ನದಿ ತೀರದ ಗ್ರಾಮಗಳ ಸಾರ್ವಜನಿಕರ ಸುರಕ್ಷತೆಗಾಗಿ ಅಗತ್ಯ ಕ್ರಮ
ಪ್ರಗತಿವಾಹಿನಿ ಸುದ್ದಿ, ಗೋಕಾಕ : ನೆರೆಯ ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಹಿಡಕಲ್ ಜಲಾಶಯವು ಸಂಪೂರ್ಣ ಭರ್ತಿಯಾಗಿದ್ದು, ಈಗಾಗಲೇ ಹಿಡಕಲ್ ಜಲಾಶಯದಿಂದ ಘಟಪ್ರಭಾ ನದಿಗೆ ನೀರು ಹರಿಸಿದ್ದರಿಂದ ನದಿ ತೀರದ ಗ್ರಾಮಗಳ ಸುರಕ್ಷತೆಗಾಗಿ ಅಗತ್ಯವಿರುವ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕಹಾಮ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ.
ಈ ಬಗ್ಗೆ ಪ್ರಕಟಣೆಯೊಂದನ್ನು ಹೊರಡಿಸಿರುವ ಅವರು, ಸುರಿಯುತ್ತಿರುವ ಮಳೆಯಿಂದಾಗಿ ಘಟಪ್ರಭಾ ನದಿಗೆ ಒಟ್ಟು ೭೨೮೦೦ ಕ್ಯೂಸೆಕ್ಸ್ ನೀರು ಬರುತ್ತಿದ್ದರಿಂದ ನದಿ ತೀರದ ಗ್ರಾಮಗಳ ಸಾರ್ವಜನಿಕರಿಗೆ ಮುಂಜಾಗ್ರತೆಗಾಗಿ ಸುರಕ್ಷತಾ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.
ಈಗಾಗಲೇ ಹಿಡಕಲ್ ಜಲಾಶಯದಿಂದ ೩೮೦೦೦ ಕ್ಯೂಸೆಕ್ಸ್, ಹಿರಣ್ಯಕೇಶಿ ನದಿಯಿಂದ ೧೨೦೦೦ ಕ್ಯೂಸೆಕ್ಸ್, ಮಾರ್ಕಂಡೇಯ ನದಿಯಿಂದ ೧೦೮೦೦ ಕ್ಯೂಸೆಕ್ಸ್ ಮತ್ತು ಬಳ್ಳಾರಿ ನಾಲೆಯಿಂದ ೧೨೦೦೦ ಕ್ಯೂಸೆಕ್ಸ್ ನೀರು ಘಟಪ್ರಭಾ ನದಿಗೆ ಬರುತ್ತಿದೆ.
ನದಿ ತೀರದ ಗ್ರಾಮಗಳ ಸಾರ್ವಜನಿಕರ ಸುರಕ್ಷತೆಗಾಗಿ ಟೀಂ ಎನ್‌ಎಸ್‌ಎಫ್, ನೋಡಲ್ ಅಧಿಕಾರಿಗಳು, ಪಿಡಿಓ, ಗ್ರಾಮ ಲೆಕ್ಕಾಧಿಕಾರಿಗಳು, ಪೊಲೀಸ್ ಅಧಿಕಾರಿಗಳು ನದಿ ತೀರದ ಗ್ರಾಮಗಳಿಗೆ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕಡಿಮೆಯಾದರೆ ಘಟಪ್ರಭಾ ನದಿಗೆ ನೀರು ಸಹ ಕಡಿಮೆಯಾಗುತ್ತದೆ. ಅಲ್ಲದೇ ಅಗತ್ಯ ಬಿದ್ದರೆ ಸಾರ್ವಜನಿಕರನ್ನು ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲು ಈಗಾಗಲೇ ೨ ಬೋಟುಗಳ ವ್ಯವಸ್ಥೆ ಮಾಡಲಾಗಿದ್ದು, ಇನ್ನೆರಡು ಬೋಟುಗಳು ಸಾರ್ವಜನಿಕರ ಸುರಕ್ಷತೆಗಾಗಿ ಮೀಸಲಿಡಲಾಗಿದೆ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ಘಟಪ್ರಭಾ ನದಿಯಿಂದ ೨.೨೦ ಲಕ್ಷ ಕ್ಯೂಸೆಕ್ಸ್ ನೀರು ಬಂದಿದ್ದರಿಂದ ನದಿ ತೀರದ ೨೯ ಗ್ರಾಮಗಳು ಸಂಪೂರ್ಣ ಜಲಾವ್ರತಗೊಂಡಿದ್ದವು. ನೂರಾರು ಕೋಟಿ ರೂ.ಗಳ ಸಾರ್ವಜನಿಕರ ಆಸ್ತಿ-ಪಾಸ್ತಿಗೆ ಹಾನಿ ಉಂಟಾಗಿತ್ತು.
ಟೀಂ ಎನ್‌ಎಸ್‌ಎಫ್ ಈಗಾಗಲೇ ನದಿ ತೀರದ ಗ್ರಾಮಗಳಿಗೆ ತೆರಳಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಈ ತಂಡದ ಜೊತೆಯಲ್ಲಿ ಅಧಿಕಾರಿಗಳು ಸಹ ತೆರಳಿದ್ದಾರೆ. ಈಗಾಗಲೇ ನದಿಗೆ ನೀರು ಹರಿಯುತ್ತಿರುವುದರಿಂದ ಬೆಳಗಾವಿ, ವಿಜಯಪುರ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಸಂಕೇಶ್ವರ -ಸಂಗಮ ರಾಜ್ಯ ಹೆದ್ದಾರಿಯ ಲೋಳಸೂರ ಸೇತುವೆ ಸಂಪೂರ್ಣ ಜಲಾವ್ರತಗೊಂಡಿದ್ದು, ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಗಾಬರಿಯಾಗಬೇಡಿ : ಈಗಾಗಲೇ ಘಟಪ್ರಭಾ ನದಿಗೆ ೭೨೮೦೦ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದ್ದರಿಂದ ಯಾರೂ ಆತಂಕಗೊಳ್ಳಬೇಡಿ. ಕಳೆದ ವರ್ಷ ಮಳೆ ಹಾಗೂ ಪ್ರವಾಹದಿಂದಾಗಿ ನದಿ ತೀರದ ಗ್ರಾಮಗಳು ಸಂಪೂರ್ಣ ಜಲಾವ್ರತಕ್ಕೆ ಒಳಗಾಗಿದ್ದವು. ಇನ್ನೆರಡು ದಿನ ಮಳೆಯ ಪ್ರಮಾಣ ಕಡಿಮೆಯಾದರೆ ನೀರಿನ ಪ್ರಮಾಣವು ಕೂಡ ಕಡಿಮೆಯಾಗುತ್ತದೆ. ಮುಳುಗಡೆಯಾಗುವ ಯಾವುದೇ ಆತಂಕಗಳು ಸೃಷ್ಟಿಯಾಗುವುದಿಲ್ಲ. ಯಾವುದೇ ವದಂತಿಗಳಿಗೆ ನದಿ ತೀರದ ಗ್ರಾಮಗಳ ಸಾರ್ವಜನಿಕರು ಕಿವಿಗೊಡಬಾರದು. ನಿಮ್ಮೊಂದಿಗೆ ಸದಾ ನಾವಿದ್ದೇವೆ. ಸುಳ್ಳು ವದಂತಿಗಳಿಂದ ಗಾಬರಿಗೊಳ್ಳದೇ ಧೈರ್ಯದಿಂದಿರಿ ಎಂದು ಬಾಲಚಂದ್ರ ಜಾರಕಿಹೊಳಿ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ