ಪ್ರಗತಿವಾಹಿನಿ ಸುದ್ದಿ; ನವದೆಹಲಿ: ನೂತನ ಕೃಷಿ ತಿದ್ದುಪಡಿ ಕಾಯ್ದೆ ಜಾರಿಗೆ ಮುಂದಾಗಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಟೀಕಿಸಿರುವ ಸುಪ್ರೀಂ ಕೋರ್ಟ್, ಕೃಷಿ ಕಾಯ್ದೆಯನ್ನು ಜಾರಿಗೆ ತರಲೇ ಬೇಕೆಂದು ಸರ್ಕಾರ ಪಟ್ಟು ಹಿಡಿಯುತ್ತಿರುವುದಾದರೂ ಏಕೆ, ಈ ವಿಷಯವನ್ನು ಪ್ರತಿಷ್ಠೆ ಎಂದು ಪರಿಗಣಿಸಿರುವುದಾದರೂ ಏಕೆ ಎಂದು ಪ್ರಶ್ನಿಸಿದೆ.
ರೈತರ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ನಿಭಾಯಿಸುತ್ತಿರುವ ರೀತಿ ನಮಗೂ ಅಸಮಾಧಾನ ತಂದಿದೆ ಎಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ ಬೋಬ್ಡೆ ನೇತೃತ್ವದ ನ್ಯಾಯಪೀಠ, ರೈತರು ಹಾಗೂ ಸರ್ಕಾರದ ನಡುವಿನ ಮಾತುಕತೆ ಪದೇ ಪದೇ ವಿಫಲವಾಗುತ್ತಿದೆ. ಪ್ರತಿಭಟನೆಯಲ್ಲಿ ಮಹಿಳೆಯರು, ಹಿರಿಯ ನಾಗರಿಕರೂ ಭಾಗಿಯಾಗುತ್ತಿದ್ದಾರೆ. ಚಳಿಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೇ ಆತ್ಮಹತ್ಯೆ ದಾರಿ ಹಿಡಿಯುತ್ತಿದ್ದಾರೆ. ಇಷ್ಟಾದರೂ ಸರ್ಕಾರ ಕೃಷಿ ಕಾಯ್ದೆ ಜಾರಿಗೊಳಿಸಲೇ ಬೇಕು ಎಂದು ಹೊರಟಿರುವುದಾದರೂ ಏಕೆ ಎಂದು ಚಾಟಿಬೀಸಿದೆ.
ಕೇಂದ್ರ ಸರ್ಕಾರಕ್ಕೆ ಜವಾಬ್ದಾರಿಯಿದ್ದರೆ ಕಾನೂನು ಅನುಷ್ಠಾನಕ್ಕೆ ತಡೆ ಹಿಡಿಯಿರಿ. ಈ ಕಾನೂನು ಉತ್ತಮವಾಗಿದೆ ಎಂಬ ಬಗ್ಗೆ ಯಾವುದೇ ಅರ್ಜಿ ಕೂಡ ನಮ್ಮ ಮುಂದೆ ಬಂದಿಲ್ಲ. ಹಲವು ರಾಜ್ಯಗಳು ಕೂಡ ಕೃಷಿ ಕಾಯ್ದೆಯನ್ನು ವಿರೋಧಿಸುತ್ತಿವೆ. ರೈತರು ಇಡೀ ಕಾನೂನು ವಾಪಸ್ ಪಡೆಯಬೇಕೆಂದು ಒತ್ತಾಯಿಸುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ನೇಮಕಗೊಂಡಿರುವ ಸಮಿತಿ ಕೈಗೊಳ್ಳುವ ನಿರ್ಧಾರದ ಬಗ್ಗೆ ಸ್ಪಷ್ಟ ಮಾಹಿತಿ ಸಿಗುವವರೆಗೂ ಕೃಷಿ ಕಾನೂನು ಜಾರಿಗೆ ತಡೆ ನೀಡುತ್ತೇವೆ ಎಂದು ಸುಪ್ರೀಂ ತ್ರಿಸದಸ್ಯ ಪೀಠ ಹೇಳಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ