
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಲಾಕ್ ಡೌನ್ ಸಮಯದಲ್ಲಿ ಮಹಿಳಾ ಸಾಂತ್ವನ ಕೇಂದ್ರಗಳನ್ನು ಮುಚ್ಚಿ, ಮದ್ಯದಂಗಡಿಗಳನ್ನು ತೆರೆದು ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಳಕ್ಕೆ ಸರ್ಕಾರವೇ ಅವಕಾಶ ಮಾಡಿಕೊಟ್ಟಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ರಾಜ್ಯದ ಪ್ರತಿ ಜಿಲ್ಲೆ ಹಾಗೂ ತಾಲ್ಲೂಕುಗಳಲ್ಲಿ ಆರಂಭಗೊಂಡಿದ್ದ ಸಾಂತ್ವನ ಕೇಂದ್ರಗಳ ಸಿಬ್ಬಂದಿಗೂ ವೇತನವಿಲ್ಲ. ದೂರು ದುಮ್ಮಾನ ಪರಿಹರಿಸುವವರು ಯಾರು? ಕೌಟುಂಬಿಕ ಹಿಂಸಾಚಾರ ನಿಯಂತ್ರಿಸಿ ಮಹಿಳೆಯರು ಮತ್ತು ಮಕ್ಕಳಿಗೆ ರಕ್ಷಣೆ ಒದಗಿಸುವ ವಿಶ್ವಸಂಸ್ಥೆಯ ಆಶಯ ಬದಿಗೊತ್ತಿರುವುದು ಖಂಡನೀಯ. ಕಳೆದ ಎರಡು ದಶಕಗಳಿಂದ ಸಾಂತ್ವನ ಯೋಜನೆ ಅತ್ಯಂತ ಯಶಸ್ವಿಯಾಗಿ ನಡೆಯುತ್ತಿದ್ದು, ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿನ ಸಾಂತ್ವನ ಕೇಂದ್ರಗಳು ಮಹಿಳೆಯರ ಸಮಸ್ಯೆಗಳಿಗೆ ಧ್ವನಿಯಾಗಿ,ಆತ್ಮವಿಶ್ವಾಸ ಮೂಡಿಸುತ್ತಿದ್ದವು.
ಮಹಿಳೆಯರು ಮತ್ತು ಮಕ್ಕಳ ವಿಷಯದಲ್ಲಿ ಸರ್ಕಾರ ಮಾತು ತಪ್ಪಿದೆ. ನೊಂದ ಮಹಿಳೆಯರಿಗೆ ಆಸರೆಯಾಗಿದ್ದ ಸಾಂತ್ವನ ಕೇಂದ್ರಗಳನ್ನು ಮುಂದುವರಿಸುವುದಾಗಿ ಹೇಳಿದ್ದ ರಾಜ್ಯ ಸರ್ಕಾರ, ಈ ಬಗ್ಗೆ ಮೌನಕ್ಕೆ ಶರಣಾಗಿದೆ. ಸಾಂತ್ವನ ಕೇಂದ್ರಗಳನ್ನು ಯಾವುದೇ ಕಾರಣಕ್ಕೂ ಮುಚ್ಚಬಾರದು. ಈ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ