ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಡ್ರಗ್ಸ್ ಪ್ರಕರಣ ವಿಚಾರ ಇದೀಗ ರಾಜಕೀಯ ನಾಯಕರ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಡ್ರಗ್ಸ್ ದಂದೆಕೋರರೇ ಸರ್ಕಾರ ಬೀಳಿಸಿದರು ಎಂಬ ಮಾಜಿ ಸಿಎಂ ಎಚ್‌ಡಿಕೆ ಆರೋಪ ಡಿಸಿಎಂ ಲಕ್ಷ್ಮಣ ಸವದಿ ಅವರಿಗೆ ನಗು ತರಿಸಿತ್ತಂತೆ. ಬ್ಲೂ ಫಿಲಂ ನೋಡುವ ಅಡಿಕ್ಷನ್ (ವ್ಯಸನ) ಇರುವವರು ಈ ರಾಜ್ಯದ ಡಿಸಿಎಂ ಆಗುತ್ತಿದ್ದಾರೆ ಎಂದಾಗ ರಾಜ್ಯದ ಜನರಿಗೇ ನಗು, ದುಃಖ ಬಂದಿತ್ತು. ಡ್ರಗ್ಸ್ ಆಗಲಿ, ಬ್ಲೂ ಫಿಲಂ ಆಗಲಿ ಎಲ್ಲವೂ ವ್ಯವಸನವೇ ಎಂದು ಮಾಜಿ ಸಚಿವ ಸಾ ರಾ ಮಹೇಶ್ ಡಿಸಿಎಂ ಸವದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಾ ರಾ ಮಹೇಶ್, ಡ್ರಗ್ಸ್ ಮಾಫಿಯಾ ಬಗ್ಗೆ ಮೊದಲು ಧ್ವನಿ ಎತ್ತಿದ್ದೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. ಈ ಜಾಲದಲ್ಲಿ ಸಿಕ್ಕಿ ಬೀಳುತ್ತಿರುವವರು ಬಿಜೆಪಿಯ ಜೊತೆಗೆ ಅಂತರಂಗ-ಬಹಿರಂಗ ಸಖ್ಯ ಉಳ್ಳವರೇ ಆಗಿರುವುದರಿಂದ ಕನಲಿ ಹೋಗಿರುವ ಕೃಷಿ ಸಚಿವ ಬಿ ಸಿ ಪಾಟೀಲರು ಬಾಲ ಸುಟ್ಟ ಬೆಕ್ಕಿನಂತೆ ಆಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಪೂರ್ವಾಶ್ರಮದಲ್ಲಿ ಪೊಲೀಸ್ ಇಲಾಖೆಯಲ್ಲಿ ಇದ್ದ ಪಾಟೀಲರಿಗೆ ಇಂತಹ ಮಾಫಿಯಾಗಳ ಬಗ್ಗೆ ಅರಿವಿಲ್ಲ ಎಂದರೆ ಅವರು ಪಾಲಿಸಿದ ವೃತ್ತಿನಿಷ್ಠೆ ಏನೆಂಬುದು ನಗೆಪಾಟಲಿನ ಸಂಗತಿ ಅಷ್ಟೇ ಅಲ್ಲ, ಎಂತೆಂತಹ ಊಸರವಳ್ಳಿಗಳು ಪೊಲೀಸ್ ಇಲಾಖೆಯಲ್ಲಿ ಇದ್ದರು ಎಂಬ ಬಗ್ಗೆ ಮರುಕವಿದೆ. ಕ್ರಿಕೆಟ್ ಬೆಟ್ಟಿಂಗ್, ಡ್ರಗ್ ಮಾಫಿಯಾ ಮಟ್ಟಹಾಕಲು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಬಿಸಿ ಮುಟ್ಟಿಸಿದ್ದರಿಂದಲೇ ದೇಶಾಂತರ ಓಡಿಹೋಗಿ ತಲೆಮರೆಸಿಕೊಂಡಿದ್ದವರು ಜಾಮೀನು ಪಡೆದು ಬಂದಿದ್ದು, ಇದಕ್ಕೆ ತೆರೆಮರೆಯಲ್ಲಿ ನಿಂತು ವ್ಯವಸ್ಥೆ ಮಾಡಿದವರು ಯಾರು ಎಂಬುದು ಗುಟ್ಟಾಗಿ ಉಳಿದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ