Kannada NewsLatest

ಬೃಹತ್ ಗೂಬೆ ಮಾರಾಟ ಜಾಲ ಭೇದಿಸಿದ ಅರಣ್ಯ ಸಂಚಾರಿ ದಳ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಜೀವಂತ ಗೂಬೆ ಹಾಗೂ ವಿವಿಧ ವನ್ಯಜೀವಿ ಪರಿಕರಗಳನ್ನು ಮಾರಾಟ ಮಾಡುತ್ತಿದ್ದ ಬೃಹತ್ ಜಾಲವೊಂದನ್ನು ಬೆಳಗಾವಿ ಅರಣ್ಯ ಇಲಾಖೆಯ ಅರಣ್ಯ ಸಂಚಾರ ದಳ (ಜಾಗೃತ) ತಂಡ ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸಿದೆ.

ಬಂಧಿತರನ್ನು ಸೂರಜ ಅರ್ಜುನ ವಡ್ಡರ, ಅರುಣ ಅಶೋಕ ಕೊರವಿ, ಸಂದೀಪ ನಾಮದೇವ ಕೊರವಿ, ಶುಭಂ ಅಣ್ಣಾಸೋ ಕಾಂಬಳೆ, ಮಯೂರ ಸುರೇಶ್ ಕಾಂಬಳೆ ಎಂದು ಗುರುತಿಸಲಾಗಿದೆ. ಬಂಧಿತರಿಂದ ಜೀವಂತ ಗೂಬೆಯನ್ನು ವಶಕ್ಕೆ ಪಡೆದಿದ್ದು, ಆರೋಪಿಗಳು 30 ಲಕ್ಷ ರೂ ವ್ಯವಹಾರ ಮಾಡುವ ವೇಳೆ ಸಿಕ್ಕಿಬಿದ್ದಿದ್ದಾರೆ.

ಗೂಬೆ ಹಾಗೂ ಇನ್ನಿತರ ವನ್ಯಜೀವಿ ಪರಿಕರಗಳನ್ನು ಅವ್ಯಾಹತವಾಗಿ ಅಕ್ರಮ ಮಾರಾಟ ಮಾಡುವ ಜಾಲ ಹಲವು ದಿನಗಳಿಂದ ನಿಪ್ಪಾಣಿ, ಚಿಕ್ಕೋಡಿ, ಸಂಕೇಶ್ವರ ಸಮೀಪದ ಮಾರಾಷ್ಟ್ರಕ್ಕೆ ಹೊಂದಿಕೊಂಡಿರುವ ಗಡಿ ಭಾಗದಲ್ಲಿ ಸಕ್ರಿಯವಾಗಿತ್ತು. ವನ್ಯಜೀವಿಗಳ ಸಂರಕ್ಷಣೆ ಹಿನ್ನೆಲೆಯಲ್ಲಿ ಅರಣ್ಯ ಸಂಚಾರಿದಳ ಜಾಗೃತ ತಂಡ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಿ ಬೃಹತ್ ಜಾಲವನ್ನು ಬಂಧಿಸಿದೆ.

ಜಾಗೃತ ದಳದ ಮುಖ್ಯಸ್ಥರಾದ ಸೀಮಾ ಗರ್ಗ್, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು, ಬೆಂಗಳೂರು, ಬೆಳಗಾವಿ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬಸವರಾಜ ಪಾಟೀಲ್ ಮಾರ್ಗದರ್ಶನದಲ್ಲಿ ಬೆಳಗಾವಿಯ ಜಾಗೃತ ದಳದ ಶಂಕರ ಕಲ್ಲೋಳಿಕರ, ವಿ.ಡಿ.ಹುದ್ದಾರ, ಬಿ.ವಿ.ಉಳವಣ್ಣವರ ತಂಡದ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button