Kannada NewsKarnataka NewsLatest

ಧೈರ್ಯದಿಂದ ಪಕ್ಷ ಸಂಘಟನೆಯಲ್ಲಿ ತೊಡಗಿ, ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು

ಪ್ರಗತಿವಾಹಿನಿ ಸುದ್ದಿ, ಗೋಕಾಕ: ಯಾವುದೇ ಒತ್ತಡಕ್ಕೆ ಮಣಿಯದೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಧೈರ್ಯದಿಂದ ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಗೋಕಾಕ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರಿಗೆ ಸೂಚಿಸಿದರು.
ಸೋಮವಾರದಂದು ಗೋಕಾಕ ಮತಕ್ಷೇತ್ರದ ಅಂಕಲಗಿ-ಅಕ್ಕತಂಗೇರಹಾಳ ಮತ್ತು ಖನಗಾಂವ್ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ಕಳೆದ ಡಿಸೆಂಬರ್ ತಿಂಗಳಿನಲ್ಲಿ ನಡೆದ ಉಪಚುನಾವಣೆ ನಂತರ ಕೊರೋನಾ ಹಿನ್ನಲೆಯಲ್ಲಿ ಕಾರ್ಯಕರ್ತರ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಇಂದು ಪಕ್ಷದ ಕಾರ್ಯಕರ್ತರನ್ನು ಭೇಟಿಯಾಗುವ ಅವಕಾಶ ಸಿಕ್ಕಿದೆ ಎಂದರು.
ಗೋಕಾಕ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿದೆ. ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಎದುರಿಸಲು ಕಾರ್ಯಕರ್ತರು ಸಜ್ಜುಗೊಂಡು ಪಕ್ಷದ ಗೆಲುವಿಗೆ ಶ್ರಮಿಸಬೇಕು. ತಮ್ಮ ಯಾವುದೇ ಕೆಲಸವಿದ್ದರು ಒಂದು ದಿನ ಗೋಕಾಕದ ಹಿಲ್ ಗಾರ್ಡನ್ ಕಚೇರಿಯಲ್ಲಿ ಮತ್ತು ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಅಹವಾಲು ಸ್ವೀಕರಿಸುತ್ತೇನೆ ಎಂದರು.
ಯಾವುದೇ ಒತ್ತಡಕ್ಕೆ ಮಣಿಯದೆ ಪಕ್ಷದ ಕಾರ್ಯಕರ್ತರು ಧೈರ್ಯದಿಂದ ಪಕ್ಷದ ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಯಾರಿಗೂ ತೊಂದರೆಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದಾಗಿದೆ. ಸದಾ ನಿಮ್ಮ ಬೆಂಬಲಕ್ಕೆ ನಾನು ಇರುತ್ತೇನೆ ಎಂದು ಭರವಸೆ ನೀಡಿದರು.
ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ಪಕ್ಷವೇ ಅಂತಿಮ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತರ ಮೇಲೆ ಇದೆ. ಹಾಗಾಗಿ ಕಾರ್ಯಕರ್ತರು ಇಂದಿನಿಂದಲೇ ಪಕ್ಷದ ಸಂಘಟನೆಗೆ ಸಜ್ಜಾಗಬೇಕು ಎಂದರು.
ಈ ಸಂದರ್ಭದಲ್ಲಿ ಗೌಡಪ್ಪ ಹೊಳೆಯಾಚಿ, ಕೆ.ಎಲ್. ತಳವಾರ್, ಶಂಕರ ಗಿಡ್ಡನವರ, ಅಣ್ಣಪುರ್ಣಾ ನಿರ್ವಾಣಿ, ಬಿ.ಆರ್. ಪಾಟೀಲ, ವಿವೇಕ ಜತ್ತಿ ಪಾಂಡು ಮನ್ನಿಕೇರಿ, ಶಂಕರ ಹುರಕಡ್ಲಿ, ನಿಂಗಪ್ಪಾ ಬುಳ್ಳಿ, ಇಮ್ರಾನ್ ಶಿವಾಪುರೆ ಸೇರಿ ಇನ್ನಿತರು ಮುಖಂಡರು ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button