Kannada NewsKarnataka NewsLatest

ಡಾ.ಪ್ರಭಾಕರ ಕೋರೆ ಸೇರಿದಂತೆ ಹಲವರ ಕಂಬನಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬುಧವಾರ ಅಗಲಿದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರಿಗೆ ರಾಜ್ಯಸಭೆಯ ಮಾಜಿ ಸದಸ್ಯ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಬಿಜೆಪಿ ರಾಜ್ಯ ಒಬಿಸಿ ಕಾರ್ಯದರ್ಶಿ ಕಿರಣ ಜಾಧವ ಮತ್ತಿತರರು ಶೃದ್ಧಾಂಜಲಿ ಸಲ್ಲಿಸಿದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಉಜ್ವಲಾ ಬಡವಣಾಚೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

  ಡಾ.ಕೋರೆ ಸಂದೇಶ

ಡಾ.ಪ್ರಭಾಕರ ಕೋರೆ ಶೋಕ ಸಂದೇಶ ನೀಡಿ, ಸಜ್ಜನ ರಾಜಕಾರಣಿ, ಜನನಾಯಕ, ಶಿಕ್ಷಣ ಪ್ರೇಮಿ, ಸ್ನೇಹಪರಜೀವಿ ರಾಜ್ಯ ರೇಲ್ವೆ ಸಚಿವರಾಗಿದ್ದ ಸುರೇಶ ಅಂಗಡಿ ಅವರು ನಿಧನರಾಗಿರುವುದು ಸಮಸ್ತ ನಾಡಿಗೆ ತುಂಬಲಾರದ ದುಃಖವನ್ನುಂಟು ಮಾಡಿದೆ  ಡಾ.ಪ್ರಭಾಕರ ಕೋರೆ ಕಂಬನಿ ಮಿಡಿದಿದ್ದಾರೆ.
ಸತತ ನಾಲ್ಕು ಸಲ ಸಂಸದರಾಗಿ ಆಯ್ಕೆಗೊಂಡಿದ್ದ ಸುರೇಶ ಅಂಗಡಿ ಅವರು ಬೆಳಗಾವಿಯ ಜನಪ್ರಿಯ ಸಂಸದರೆನಿಸಿಕೊಂಡಿದ್ದರು. ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಜನರ ಬಹುದಿನಗಳ ಕನಸನ್ನು ನನಸಾಗಿಸಿದ್ದರು. ಕೆಎಲ್‌ಇ ಸಂಸ್ಥೆಯ ಚೊಚ್ಚಲ ಅಂಗ ಸಂಸ್ಥೆ ಜಿ.ಎ. ಹೈಸ್ಕೂಲಿನ ಹಳೆಯ ವಿದ್ಯಾರ್ಥಿಯಾಗಿದ್ದ ಸುರೇಶ ಅಂಗಡಿಯವರು ಎಸ್.ಎಸ್.ಎಲ್.ಸಿ. ಪರೀಕ್ಷೆಯ ಮುನ್ನಾದಿನ ಶಾಲೆಗೆ ಭೇಟಿ ನೀಡಿ ತಮ್ಮ ಹಳೆಯ ದಿನಗಳನ್ನು ಸ್ಮರಿಸಿಕೊಂಡಿದ್ದರು.
ಇತ್ತೀಚೆಗೆ ಕೆಎಲ್‌ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ‘ಕೋವಿಡ್-೧೯ ಕೇಂದ್ರ’ವನ್ನು ಸುರೇಶ ಅಂಗಡಿ ಅವರು ಉದ್ಘಾಟಿಸಿದ್ದರು. ಸಂಸ್ಥೆಯ ಹಲವಾರು ಸಮಾರಂಭಗಳಲ್ಲಿ ಪಾಲ್ಗೊಂಡಿದ್ದ ಅವರು ಸಂಸ್ಥೆಯ ಬೆಳವಣಿಗೆಯನ್ನು ಹತ್ತಿರದಿಂದ ಕಂಡು ಪ್ರಶಂಸನೀಯ ನುಡಿಗಳನ್ನಾಡುತ್ತಿದ್ದರು. ದೇಶ ಕಂಡ ಅಪರೂಪದ ರಾಜಕಾರಣಿಗಳಾಗಿದ್ದ ಅಂಗಡಿ ಅವರು ತಮ್ಮ ಸೌಮ್ಯ ಹಾಗೂ ಸರಳ ಸ್ವಭಾವಗಳಿಂದ ಎಲ್ಲರಿಗೂ ಆಕರ್ಷಿತರಾಗಿದ್ದರು. ಹಾಗಾಗಿ ಅವರ ಸ್ನೇಹ ಬಳಗವು ಹಿರಿದಾಗಿತ್ತು.
ಬಿಜೆಪಿಯ  ನಿಷ್ಠಾವಂತ ಸಂಘಟಕರಾಗಿ ಬೆಳಗಾವಿ ಗಡಿಜಿಲ್ಲೆಯಲ್ಲಿ ತಳಮಟ್ಟದಿಂದ ಪಕ್ಷವನ್ನು ಬಲವರ್ಧನೆಗೊಳಿಸಿದರು. ಹಿಂದೂಧರ್ಮದ ಕಟ್ಟಾ ಪ್ರತಿಪಾದಕರಾಗಿದ್ದ ಅವರು ಮಠಮಾನ್ಯಗಳ ಬಗ್ಗೆ ಪ್ರೀತಿಗೌರವಾದರಗಳನ್ನು ಹೊಂದಿದ್ದರು. ಅಂತೆಯೇ ವೀರಶೈವ ಲಿಂಗಾಯತ ಧರ್ಮವನ್ನು ಸಂಘಟಿಸುವಲ್ಲಿ ಮಹತ್ವದ ಕಾರ್ಯಮಾಡಿದರು. ನನ್ನೊಂದಿಗೆ ಆಪ್ತ ಹಾಗೂ ನಿಕಟ ಸಂಪರ್ಕ ಹೊಂದಿದ್ದ ಸುರೇಶ ಅಂಗಡಿಯವರು ಯಾವುದೇ ಕೆಲಸಗಳನ್ನು ಮಾಡಬೇಕಾದರೂ ಮಾರ್ಗದರ್ಶನ ಪಡೆಯುವ ಹಾಗೂ ನನ್ನೊಂದಿಗೆ ಜೊತೆಯಾಗುವ ಅವರ ಸ್ನೇಹಪರತೆ ನನಗೆ ಸಂತೋಷ ಹಾಗೂ ಹೆಮ್ಮೆಯನ್ನುಂಟು ಮಾಡುತ್ತಿತ್ತು. ನನ್ನ ಸಹೋದರ ಸಮಾನರಾಗಿದ್ದ ಸುರೇಶ ಅಂಗಡಿ ಅವರು ಅಕಾಲಿಕ ನಿಧನ ಹೊಂದಿರುವುದು ತೀವ್ರ ಆಘಾತವನ್ನುಂಟು ಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ. ಅವರು ೯೦ ವರ್ಷದ ತಾಯಿಯನ್ನು, ಅಪಾರ ಕುಟುಂಬವರ್ಗದವರನ್ನು ಅಗಲಿದ್ದಾರೆ. ಅವರೆಲ್ಲರಿಗೂ ದುಃಖವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಭಗವಂತನು ಕರುಣಿಸಲೆಂದು ಭಕ್ತಿಯಿಂದ ಪ್ರಾರ್ಥಿಸುತ್ತೇನೆ. ಕೆಎಲ್‌ಇ ಸಂಸ್ಥೆಯ ಸಮಸ್ತ ಕುಟುಂಬದ ಪರವಾಗಿ ಭಾವಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸುತ್ತೇನೆ ಎಂದು ಡಾ.ಪ್ರಭಾಕರ ಕೋರೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈಲ್ವೆ ಸಚಿವರಾಗಿ ಬೆಳಗಾವಿಗೆ ದೊಡ್ಡ ಕೊಡುಗೆ ನೀಡಿದ್ದ ಅಂಗಡಿ; ಹಲವರ ಕಂಬನಿ

ಬೆಂಗಳೂರು – ಬೆಳಗಾವಿ ರೈಲಿಗೆ ಸುರೇಶ ಅಂಗಡಿ ಹೆಸರಿಡಲಿ – ಪ್ರಗತಿ ಮೀಡಿಯಾ ಹೌಸ್ ಉದ್ಘಾಟಿಸಿದ್ದ ಅಂಗಡಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button