Latest

 ಮಾಸ್ ಬೇಸ್ ಪಕ್ಷವನ್ನು ಕೇಡರ್ ಬೇಸ್ ಪಕ್ಷವಾಗಿ ಮಾಡಬೇಕು -ಡಿ.ಕೆ. ಶಿವಕುಮಾರ್

ಬೆಳಗಾವಿ ವಿಭಾಗ ಮಟ್ಟದ ಸಂಕಲ್ಪ ಸಮಾವೇಶದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್

 ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ –  ರಾಜ್ಯದಲ್ಲಿನ ಹಾಗೂ ರಾಷ್ಟ್ರದಲ್ಲಿನ ರಾಜಕಾರಣವನ್ನು ನಾವು ಗಮನಿಸುತ್ತಿದ್ದೇವೆ. ನಮ್ಮ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕು ಎಂಬ ಸಂಕಲ್ಪವನ್ನು ನಾವು ಮಾಡಿದ್ದೇವೆ. ಮಾಸ್ ಬೇಸ್ ಪಕ್ಷವನ್ನು ಕೇಡರ್ ಬೇಸ್ ಪಕ್ಷವಾಗಿ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ವಿಭಾಗಮಟ್ಟದ ಸಂಕಲ್ಪ ಸಮಾವೇಶದಲ್ಲಿ ಅವರು ಸಮಾರೋಪ ಮಾತನಾಡುತ್ತಿದ್ದರು.
ಅವರ ಭಾಷಣದ ಸಾರಾಂಶ ಇಲ್ಲಿದೆ –
ಎಐಸಿಸಿಯಿಂದ ನಮಗೆ ಸೂಚನೆ ಬಂದಿದ್ದು, ನಾವು ಹಿರಿಯ ನಾಯಕರು ಪಕ್ಷವನ್ನು ಹೇಗೆ ಮುನ್ನಡೆಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ. ಸಂಘಟನೆಗೆ ಒತ್ತು ನೀಡಬೇಕು. ಯಾರು ಎಷ್ಟೇ ದೊಡ್ಡ ನಾಯಕರಾದರೂ ಅವರು ತಮ್ಮ ಬೂತ್ ಜವಾಬ್ದಾರಿ ವಹಿಸಿಕೊಳ್ಳಬೇಕು. ತಮ್ಮ ಪಂಚಾಯ್ತಿ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂಬ ತೀರ್ಮಾನ ಆಗಿದೆ.
ನಾವು ಸಂಘಟನೆ ಜತೆಗೆ ಹೋರಾಟವನ್ನು ನಡೆಸಬೇಕಿದೆ. ಕೇವಲ ಒಂದು ಕಡೆ ಸೇರಿ ಭಾಷಣ ಮಾಡಿದರೆ ಸಾಲುವುದಿಲ್ಲ. ಕಾಂಗ್ರೆಸ್ ಪಕ್ಷದ ಇತಿಹಾಸವೇ ಹೋರಾಟ. ಈ ದೇಶದ ಐಕ್ಯತೆ, ಸಮಗ್ರತೆ ಕಾಪಾಡಿ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾಗಿ ಮಾಡಿದೆ.
ನಾವು ಸ್ವಾತಂತ್ರ್ಯ ತಂದುಕೊಟ್ಟಿದ್ದು, ಸಂವಿಧಾನ ಕೊಟ್ಟಿದ್ದು ಮಾತ್ರವಲ್ಲ. ನಾವು ಪ್ರತಿಯೊಬ್ಬರ ಬದುಕಿನಲ್ಲೂ ಪಾತ್ರ ವಹಿಸಿದ್ದೇವೆ. ನಾವು ಪಕ್ಷದ ತತ್ವ ಸಿದ್ಧಾಂತಗಳನ್ನು ಮರೆತರೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಜವಾಹರಲಾಲ್ ನೆಹರೂ ಅವರು ಹೇಳಿದ್ದಾರೆ.
ಅವರು ಹೇಳಿರುವಂತೆ ಪಕ್ಷದಲ್ಲಿ ಶಿಸ್ತಿನ ವಿಚಾರ ಬಹಳ ಮುಖ್ಯ. ನೀವು ಎಷ್ಟೇ ದೊಡ್ಡ ನಾಯಕರಾಗಿದ್ದರೂ ನಿಮ್ಮ ಅನಗತ್ಯ ಹೇಳಿಕೆಗಳನ್ನು ಪಕ್ಷ ಸಹಿಸಿಕೊಳ್ಳುವುದಿಲ್ಲ. ಯಾರೇ ಆಗಿರಲಿ ಪಕ್ಷದ ಚೌಕಟ್ಟಿನಲ್ಲಿ ಇರುವುದಾದರೆ ಇರಿ, ಇಲ್ಲದಿದ್ದರೆ ನಿಮ್ಮ ದಾರಿ ನೀವು ನೋಡಿಕೊಳ್ಳಿ. ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಬೇಕು.
ಇಲ್ಲಿ ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಬೇಕು. ಸಂಸದರಿರಲಿ, ಸಚಿವರಾಗಿರಲಿ, ಶಾಸಕರಾಗಿರಲಿ ಪಕ್ಷದಲ್ಲಿ ನಿಮ್ಮದೇ ಆದ ವಿಚಾರಗಳನ್ನು ಪಕ್ಷದ ಚೌಕಟ್ಟಿನಲ್ಲಿ ಇರಬೇಕು.
ನಿಮ್ಮ ಹಿಂದೆ ಎಷ್ಟು ಜನ ಇರುತ್ತಾರೆ ಎಂಬುದಕ್ಕಿಂತ ನೀವು ಎಷ್ಟು ಜನ ನಾಯಕರನ್ನು ಬೆಳೆಸಿದ್ದೀರಿ ಎಂಬುದು ಮುಖ್ಯ ಎಂದು ಮಹಾತ್ಮ ಗಾಂಧೀಜಿ ಅವರು ಹೇಳಿದ್ದಾರೆ. ಅದೇ ರೀತಿ ನೀವು ಎಷ್ಟು ನಾಯಕರನ್ನು ತಯಾರು ಮಾಡುತ್ತೀರಿ ಎಂಬುದು ಮುಖ್ಯ. ರಾಜೀವ್ ಗಾಂಧಿ ಅವರು ಕೂಡ ನಾಯಕರನ್ನು ಸೃಷ್ಟಿಸುವವನೇ ನಿಜವಾದ ನಾಯಕನೆ ಹೊರತು ಹಿಂಬಾಲಕರನ್ನು ಸೃಷ್ಟಿಸುವವನಲ್ಲ ಎಂದು ಹೇಳಿದ್ದಾರೆ.
ಇಲ್ಲಿ ಬಂದಿರುವ ನೀವುಗಳೂ ಕೂಡ ನಾಯಕರುಗಳೇ. ನಿಮಗೆ ಯಾರೂ ಅವಕಾಶ ಮಾಡಿಕೊಡುವುದಿಲ್ಲ. ನಿಮ್ಮನ್ನು  ಜನರು ನಾಯಕರಾಗಿ ಬೆಳೆಸಬೇಕು. ಜನ ನಿಮ್ಮನ್ನು ನಾಯಕರನ್ನಾಗಿ ಗುರುತಿಸಬೇಕಾದರೆ ನಿಮ್ಮಲ್ಲಿ ಹೋರಾಟ ಮಾಡುವ ಛಲ ಇರಬೇಕು. ನಿಮ್ಮ ಅವಕಾಶಗಳನ್ನು ನೀವೇ ಸೃಷ್ಟಿಸಿಕೊಳ್ಳಬೇಕು. ಆಗ ಮಾತ್ರ ನೀವು ನಾಯಕರಾಗಿ ಬೆಳೆಯಲು ಸಾಧ್ಯ.
ಸ್ವಾತಂತ್ರ್ಯ ಪೂರ್ವದಲ್ಲಿ ನಮ್ಮ ನಾಯಕರು ಇಂಥಹ ಪ್ರಮುಖ ಚಳುವಳಿಗಳನ್ನು ಸೃಷ್ಟಿ ಮಾಡಿದರು. ಈ ವಿಚಾರದಲ್ಲಿ ನಿಮ್ಮ ಸಲಹೆಗಳನ್ನು ಕೇಳಲು ನಾವಿಲ್ಲಿ ಸೇರಿದ್ದೇವೆ. ಎಲ್ಲ ಬ್ಲಾಕ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಇಂದು ಮೂರು ನಿಮಿಷಗಳ ಅವಕಾಶ ನೀಡಲಾಗುವುದು. ನಿಮ್ಮ ಕ್ಷೇತ್ರದಲ್ಲಿನ ಸಮಸ್ಯೆ ಹಾಗೂ ಹೋರಾಟದ ವಿಚಾರವಾಗಿ ಸಲಹೆಗಳನ್ನು ಹೇಳಬೇಕು.
ಎಐಸಿಸಿಯಿಂದ ನಮಗೆ ಸಂದೇಶ ಬಂದಿದೆ. ಅದೇನೆಂದರೆ ದೇಶಾದ್ಯಂತ ಪ್ರತಿಭಟನೆ ಮಾಡುತ್ತಿರುವ ರೈತರಿಗೆ ಬೆಂಬಲವಾಗಿ ನಿಲ್ಲಲು ಒಂದು ಕಾರ್ಯಕ್ರಮ ರೂಪಿಸಲಾಗಿದೆ. ನಾವು ಇಲ್ಲಿ 20ರಂದು ಆ ಕಾರ್ಯಕ್ರಮ ಮಾಡುವುದಾಗಿ ತಿಳಿಸಿದ್ದೇವೆ. 20ರಂದು ಕೇವಲ ನೀವುಗಳು ಮಾತ್ರವಲ್ಲ, ನಿಮ್ಮ ಜತೆಗೆ ಕಾರ್ಯಕರ್ತರು, ರೈತರನ್ನು ಕರೆದುಕೊಂಡು ಬೆಂಗಳೂರಿನ ಫ್ರೀಡಂ ಪಾರ್ಕ್ ಗೆ ಆಗಮಿಸಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ.
ಯುದ್ಧ ಬಂದಾಗ ಶಾಸ್ತ್ರಾಭ್ಯಾಸ ಮಾಡುವುದಲ್ಲ. ಈಗಿನಿಂದಲೇ ನಾವು ನಮ್ಮ ತಯಾರಿ ಮಾಡಿಕೊಳ್ಳಬೇಕು. ಜನರ ಸಮಸ್ಯೆ, ಅಭಿಪ್ರಾಯ ಸಂಗ್ರಹಿಸಿ, ಅದಕ್ಕೆ ತಕ್ಕಂತೆ ಕಾರ್ಯಕ್ರಮ ರೂಪಿಸಬೇಕು.
ಕಾಂಗ್ರೆಸ್ ಪಕ್ಷ ಈಗಾಗಲೇ ಕಾಂಗ್ರೆಸ್ ಸಾಕಷ್ಟು ಕಾರ್ಯಕ್ರಮ ರೂಪಿಸಿದೆ. ಈಗಾಗಲೇ ಪಂಚಾಯ್ತಿ ಮತ್ತು ವಾರ್ಡ್ ಮಟ್ಟದಲ್ಲಿ ಸಮಿತಿ ರಚಿಸಲು ತೀರ್ಮಾನ ಆಗಿದ್ದು, ನಂತರ ಬೂತ್ ಮಟ್ಟದ ಸಮಿತಿ ರಚಿಸಲಾಗುವುದು. ಪ್ರಜಾಪ್ರತಿನಿಧಿ ಎಂಬ ಪುಸ್ತಕವನ್ನು ನೀಡಲಾಗುವುದು. ಈ ತಿಂಗಳ ಒಳಗಾಗಿ ಈ ಸಮಿತಿ  ರಚಿಸಬೇಕು. ಇದರಲ್ಲಿ ಪ್ರತಿ ಸದಸ್ಯರ ವಿವರ ನೀಡಬೇಕು. ಪ್ರತಿ ಬೂತ್ ನಲ್ಲೂ ಡಿಜಿಟಲ್ ಯೂತ್ ನೇಮಿಸಲಾಗುವುದು.
ಮುಂದಿನ ದಿನಗಳಲ್ಲಿ ಎಐಸಿಸಿ  ನಾಯಕರ ನಿರ್ದೇಶನದಂತೆ ಚಾಲಕರ, ಸಹಕಾರಿ, ಸಾಂಸ್ಕೃತಿಕ ಘಟಕಗಳನ್ನು ಆರಂಭಿಸುತ್ತಿದ್ದು, ಇವುಗಳನ್ನು ಪಂಚಾಯ್ತಿ ಮಟ್ಟದಿಂದ ಆರಂಭಿಸಲಾಗುವುದು.
ಮುಂದಿನ ದಿನಗಳಲ್ಲಿ ಪದಾಧಿಕಾರಿಗಳಲ್ಲಿ ಕೆಲವು ಬದಲಾವಣೆ ಮಾಡಲಾಗುವುದು. ಅನೇಕ ವರ್ಷಗಳಿಂದ ಕೆಲಸ ಮಾಡಿರುವವರಿಗೆ ಬಡ್ತಿ ನೀಡಿ ಹೊಸಬರಿಗೆ ಅವಕಾಶ ಕಲ್ಪಿಸಲಾಗುವುದು. ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಪಾಲಿಕೆಗಳಿಗೆ ಟಿಕೆಟ್ ನೀಡಲು ಸಮಿತಿ ರಚಿಸಲಾಗುವುದು. ಈ ಬಗ್ಗೆಯೂ ಎಐಸಿಸಿಯಿಂದ ಸೂಚನೆ ಬಂದಿದ್ದು, ಅವರು ನೀಡಿರುವ ಮಾನದಂಡಗಳ ಆಧಾರದ ಮೇಲೆ ಟಿಕೆಟ್ ನೀಡಲಾಗುವುದು.
ಎಷ್ಟೇ ದೊಡ್ಡ ನಾಯಕರಾದರೂ ನಾವು ಕೂಡ ಕಾರ್ಯಕರ್ತರೆ. ಇನ್ನು ಮುಂದೆ ವೇದಿಕೆ ಸಂಸ್ಕೃತಿ ಇರುವುದಿಲ್ಲ. ಮುಂದಿನ ಎಲ್ಲ ಕಾರ್ಯಕ್ರಮಗಳು ಇದೇ ಮಾದರಿಯಲ್ಲಿ ನಡೆಯಬೇಕು.
ಈ ಪಕ್ಷವನ್ನು ಅಧಿಕಾರಕ್ಕೆ ತರುವತ್ತ ನಾವು ಶ್ರಮಿಸೋಣ. ಮುಂದಿನ ದಿನಗಳಲ್ಲಿ ಉಪಚುನಾವಣೆಗಳು ಬರುತ್ತಿದ್ದು, ನಾವು ಕೆಲವೇ ದಿನಗಳಲ್ಲಿ ತೀರ್ಮಾನ ಕೈಗೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಎಲ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಶಾಸಕರು, ಪರಾಜಿತ ಅಭ್ಯರ್ಥಿಗಳು ಎಲ್ಲರೂ ಪ್ರತಿ ಪಂಚಾಯ್ತಿಗೂ ಹೋಗಿ ಸಂಘಟನೆ ಮಾಡಬೇಕು.
ಯಾರು ಪಕ್ಷದಿಂದ ಹೊರಹೋಗಿದ್ದಾರೆ, ಯಾರು ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button