
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇತ್ತೀಚೆಗೆ ಜೆಡಿಎಸ್ ವಿರುದ್ಧ ಕಾಂಗ್ರೆಸ್ ನಾಯಕರು ಅಪಹಾಸ್ಯ ಮಾಡುತ್ತಿದ್ದು, ಪ್ರಾದೇಶಿಕ ಪಕ್ಷ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬ ಮಾತನ್ನು ಕೂಡ ಆಡುತ್ತಿದ್ದಾರೆ. ಆದರೆ ರಾಜ್ಯದ ಅಭಿವೃದ್ಧಿಗೆ ಪ್ರಾದೇಶಿಕ ಪಕ್ಷ ಅನಿವಾರ್ಯ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೆಡಿಎಸ್ ಮನೆ ಅಲುಗಾಡುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ನಿಜವಾಗಿ ಯಾರ ಮನೆ ಅಲುಗಾಡುತ್ತಿದೆ ಎಂಬುದನ್ನು ವಾಸ್ತವವಾಗಿ ಅರಿತು ಮಾತನಾಡಬೇಕು. ಹಾಲು, ಅಕ್ಕಿ ಸೇರಿದಂತೆ ವಿವಿಧ ಭಾಗ್ಯಗಳನ್ನು ಕೊಟ್ಟ ನಂತರವೂ ಕಾಂಗ್ರೆಸ್ 130 ಸೀಟ್ ನಿಂದ 78ಕ್ಕೆ ಇಳಿದಿದ್ದು ಯಾಕೆ? ಜೆಡಿಎಸ್ ಜೊತೆ ಕೈ ಜೋಡಿಸಿದ್ದಕ್ಕೆ ಎನ್ನುತ್ತಾರೆ ನಾವು 28 ಸೀಟ್ ಕಳೆದುಕೊಂಡರೆ ಅವರು 50 ಸೀಟ್ ಕಳೆದುಕೊಂಡಿದ್ದರು. ಒಂದು ನಗರಸಭೆ ಸ್ಥಾನವನ್ನೂ ಗೆಲ್ಲಲಾಗಿಲ್ಲ. ಇಂದು ಕಾಂಗ್ರೆಸ್ ನಲ್ಲಿ ಮೂವರ ಸ್ಥಾನ ಅಲುಗಾದುತ್ತಿದೆ ಎಂದು ತಿರುಗೇಟು ನೀಡಿದರು.
ನಾನೂ ಕೂಡ ಮೂಲತ: ಕಾಂಗ್ರೆಸ್ಸಿಗ. ಆದರೆ ಕೆಲ ಕಾರಣಕ್ಕೆ ನನ್ನ ಹೊರಹಾಕಿದರು. ಹಿಂದೆ ನಾನು ಏಕಾಂಗಿಯಾಗಿದ್ದೆ. ಮತ್ತೆ ವಾಪಸ್ ಎಲ್ಲರೂ ನನ್ನ ಬಳಿಯೇ ಬಂದರು. ಒಬ್ಬ ಕನ್ನಡಿಗ ಪ್ರಧಾನಿಯಾಗುವ ಮಟ್ಟವೂ ಬಂತು. ನಾನು ಪ್ರಧಾನಿ ಹುದ್ದೆ ಆಕಾಂಕ್ಷಿಯಾಗಿರಲಿಲ್ಲ. ಆದರೂ ಹುದ್ದೆ ಒದಗಿಬಂತು. ನಂತರ ನನ್ನ ಬಿಟ್ಟು ಸರ್ಕಾರ ಮಾಡಿದರು. ನಾನು ಜೀವನದಲ್ಲಿ ಹೋರಾಟ ಮಾಡ ಈ ಹಂತಕ್ಕೆ ಬಂದಿದ್ದೇನೆ. ನನಗೆ ಕಾಂಗ್ರೆಸ್ ನಡವಳಿಕೆ ಏನೆಂದು ಚೆನ್ನಾಗಿ ಗೊತ್ತು ಎಂದು ವಾಗ್ದಾಳಿ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ