Latest

ರೈತರ ಹೆಸರಿನಲ್ಲಿ ನಕಲಿ ಬಿಲ್; ಜಾಲ ಬೇಧಿಸಿದ ಕೃಷಿ ಇಲಾಖೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇದೇ ಮೊದಲ ಬಾರಿಗೆ ರೈತರ ಹೆಸರಿನಲ್ಲಿ ನಕಲಿ ಬಿಲ್ ತಯಾರಿಸಿ ಸೊಸೈಟಿಗಳ ಜೊತೆ ಶಾಮೀಲಾಗಿ ಯೂರಿಯಾ ರಸಗೊಬ್ಬರ ಅಭಾವ ಸೃಷ್ಟಿ ಮಾಡುತ್ತಿದ್ದ ದೊಡ್ಡಜಾಲವೊಂದು ಪತ್ತೆಯಾಗಿದೆ.

ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೊಡಿಗಿನಬೆಲೆ ಗ್ರಾಮದ ಮರ್ಕೂರಿ ಪಾಲಿಮರ್ಸ್ ಸಂಸ್ಥೆ ಪ್ರಾಥಮಿಕ ಸಹಕಾರ ಸಂಘ ವೇಮಗಲ್ ಹೆಸರಿನಲ್ಲಿ ಇ-ವೇ ನಕಲಿ ಬಿಲ್ ತಯಾರಿಸಿ ರೈತರಿಗೆ ಸಬ್ಸಿಡಿ ರೂಪದಲ್ಲಿ ಕೃಷಿ ಇಲಾಖೆ ವಿತರಿಸುತ್ತಿದ್ದ ಯೂರಿಯಾ ರಸಗೊಬ್ಬರವನ್ನು ದುರುಪಯೋಗಪಡಿಸಿಕೊಂಡು ಕಾಂಟ್ರಾಕ್ಟ್ ದಾರರನ್ನು ಬುಕ್ ಮಾಡಿಕೊಂಡು ನೈಟ್ರೋಜನ್ ಎಕ್ಸ್ಟ್ರಾಕ್ಟ್ ಮಾಡಿ ಕೆಮಿಕಲ್ ತಯಾರಿಸಿ ಮಾರಾಟ ಮಾಡುತ್ತಿತ್ತು. ಇದರಿಂದ ರೈತರಿಗೆ ಗೊಬ್ಬರದ ಅಭಾವ ಸೃಷ್ಟಿಯಾಗಿರುವುದು ಕಂಡುಬಂದಿದೆ.

ಹೀಗೆ ಸಬ್ಸಿಡಿ ಯೂರಿಯಾ ರಸಗೊಬ್ಬರವನ್ನು ಕೃಷಿಯೇತರ ಚಟುವಟಿಕೆಗಳಿಗೆ ಮಾರಾಟ ದುರುಪಯೋಗಪಡಿಸಿಕೊಳ್ಳುತ್ತಿದ್ದ ಮರ್ಕೂರಿ ಪಾಲಿಮರ್ಸ್ ಸಂಸ್ಥೆಯ ಮಾಲೀಕರು ಹಾಗೂ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಕೃಷಿ ಇಲಾಖೆ ದೂರು ದಾಖಲಿಸಿದೆ.

ಅ.14 ರಂದು ಕೋಲಾರ ಜಿಲ್ಲೆಯ ಜಾಗೃತಕೋಶದ ಸಹಾಯಕ ನಿರ್ದೇಶಕ, ಜಾರಿದಳ ಜಂಟಿ ಕೃಷಿ ನಿರ್ದೇಶಕ ಹೆಚ್.ಕೆ.ರಾಮಕೃಷ್ಣ ಇವರಿಗೆ ಬಂದ ಖಚಿತ ದೂರಿನ ಮೇರೆಗೆ ಕೊಡಗಿನಬೆಲೆ ಗ್ರಾಮದ ಮರ್ಕೂರಿ ಪಾಲಿಮರ್ಸ್ ಕಂಪೆನಿಯ ಗೋಡೌನ್‌ ಮೇಲೆ ದಾಳಿ ಮಾಡಿದಾಗ ಕಂಪೆನಿಗೆ ಸೇರಿದ ಲಾರಿ ಚಾಲಕ ಕೃಷಿ ಇಲಾಖೆಗೆ ಸೇರಿದ ಸುಮಾರು 440 ಯೂರಿಯಾ ಮೂಟೆಗಳನ್ನು ತನ್ನ ಮಾಲೀಕ ಕೃಷ್ಣಪ್ರಸಾದ್ ರೆಡ್ಡಿಯ ಸೂಚನೆ ಮೇರೆಗೆ ವೇಮಗಲ್‌ಗೆ ತೆಗೆದುಕೊಂಡು ಹೋಗದೇ ಮರ್ಕೂರಿ ಪಾಲಿಮರ್ ಗೋಡೌನ್ ಬಳಿ ಇಳಿಸಿ ದಾಸ್ತಾನು ಮಾಡಿದ್ದು ಪತ್ತೆಯಾಗಿದೆ.

ಅಲ್ಲದೇ ಈ ಯೂರಿಯಾ ಮೂಟೆಗಳು ಪ್ರಾಥಮಿಕ ಸಹಕಾರ ಸಂಘ ವೇಮಗಲ್ ಹೆಸರಿನಲ್ಲಿ ಇ-ವೇ ನಕಲಿ ಬಿಲ್ ತಯಾರಿಸಿದ್ದು ಕಂಡು ಬಂದಿರುತ್ತದೆ. ಸ್ಥಳದಲ್ಲಿ ವಿಚಕ್ಷಣಾ ದಳ ಸುಮಾರು 1,17,260/-ರೂ.ಮೌಲ್ಯದ ಯೂರಿಯಾ ಮೂಟೆಗಳನ್ನು ವಶಪಡಿಸಿಕೊಂಡಿದ್ದು , ಮಾಲೂರು ಪೊಲೀಸ್ ಠಾಣೆಯಲ್ಲಿ ಕಂಪೆನಿ ವಿರುದ್ಧ ಮಾಲೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 0251/2020 ಇಸಿ ಆ್ಯಕ್ಟ್ ಹಾಗೂ ಐಪಿಸಿ ಸೆಕ್ಷನ್ 420 ರೀತ್ಯಾ ದೂರು ದಾಖಲಾಗಿದೆ.

ಇದರ ಹಿಂದೆ ದೊಡ್ಡ ಜಾಲವೇ ಇದ್ದು, ಸೂಕ್ತ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಆಗ್ರಹಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button