ಪ್ರಗತಿವಾಹಿನಿ ಸುದ್ದಿ, ಮಂಗಳೂರು : ಎರಡು ವರ್ಷಗಳ ಹಿಂದೆ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಮಂಗಳೂರು ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ಭಾಗದ ಪ್ರಾಧ್ಯಾಪಕ ಪ್ರೊ. ಅರಬಿ ಮತ್ತು ದೌರ್ಜನ್ಯದ ಕುರಿತ ವಿವಿ ಆಂತರಿಕ ತನಿಖಾ ಸಮಿತಿ `ಸ್ಪರ್ಷ್’ ನೀಡಿದ ವರದಿಯನ್ನು ಮಹಿಳಾ ಆಯೋಗಕ್ಕೆ ಸಲ್ಲಿಕೆ ಮಾಡದೆ ಪ್ರಕರಣವನ್ನು ಮುಚ್ಚಿಟ್ಟ ಹಿಂದಿನ ಕುಲಸಚಿವ ಪ್ರೊ. ಎ.ಎಂ. ಖಾನ್ ಅವರನ್ನು ವಿವಿ ತಕ್ಷಣ ಸೇವೆಯಿಂದ ವಜಾ ಮಾಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಎಬಿವಿಪಿ ಕಠಿಣ ಹೋರಾಟ ಮುಂದುವರಿಸಲಿದೆ ಎಂದು ಎಬಿವಿಪಿ ರಾಜ್ಯ ಸಹಕಾರ್ಯದರ್ಶಿ ಸಂದೇಶ್ ರೈ ಒತ್ತಾಯಿಸಿದ್ದಾರೆ.
ಲೈಂಗಿಕ ದೌರ್ಜನ್ಯ ನಡೆಸಿದ ಪ್ರೊ ಆರಬಿ ಹಾಗೂ ಇದರ ತನಿಖಾ ವರದಿಯನ್ನು ಆಯೋಗಕ್ಕೆ ಸಲ್ಲಿಸದ ಹಿಂದಿನ ಕುಲಸಚಿವ ಪ್ರೊ. ಎ.ಎಂ. ಖಾನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಂಗಳಗಂಗೋತ್ರಿಯ ವಿವಿ ಕ್ಯಾಂಪಸ್ನ ಆಡಳಿತ ಸೌಧದ ಎದುರು ನಡೆದ ಪ್ರತಿಭಟನೆಯನ್ನು ಉದ್ಧೇಶಿಸಿ ಮಾತನಾಡಿದರು.
ಲೈಂಗಿಕ ಕಿರುಕುಳ ನಡೆದಾಗ ವಿವಿ ಆಡಳಿತಕ್ಕೆ ದೂರು ನೀಡಿದ್ದರು. ಕ್ರಮ ಕೈಗೊಳ್ಳದೇ ಇದ್ದಾಗ ಮಹಿಳಾ ಆಯೋಗಕ್ಕೆ ದೂರು ನೀಡಿದ್ದರು, ಆದರೆ ಮಹಿಳಾ ಆಯೋಗದ ಸೂಚನೆಯ ಮೇರೆಗೆ ಆಂತರಿಕ ತನಿಖೆ ನಡೆದರೂ ಅದರ ವರದಿ ನೀಡದೆ ಕುಲಸಚಿವರು ಆರೋಪಿಯನ್ನು ರಕ್ಷಿಸುವ ಕಾರ್ಯ ಮಾಡಿದ್ದಾರೆ ಇವರ ವಿರುದ್ಧ ಕಠಿಣ ಶಿಕ್ಷೆ ನೀಡಬೇಕು ಎಂದರು.
ಮಂಗಳೂರು ವಿವಿ ಕುಲಪತಿ ಪ್ರೊ| ಪಿ.ಎಸ್. ಯಡಪಡಿತ್ತಾಯ ವಿದ್ಯಾರ್ಥಿಗಳ ಮನವಿ ಸ್ವೀಕರಿಸಿ ಮಾತನಾಡಿ, ಸಿಂಡಿಕೇಟ್ ಸಭೆಯಲ್ಲಿ ಈ ಪ್ರಕರಣ ಚರ್ಚೆ ನಡೆದಿದೆ. ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸಿಂಡಿಕೇಟ್ ಸಭೆ ನಿರ್ಣಯಿಸಿದ್ದು, ಇಂದು ಬೆಳಗ್ಗೆ ಕರ್ತವ್ಯ ಲೋಪಮಾಡಿದ ಪ್ರೊ| ಎ.ಎಂ. ಖಾನ್ ಅವರಿಗೆ ಕಾರಣ ಕೇಳಿ ನೋಟೀಸು ಮಾಡಲಾಗಿದೆ. ಅರಬಿ ಅವರ ವಿರುದ್ಧ ಕೇಳಿ ಬಂದಿರುವ ಆರೋಪಕ್ಕೆ ಕಾನೂನು ತಜ್ಞರ ಅಭಿಪ್ರಾಯದಂತೆ ತಪ್ಪಿತಸ್ಥ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನನ್ನ ಅಧಿಕಾರದ ಅವಧಿಯಲ್ಲಿ ಶಿಕ್ಷಕ, ಶಿಕ್ಷಕೇತರ, ವಿದ್ಯಾರ್ಥಿಗಳು ದುರ್ವರ್ತನೆ ಅಶಿಸ್ತು ತೋರಿಸಿದರೆ ಆವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ವಿವಿಯಲ್ಲಿ ಶೂನ್ಯ ಕಿರುಕುಳ ದಾಖಲಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸಂದರ್ಭ ಎಬಿವಿಪಿ ವಿಭಾಗ ಸಂಘಟನ ಕಾರ್ಯದರ್ಶಿ ಬಸವೇಶ್, ಎಬಿವಿಪಿ ಮಂಗಳೂರು ವಿಭಾಗ ಸಂಚಾಲಕ್ ಆಶಿಶ್ ಅಜ್ಜಿಬೆಟ್ಟು, ಮಂಗಳೂರು ನಗರ ಸಹಕಾರ್ಯದರ್ಶಿಗಳಾದ ನಿಶಾನ್ ಆಳ್ವ ಹಾಗೂ ಶ್ರೇಯಸ್ ರೈ, ಎಬಿವಿಪಿ ಬಂಟ್ವಾಳ ತಾಲೂಕು ಸಂಚಾಲಕ ಹರ್ಷಿತ್ ಕೊಯಿಲ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ದೀಪ್ತಿ ಮಡಿವಾಳ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ