ಸುರೇಶ ಅಂಗಡಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವಾರು ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಲಕ್ಷ್ಮಿ ಹೆಬ್ಬಾಳಕರ್ ಶೋಕ
ಸುರೇಶ ಅಂಗಡಿ ಕೊರೋನಾ ಸೋಂಕಿನಿಂದ ಮೃತಪಟ್ಟಿರುವ ವಿಷಯ ಕೇಳಿ ಆಘಾತವಾಯಿತು. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸತತ 4 ಬಾರಿ ಆಯ್ಕೆಯಾಗಿ, ಕೇಂದ್ರದಲ್ಲಿ ಸಚಿವರಾಗಿ ಅವರು ಉತ್ತಮ ಕೆಲಸ ಮಾಡಿದ್ದರು. ಬೆಳಗಾವಿ ಸೇರಿದಂತೆ ರಾಜ್ಯಕ್ಕೆ ರೈಲ್ವೆ ಇಲಾಖೆಯಿಂದ ಹಲವಾರು ಮಹತ್ವದ ಕೊಡುಗೆ ನೀಡಿದ್ದರು. ಶಿಕ್ಷಣ ಕ್ಷೇತ್ರಕ್ಕೂ ಅವರು ಅಪಾರ ಕೊಡುಗೆ ನೀಡಿದ್ದರು. ಅವರ ಅನಿರೀಕ್ಷಿತ ನಿಧನ ಇಡೀ ದೇಶಕ್ಕೆ ದೊಡ್ಡ ಆಘಾತ ನೀಡಿದೆ ಎಂದು ಲಕ್ಷ್ಮಿ ಹೆಬ್ಬಾಳಕರ್ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಸುರೇಶ ಅಂಗಡಿ ಬೆಳಗಾವಿಗೆ ಏನಾದರೂ ದೊಡ್ಡ ಕೊಡುಗೆ ನೀಡಬೇಕೆಂದು ಕನಸು ಕಂಡಿದ್ದರು. ಆ ದಿಸೆಯಲ್ಲಿ ರೈಲ್ವೆ ಇಲಾಖೆ ಮೂಲಕ ಹಲವಾರು ಕೆಲಸ ಮಾಡಿದ್ದರು. ಅವರ ನಿಧನದ ಸುದ್ದಿ ನನಗೆ ನಂಬಲಿಕ್ಕೂ ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದ್ದಾರೆ.
ಬಾಲಚಂದ್ರ ಜಾರಕಿಹೊಳಿ ಸಂತಾಪ
ಕೇಂದ್ರ ರೈಲ್ವೇ ಖಾತೆಯ ಸಹಾಯಕ ಸಚಿವ ಸುರೇಶ ಅಂಗಡಿ ಅವರ ನಿಧನಕ್ಕೆ ಕೆಎಂಎಫ್ ಅಧ್ಯಕ್ಷ ಮತ್ತು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.
ಬುಧವಾರ ರಾತ್ರಿ ಕೊರೋನಾ ಸೋಂಕಿನಿಂದ ಮೃತಪಟ್ಟಿರುವ ವಿಷಯ ಕೇಳಿ ದಿಗ್ಭ್ರಮೆಗೊಂಡೆ. ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದು ನಿಜಕ್ಕೂ ದುಃಖದ ಸಂಗತಿ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ೨೦೦೪ ರಿಂದ ಸತತ ೪ ಬಾರಿ ಸಂಸದರಾಗಿ ಆಯ್ಕೆಯಾಗಿ ೨೦೧೯ ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ರೈಲ್ವೇ ಖಾತೆಯಂತಹ ಮಹತ್ವದ ಜವಾಬ್ದಾರಿ ವಹಿಸಿಕೊಂಡಿದ್ದರು. ಇವರ ಅಗಲಿಕೆಯಿಂದ ನಾಡಿಗೆ ಹಾಗೂ ಪಕ್ಷಕ್ಕೆ ಅಪಾರ ಹಾನಿಯಾಗಿದೆ ಎಂದು ಸಂತಾಪ ಸೂಚಕದಲ್ಲಿ ಅವರು ಹೇಳಿದ್ದಾರೆ.
ಸುರೇಶ ಅಂಗಡಿ ಅವರು ಲೋಕಸಭಾ ಸದಸ್ಯರಾಗಿ, ಕೇಂದ್ರ ಸಚಿವರಾಗಿ ರಾಜ್ಯಕ್ಕೆ ಅಮೂಲ್ಯ ಕೊಡುಗೆ ನೀಡಿದ್ದಾರೆ. ದೇಶಾಧ್ಯಂತ ಕಿಸಾನ್ ರೈಲು ವಿಸ್ತರಣೆ ಮಾಡಿರುವುದು. ಪ್ರಯಾಣ ಕರ ಬಹುದಿನಗಳ ಬೇಡಿಕೆಯಾಗಿದ್ದ ಬೆಳಗಾವಿ-ಕಿತ್ತೂರ-ಧಾರವಾಡ ಹೊಸ ಮಾರ್ಗ ತರುವಲ್ಲಿ ಅಂಗಡಿ ಅವರ ಪಾತ್ರ ಮಹತ್ವದ್ದಾಗಿದೆ. ಶೈಕ್ಷಣ ಕ, ಔದ್ಯೋಗಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ವಿಶಿಷ್ಟವಾಗಿ ಸೇವೆ ಸಲ್ಲಿಸಿದ್ದ ಅಂಗಡಿ ಅವರು ಸೌಜನ್ಯದ ಸಾಕಾರ ಮೂರ್ತಿಯಾಗಿದ್ದರು ಎಂದು ಹೇಳಿದ್ದಾರೆ.
ಪಕ್ಷಕ್ಕಾಗಿ ಅಂಗಡಿ ಅವರು ಸಲ್ಲಿಸಿದ ಸೇವೆ ಅನನ್ಯವಾಗಿದೆ. ಇವರ ಅಗಲಿಕೆಯಿಂದ ನಾನು ಉತ್ತಮ ಸ್ನೇಹಿತನೊಬ್ಬನನ್ನು ಕಳೆದುಕೊಂಡಂತಾಗಿದೆ. ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿ ನೀಡಲಿ. ಅವರ ಕುಟುಂಬದಲ್ಲಾದ ದುಃಖದಲ್ಲಿ ನಾವು ಸಹಭಾಗಿಯಾಗಿ ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿ ದೇವರು ನೀಡಲೆಂದು ಪ್ರಾರ್ಥಿಸುವುದಾಗಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ರಮೇಶ ಜಾರಕಿಹೊಳಿ ಶೋಕ
ಸುರೇಶ ಅಂಗಡಿ ನಿಧನಕ್ಕೆ ರಾಜ್ಯ ಜಲಸಂಪನ್ಮೂಲ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಸಂತಾಪ ವ್ಯಕ್ತಪಡಿಸಿದ್ದಾರೆ. ಸುರೇಶ ಅಂಗಡಿ ನನ್ನ ಆತ್ಮೀಯ ಸ್ನೇಹಿತರಾಗಿದ್ದರು. ಅವರೊಂದಿಗೆ ಹಲವಾರು ಸಭೆಗಳನ್ನು ನಡೆಸಿ ಬೆಳಗಾವಿ ಅಭಿವೃದ್ಧಿಗೆ ಕ್ರಮ ತೆಗೆದುಕೊಂಡಿದ್ದೆ. ಅವರ ನಿಧನದ ಸುದ್ದಿ ಕೇಳಿ ದಿಗ್ಭ್ರಮೆಯಾಗಿದೆ ಎಂದಿದ್ದಾರೆ.
ಡಾ.ಪ್ರಭಾಕರ ಕೋರೆ ಸಂತಾಪ
ಸುರೇಶ ಅಂಗಡಿ ನಿಧನಕ್ಕೆ ರಾಜ್ಯಸಭೆಯ ಮಾಜಿ ಸದಸ್ಯ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಂಗಡಿಯವರ ನಿಧನದ ಸುದ್ದಿ ಆಘಾತವನ್ನುಂಟುಮಾಡಿದೆ. ಬೆಳಗಾವಿಗೆ ದೊಡ್ಡ ನಷ್ಟವಾಗಿದೆ. ವಯಕ್ತಿಕವಾಗಿ ನನಗೂ ಅವರ ನಿಧನದಿಂದ ಅಪಾರ ನಷ್ಟವುಂಟಾಗಿದೆ. ರೈಲ್ವೆ ಸಚಿವರಾಗಿ ಬೆಳಗಾವಿಗೆ ದೊಡ್ಡ ಕೊಡುಗೆ ನೀಡಿದ್ದರು. ಇನ್ನೂ ಅನೇಕ ಯೋಜನೆಗಳನ್ನು ಜಾರಿಗೊಳಿಸುವ ಕನಸು ಹೊಂದಿದ್ದರು ಎಂದು ಕೋರೆ ಹೇಳಿದ್ದಾರೆ.
ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ಮಹಾಂತೇಶ ಕವಟಗಿಮಠ, ಆನಂದ ಮಾಮನಿ, ಸಂಸಂದ ಅಣ್ಣಾಸಾಹೇಬ ಜೊಲ್ಲೆ, ಸಚಿವೆ ಶಶಿಕಲಾ ಜೊಲ್ಲೆ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಬಿಜೆಪಿ ಮುಖಂಡ ಕಿರಣ ಜಾಧವ ಮೊದಲಾದವರು ಸಹ ಸಂತಾಪ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ