ಎಂ.ಕೆ.ಹೆಗಡೆ, ಬೆಳಗಾವಿ – ಬೆಳಗಾವಿಯಲ್ಲೀಗ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ರಾಜಕೀಯದ್ದೇ ದೊಡ್ಡ ಸುದ್ದಿ. ಇದಕ್ಕೆ ಎರಡು ಪ್ರಮುಖ ಕಾರಣಗಳು.
ಮೊದಲನೆಯದು, ಬದ್ದ ವೈರಿಗಳಾಗಿದ್ದ ಬಿಜೆಪಿ ನಾಯಕರು ಒಂದಾಗಿದ್ದು, ಇನ್ನೊಂದು, ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳಕರ್ ಬಿಜೆಪಿಯ ಘಟಾನುಘಟಿ ನಾಯಕರಿಗೆ ಸೆಡ್ಡು ಹೊಡೆದು ಕಣದಲ್ಲಿ ಉಳಿದಿದ್ದು.
2015ರಲ್ಲಿ ನಡೆದಿದ್ದ ಡಿಸಿಸಿ ಬ್ಯಾಂಕ್ ಚುನಾವಣೆ ವೇಳೆ ನಡೆದ ರಾಜಕೀಯ ಜಿದ್ದಾಜಿದ್ದಿನಿಂದಾಗಿ ಬೆಳಗಾವಿಯ ರಾಜಕೀಯ ನಾಯಕರಲ್ಲಿ ವೈಮನಸ್ಸು ಮೂಡಿತ್ತು. ಜಾರಕಿಹೊಳಿ ಸಹೋದರರು ಸೇರಿದಂತೆ ಕತ್ತಿ ಸಹೋದರರು ಮತ್ತು ಲಕ್ಷ್ಮಣ ಸವದಿ ಮಧ್ಯೆ ದೊಡ್ಡ ಕಂದಕ ಉಂಟಾಗಿತ್ತು. ಇದರ ಮುಂದುವರಿದ ಭಾಗವಾಗಿ ಲಕ್ಷ್ಮಣ ಸವದಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲನುಭವಿಸಬೇಕಾಯಿತು.
ಈಗ ಡಿಸಿಸಿ ಬ್ಯಾಂಕ್ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಸವದಿ ಬಣ ಮತ್ತು ಕತ್ತಿ -ಜಾರಕಿಹೊಳಿ ಬಣಗಳ ಮಧ್ಯೆ ದೊಡ್ಡ ಪೈಪೋಟಿ ನಡೆಯುವ ಲಕ್ಷಣ ಕಾಣಿಸಿತ್ತು. ಇದು ರಾಜ್ಯ ಸರಕಾರದ ಮೇಲೂ ಪರಿಣಾಮ ಬೀರಬಹುದು ಎನ್ನುವ ಆತಂಕ ಸೃಷ್ಟಿಯಾಗಿತ್ತು. ಜೊತೆಗೆ ಮುಂಬರುವ ಚುನಾವಣೆಗಳ ಮೇಲೂ ಇದರ ಪ್ರಭಾವ ಬಿಜೆಪಿಗೆ ವ್ಯತಿರಿಕ್ತವಾಗುವ ಸಾಧ್ಯತೆ ಇತ್ತು.
ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಮುಖಂಡರು ಮಧ್ಯಪ್ರವೇಶಿಸಿ ಎಲ್ಲ ಮುಖಂಡರೂ ಒಂದಾಗುವಂತೆ, ಅವಿರೋಧ ಆಯ್ಕೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದರು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಎಲ್ಲ ಮುಖಂಡರ ಸಭೆ ನಡೆಸಿ ಜಿಲ್ಲೆಯ ಮುಖಂಡರೆಲ್ಲ ಒಂದಾಗುವಂತೆ ಸಲಹೆ ನೀಡಿದ್ದರು.
ಇದೆಲ್ಲದರ ಪರಿಣಾಮವಾಗಿ ಕತ್ತಿ ಸಹೋದರರು, ಜಾರಕಿಹೊಳಿ ಸಹೋದರರು ಮತ್ತು ಸವದಿ ಗುಂಪು ಒಂದಾಗಿ ಚರ್ಚೆ ನಡೆಸಿದವು. ಪರಿಣಾವಾಗಿ 16ರಲ್ಲಿ 13 ಸ್ಥಾಗಳಿಗೆ ಅವಿರೋಧ ಆಯ್ಕೆ ನಡೆಯಿತು. 3 ಸ್ಥಾನಗಳಿಗೆ ಕಾಂಗ್ರೆಸ್ ಟಕ್ಕರ್ ಕೊಟ್ಟಿದ್ದರಿಂದ ಚುನಾವಣೆ ಘೋಷಣೆಯಾಗಿದೆ. ಶುಕ್ರವಾರ ಚುನಾವಣೆ ನಡೆಯಲಿದೆ.
ಅಪೆಕ್ಸ್ ಬ್ಯಾಂಕ್- ಸವದಿ ಷರತ್ತು
ಮೇಲ್ನೋಟಕ್ಕೆ ಇದು ಬಹಳ ಸರಳವಾಗಿ ಕಾಣಿಸುತ್ತಿದೆ. ಪಕ್ಷದ ಮುಖಂಡರ, ಆರ್ ಎಸ್ ಎಸ್ ಮುಖಂಡರ ಸಲಹೆಯಂತೆ ಎಲ್ಲರೂ ಒಂದಾದರು ಎಂದು ಭಾವಿಸುವಂತಿದೆ. ಆದರೆ ಬೆಳಗಾವಿ ರಾಜಕಾರಣಿಗಳು, ರಾಜಕೀಯ ನಾಯಕರು ತಿಳಿದುಕೊಂಡಷ್ಟು ಸುಲಭವಾಗಿಲ್ಲ. ಒಮ್ಮೆ ಜಿದ್ದಿಗೆ ಬಿದ್ದರೆ ಸರಕಾರವನ್ನೇ ಕೆಡಗುವ ಸಾಮರ್ಥ್ಯ ಮತ್ತು ಜಿಡ್ಡುತನ ಅವರಲ್ಲಿದೆ.
ಹಾಗಾಗಿ ಡಿಸಿಸಿ ಬ್ಯಾಂಕ್ ರಾಜಕೀಯವೂ ಇಷ್ಟು ಸರಳವಾಗಿ ಮುಗಿದಿಲ್ಲ. ರಮೇಶ ಕತ್ತಿ ಡಿಸಿಸಿ ಬ್ಯಾಂಕಿನ ಹಾಲಿ ಅಧ್ಯಕ್ಷರು. ಅವರೇ ಮುಂದಿನ ಅವಧಿಗೂ ಅಧ್ಯಕ್ಷರಾಗಿ ಮುಂದುವರಿಯಬೇಕು ಎನ್ನುವುದು ಷರತ್ತು ಹಾಕಲಿ, ಬಿಡಲಿ ಎಲ್ಲರೂ ಒಪ್ಪಿಕೊಳ್ಳಲೇಬೇಕಾದಂತದ್ದು ಎನ್ನುವುದು ಸವದಿಯವರಿಗೂ ಗೊತ್ತಿತ್ತು. ದೊಡ್ಡ ಹುದ್ದೆಯಲ್ಲಿದ್ದವರು ಬೇರೆಯವರಿಗೆ ಅವಕಾಶ ನೀಡಬೇಕು ಎಂದು ರಮೇಶ ಜಾರಕಿಹೊಳಿ ಟಾಂಗ್ ನೀಡಿದ್ದರು.
ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿಯಾಗಿದ್ದರಿಂದ, ರಮೇಶ ಕತ್ತಿಗೆ ಸಧ್ಯ ಯಾವುದೇ ರಾಜಕೀಯ ಸ್ಥಾನಮಾನ ಇಲ್ಲದಿರುವುದರಿಂದ ಸಹಜವಾಗಿ ಡಿಸಿಸಿ ಬ್ಯಾಂಕ್ ಅಧ್ಯಕ್ಷಸ್ಥಾನವನ್ನು ಅವರಿಗೆ ಬಿಟ್ಟುಕೊಡಬೇಕಾಗಿ ಬರುತ್ತದೆ ಎನ್ನುವುದನ್ನು ಲಕ್ಷ್ಮಣ ಸವದಿ ತಿಳಿದುಕೊಂಡಿದ್ದರು.
ಹಾಗಾಗಿ ಅವರೂ ಒಂದು ಷರತ್ತನ್ನು ಹಾಕಿದ್ದರು. ಆ ಷರತ್ತಿನ ಮೂಲಕವೇ ಅವರು ರಾಜಿ ಸಂದಾನಕ್ಕೆ ಒಪ್ಪಿಕೊಂಡಿದ್ದರು. ಅವರು ಹಾಕಿದ ಷರತ್ತು ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗುವುದು, ತನ್ಮೂಲಕ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಾದಿಗೆ ಪ್ರಯತ್ನಿಸುವುದು.
ರಾಜ್ಯ ಅಪೆಕ್ಸ್ ಬ್ಯಾಂಕ್ ಗೆ ರಾಜ್ಯದ ಎಲ್ಲ 30 ಡಿಸಿಸಿ ಬ್ಯಾಂಕ್ ನಿಂದಲೂ ಒಬ್ಬೊಬ್ಬ ಪ್ರತಿನಿಧಿ ಆಯ್ಕೆಯಾಗಿ ಹೋಗುತ್ತಾರೆ. ಹಾಗೆ ಹೋದವರಲ್ಲಿ ಒಬ್ಬರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಲಕ್ಷ್ಮಣ ಸವದಿ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಹಾಗಾಗಿ ತಮ್ಮನ್ನು ಬೆಳಗಾವಿ ಡಿಸಿಸಿ ಬ್ಯಾಂಕ್ ನಿಂದ ಪ್ರತಿನಿಧಿಯಾಗಿ ಒಮ್ಮತದಿಂದ ಆಯ್ಕೆ ಮಾಡಿ ಕಳಿಸಬೇಕೆನ್ನುವ ಷರತ್ತನ್ನು ಅವರು ವಿಧಿಸಿದ್ದಾರೆ. ಅದಕ್ಕೆ ಉಳಿದೆಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ.
ಹಾಗಾಗಿ ನೂತನ ಆಡಳಿತ ಮಂಡಳಿ ರಚನೆಯಾದ ಬಳಿಕ ಎಲ್ಲ ಸದಸ್ಯರೂ ಸೇರಿ ಬ್ಯಾಂಕಿನ ಅಧ್ಯಕ್ಷರನ್ನು ಹಾಗೂ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯನ್ನು ಆರಿಸಬೇಕಿದೆ. ಅಂದುಕೊಂಡಂತೆ ಎಲ್ಲವೂ ನಡೆದರೆ ರಮೇಶ ಕತ್ತಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ, ಲಕ್ಷ್ಮಣ ಸವದಿ ಅಪೆಕ್ಸ್ ಬ್ಯಾಂಕ್ ಪ್ರತಿನಿಧಿಯಾಗಿ ಹೋಗುತ್ತಾರೆ.
ಶುಕ್ರವಾರ ನಡೆಯಲಿರುವ ಚುನಾವಣೆ ನಂತರ ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.
ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿಲ್ಲ, ಆದರೆ…. : ರಮೇಶ ಕತ್ತಿ
ಡಿಸಿಸಿ ಬ್ಯಾಂಕ್: 3 ಸ್ಥಾನಗಳಿಗೆ ಚುನಾವಣೆ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ