ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶಾಸಕರ ನಿಧಿಯಿಂದ 12 ಲಕ್ಷ ರೂ. ನೆರವು ನೀಡಿದ ಶಾಸಕಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ಕ್ಷೇತ್ರದ ಜನರಲ್ಲಿ ಅಭಿವೃದ್ಧಿಗೆ ಪೂರಕವಾದ ಮನೋಭಾವನೆ ಇದೆ. ಒಳ್ಳೆಯ ಕೆಲಸಕ್ಕೆ ಸದಾ ಪ್ರೋತ್ಸಾಹ, ಬೆಂಬಲ ನೀಡುತ್ತಾರೆ. ಈ ರೀತಿಯ ಪ್ರೋತ್ಸಾಹ ಸಿಕ್ಕಿದರೆ ಶಾಸಕಿಯಾಗಿ ಕೆಲಸ ಮಾಡುವುದಕ್ಕೆ ಖುಷಿಯಾಗುತ್ತದೆ ಎಂದು ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಂಡಿಗೇರಿ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ದೇವಿ ಮಂದಿರದ ಜೀರ್ಣೋದ್ಧಾರಕ್ಕಾಗಿ ಚೆಕ್ ಹಸ್ತಾಂತರಿಸಿ ಅವರು ಮಾತನಾಡುತ್ತಿದ್ದರು. ಜನರು ಇಷ್ಟೊಂದು ಸುಸಂಸ್ಕೃತರು, ಸುಶಿಕ್ಷಿತರು, ಸಹಕಾರ ಮನೋಭಾವದವರು ಇದ್ದರೂ ಕ್ಷೇತ್ರದ ಅಭಿವೃದ್ಧಿಯಾಗದಿರುವುದು ಆಶ್ಚರ್ಯ ಉಂಟುಮಾಡುತ್ತದೆ. ಇದಕ್ಕೆ ಹಿಂದಿನ ಜನಪ್ರತಿನಿಧಿಗಳ ನಿರಾಸಕ್ತಿಯಲ್ಲದೇ ಬೇರೇನೂ ಕಾರಣ ಇರಲು ಸಾಧ್ಯವಿಲ್ಲ. ನಾನು ಯಾವುದೇ ರಾಜಕೀಯ ಮಾಡುವುದಿಲ್ಲ. ಆದರೆ ಸ್ವಾರ್ಥಕ್ಕೋಸ್ಕರ ಅಭಿವೃದ್ಧಿಯನ್ನು ಕಡೆಗಣಿಸಿರುವುದನ್ನು ಸಹಿಸಲು ಸಾಧ್ಯವಿಲ್ಲ. ಜನರಿಗೆ ಸರಕಾರದ ಸೌಲಭ್ಯಗಳನ್ನು ಅನುಭವಿಸುವ ಹಕ್ಕಿದೆ. ಜನಪ್ರತಿನಿಧಿಯಾದವರು ಅದನ್ನು ಕೊಡಿಸಬೇಕು. ಇಲ್ಲವಾದಲ್ಲಿ ಅದಕ್ಕಿಂತ ವಂಚನೆ ಮತ್ತೊಂದಿಲ್ಲ ಎಂದು ಹೆಬ್ಬಾಳಕರ್ ಹೇಳಿದರು.
ನಾನು ಶಾಸಕಿಯಾದ ನಂತರದಲ್ಲಿ ವಿಶ್ರಾಂತಿ ಇಲ್ಲದೆ ಕೆಲಸ ಮಾಡುತ್ತಿದ್ದೇನೆ. ಕ್ಷೇತ್ರದ ಜನರೂ ನನ್ನನ್ನು ಅತ್ಯಂತ ಪ್ರೀತಿ, ವಿಶ್ವಾಸದಿಂದ ಮನೆಮಗಳಾಗಿ ಕಾಣುತ್ತಿದ್ದಾರೆ. ಹಾಗಾಗಿ ನನಗೆ ಜನರೊಂದಿಗಿರುವುದೇ ನೆಮ್ಮದಿ ಮತ್ತು ವಿಶ್ರಾಂತಿಯಾಗಿದೆ ಎಂದು ಅವರು ಹೇಳಿದರು.
ನಮ್ಮ ಪುಣ್ಯ – ಚನ್ನರಾಜ ಹಟ್ಟಿಹೊಳಿ
ಇದೇ ವೇಳೆ ಮಾತನಾಡಿದ ಯುವಕಾಂಗ್ರೆಸ್ ಮುಖಂಡ ಚನ್ನರಾಜ ಹಟ್ಟಿಹೊಳಿ, ಬೆಳಗಾವಿ ಜಿಲ್ಲೆಯ ಜನರು, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಕ್ಷೇತ್ರದ ಜನರು ನಮ್ಮ ಕುಟುಂಬದ ಎಲ್ಲರನ್ನೂ ತಮ್ಮ ಮನೆಯ ಸದಸ್ಯರಂತೆ ಕಾಣುತ್ತಿದ್ದಾರೆ. ಇಂತಹ ಜನರೊಂದಿಗೆ ಕೆಲಸ ಮಾಡುವುದು ಖುಷಿ ನೀಡುತ್ತದೆ. ಇದು ನಮ್ಮ ಪುಣ್ಯವೆಂದೇ ಭಾವಿಸಿದ್ದೇವೆ. ನಿಮ್ಮ ಪ್ರೀತಿ, ವಿಶ್ವಾಸದ ಋಣವನ್ನು ತೀರಿಸುವ ಕೆಲಸವನ್ನು ನಮ್ಮ ಕೈಲಾದಮಟ್ಟಿಗೆ ಮಾಡುತ್ತಿದ್ದೇವೆ. ಇದೇ ಸಹಕಾರ ಮುಂದೆಯೂ ಇರಲಿ ಎಂದರು.
ದೇವಸ್ಥಾನದ ಜೀರ್ಣೋದ್ಧಾರಕ್ಕೆ ಒಟ್ಟು 12 ಲಕ್ಷ ರೂ.ಗಳ ಪೈಕಿ ಮೊದಲ ಕಂತಿನಲ್ಲಿ ಶಾಸಕರ ನಿಧಿಯ ವತಿಯಿಂದ 5 ಲಕ್ಷ ರೂ,ಗಳ ಚೆಕ್ ನ್ನು ಗ್ರಾಮದ ಹಿರಿಯರ ಹಾಗೂ ಸ್ಥಳೀಯ ಜನ ಪ್ರತಿನಿಧಿಗಳ ಸಮ್ಮುಖದಲ್ಲಿ ದೇವಸ್ಥಾನದ ಕಮೀಟಿಯವರಿಗೆ ಲಕ್ಷ್ಮಿ ಹೆಬ್ಬಾಳಕರ್ ಹಸ್ತಾಂತರಿಸಿದರು.
ಗ್ರಾಮಸ್ಥರ ಹಾಗೂ ದೇವಸ್ಥಾನದ ಕಮಿಟಿ ವತಿಯಿಂದ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ಚನ್ನರಾಜ ಹಟ್ಟಿಹೊಳಿ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನ ಪ್ರತಿನಿಧಿಗಳು, ಸಿ ಸಿ ಪಾಟೀಲ, ಬಸವರಾಜ ಮೇಳೆದ್, ಪ್ರಕಾಶ ಪಾಟೀಲ, ತಾಲೂಕ ಪಂಚಾಯತ್ ಸದಸ್ಯೆ ಸವಿತಾ ಪಾಟೀಲ, ಅಡಿವೇಶ ಇಟಗಿ, ಸುರೇಶ ಇಟಗಿ, ಗೌಸಮೊದ್ದಿನ್ ಜಾಲಿಕೊಪ್ಪ, ಸಿದ್ದಣ್ಣ ಹಾವಣ್ಣವರ, ಶ್ರೀಕಾಂತ ಪಾಟೀಲ, ತಾಲೂಕು ಪಂಚಾಯತ್ ಮಾಜಿ ಸದಸ್ಯ ಸುರೇಶ ಕಂಬಿ, ದೇವಸ್ಥಾನದ ಕಮೀಟಿಯವರು ಹಾಗೂಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ