನಿಸಿ ನಿರ್ಣಯ ನೀಡಲಾಗಿದೆ.
ಈಗಾಗಲೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದ್ದು, ಅವರ ಸದಸ್ಯತ್ವವನ್ನೂ ರದ್ದುಪಡಿಸಬೇಕು ಎಂದು ಪ್ರಾದೇಶಿಕ ಆಯುಕ್ತರು ಸರಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ