Karnataka NewsLatest

ಗೋಕಾಕದಲ್ಲಿ ಮತ್ತೆ ಮುಳಗಡೆ ಭೀತಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ:   ಕಳೆದ ಮೂರು ದಿನಗಳಿಂದ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರಿ ಪ್ರಮಾಣದ ಮಳೆಯಿಂದ  ನದಿಗಳು ತುಂಬಿ ಹರಿಯುತ್ತಿದ್ದು, ಸಂತ್ರಸ್ತರಲ್ಲಿ ಮತ್ತೆ ಪ್ರವಾಹ ಭೀತಿ ಕಾಡುತ್ತಿದೆ.
ಕಳೆದ ವರ್ಷದ ಅಗಸ್ಟ್ ತಿಂಗಳಲ್ಲಿ ಸಂಭವಿಸಿದ ಭಾರಿ ಪ್ರಮಾಣದ ನದಿಗಳ ಪ್ರವಾಹಕ್ಕೆ ತತ್ತರಿಸಿದ್ದ ಮಾರ್ಕಂಡೇಯ, ಘಟಪ್ರಭಾ ನದಿ ತೀರದ ಹಳ್ಳಿಗಳ ಜನರು ಮತ್ತೆ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಸೂರು ಕಟ್ಟಿಕೊಳ್ಳುತ್ತಿರುವ ನಿರಾಶ್ರಿತರು ಮತ್ತೆ ಪ್ರವಾಹದ ಹೊಡೆತದಿಂದ ಕಂಗಾಲಾಗಿದ್ದಾರೆ.
ಘಟಪ್ರಭಾ ಜಲಾನಯನ ಪ್ರದೇಶ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಭರ್ಜರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹಿಡಕಲ್ ಜಲಾಶಯ ಹಾಗೂ ಶಿರೂರು ಜಲಾಶಯ, ಬಳ್ಳಾರಿನಾಲಾಗಳಿಂದ ಸುಮಾರು ೭೦ಕ್ಯೂಸೇಕ್ಸ್ ನೀರು ಹರಿಬಿಟ್ಟಿದ್ದು, ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳು ಉಕ್ಕಿಹರಿಯುತ್ತಿವೆ. ಪ್ರವಾಹದಿಂದಾಗಿ ಹಲವಾರು ಸೇಲುವೆಗಳು ಮುಳುಗಡೆಯಾಗಿ, ಜನಸಂಚಾರ ಅಸ್ಥವ್ಯಸ್ತವಾಗಿದೆ.
ಪ್ರಮುಖ ಸೇತುವೆಗಳು ಜಲಾವೃತ: ಮಾರ್ಕಂಡೇಯ ಹಾಗೂ ಘಟಪ್ರಭಾ ನದಿಗಳ ಹರಿವು ಹೆಚ್ಚಾಗಿರುವದಿಂದ ನರಗುಂದ ಸಂಕೇಶ್ವರ ರಾಜ್ಯ ಹೆದ್ದಾರಿಯ ಲೋಳಸೂರ ಸೇತುವೆ ಸಂಪೂರ್ಣ ಜಲಾವೃತವಾಗಿದ್ದು, ವಾಹನಗಳ ಸಂಚಾರಕ್ಕೆ ನಿರ್ಭಂದ ಹೇರಲಾಗಿದೆ. ಗೋಕಾಕ ತಾಲೂಕಿನ ಅಂಕಲಗಿ, ಉದಗಟ್ಟಿ, ಗೋಕಾಕ ನಗರದಿಂದ ಸಂಪರ್ಕ ಕಲ್ಪಿಸುವ ಶಿಂಗಳಾಪೂರ ಬ್ರಿಡ್ಜ್ ಕಂ ಬ್ಯಾರೇಜ್ ಸೇತುವೆ. ಮೂಡಲಗಿ ತಾಲೂಕಿನ ಸುಣಧೋಳಿ, ಕಮಲದಿನ್ನಿ, ಹುಣಶ್ಯಾಳ ಪಿವೈ, ಢವಳೇಶ್ವರ, ಅವರಾದಿ ಸೇತುವೆ ಸೇರಿ ಎಂಟು ಸೇತುವೆಗಳು ಜಲಾವೃತಗೊಂಡಿವೆ.
ನದಿತೀರದ ಜನರು ಸುರಕ್ಷಿತ ಸ್ಥಳಗಳಿಗೆ: ಗೋಕಾಕ ಹಾಗೂ ಮೂಡಲಗಿ ತಾಲೂಕಿನಲ್ಲಿ ಮತ್ತೆ ಎದುರಾಗಿರುವ ಪ್ರವಾಹಕ್ಕೆ ತಾಲೂಕಾಡಳಿತಗಳು ಜನರ ರಕ್ಷಣೆಗೆ ಸಜ್ಜಾಗಿದ್ದು, ತಾಲೂಕಿನ ಘಟಪ್ರಭಾ ನದಿ ತೀರದ ಮುಳಗಡೆ ಪ್ರದೇಶಗಳಾದ ಶಿಂಗಳಾಪೂರ, ಲೋಳಸೂರ, ಅಡಿಬಟ್ಟಿ, ಮೆಳವಂಕಿ, ಉದಗಟ್ಟಿ, ಕಲಾರಕೊಪ್ಪ, ಹಡಗಿನಾಳ ಹಾಗೂ ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ, ತಿಗಡಿ, ಮುಸಗುಪ್ಪಿ, ಪಟಗುಂದಿ, ಕಮಲದಿನಿ, ಸುಣಧೋಳಿ, ಭೈರನಟ್ಟಿ, ಮುನ್ಯಾಳ, ಬೀಸನಕೊಪ್ಪ, ಢವಳೇಶ್ವರ, ಅರಳಿಮಟ್ಟಿ, ಅವರಾದಿ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಅಧಿಕಾರಿಗಳು ಸ್ಥಳದಲ್ಲೆ ನೆಲೆಯೂರಿ ಜನರ ರಕ್ಷಣೆ ಮುಂದಾಗಿದ್ದಾರೆ. ಜನರ ರಕ್ಷಣೆಗೆ ಎನ್‌ಡಿಆರ್‌ಎಫ್‌ನ ಒಂದು ತಂಡದೊಂದಿಗೆ ಬೋಟಗಳನ್ನು ಸಿದ್ಧಪಡಿಸಿರುವದಾಗಿ ಮಾಹಿತಿ ಲಭ್ಯವಾಗಿದೆ.
ಅಧಿಕಾರಿಗಳಿಂದ ಜಾಗೃತಿ: ಘಟಪ್ರಭಾ ನದಿಯ ಪ್ರವಾಹದಿಂದ ಮುಳುಗಡೆಯಾಗಲಿರುವ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜನರು ಎಚ್ಚರಿಕೆಯಿಂದಿರಲು ಹಾಗೂ ತಮ್ಮ ಅಗತ್ಯವಸ್ತುಗಳ ಜೊತೆಗೆ ಸುರಕ್ಷಿತ ಸ್ಥಳಕ್ಕೆ ಸಾಗುವಂತೆ ಧ್ವನಿ ವರ್ಧಕಗಳ ಮೂಲಕ ಮನವಿ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಪೋಟೊ  ಮಾಹಿತಿ –
ಗೋಕಾಕ: ನರಗುಂದ ಸಂಕೇಶ್ವರ ರಾಜ್ಯ ಹೆದ್ದಾರಿಯ ಲೋಳಸೂರ ಸೇತುವೆ ಸಂಪೂರ್ಣ ಜಲಾವೃತ್ತಗೊಂಡಿರುವದು.

ಗೋಕಾಕ: ನಗರದ ಹಳೆ ದನಗಳ ಪೇಟೆ ಪ್ರವಾಹದಲ್ಲಿ ಮುಳುಗಡೆಯಾಗಿರುವದು.

ಗೋಕಾಕ: ನಗರದ ಮಾರ್ಕಂಡೇಯ ನದಿಯ ಚಿಕ್ಕಹೊಳಿ ಸೇತುವೆ ಮುಳುಗಡೆಯ ಭೀತಿಯಲ್ಲಿರುವದು.

ಗೋಕಾಕ: ನಗರದ ಕುಂಬಾರಗಲ್ಲಿಯಲ್ಲಿ ಪ್ರವಾಹದ ನೀರು ಆವರಿಸಿದ ಹಿನ್ನೆಲೆ ತಮ್ಮ ಸಾಮಗ್ರಿಗಳ ಜೊತೆಗೆ ಸಾಗುತ್ತಿರುವ ಜನರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button