Kannada NewsLatest

ಕೆಎಲ್‌ಇ ಅತ್ಯಾಧುನಿಕ ಸಿಮ್ಯುಲೇಶನ್ ಸೆಂಟರ್ ಹಾಗೂ ಕ್ಲಿನಿಕಲ್ ಸ್ಕಿಲ್ಸ್ ಲ್ಯಾಬ್ ಉದ್ಘಾಟಿಸಲಿದ್ದಾರೆ ಅಮಿತ್ ಶಾ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –  ಕೆಎಲ್‌ಇ ಅತ್ಯಾಧುನಿಕ ಸಿಮ್ಯುಲೇಶನ್ ಸೆಂಟರ್ ಹಾಗೂ ಕ್ಲಿನಿಕಲ್ ಸ್ಕಿಲ್ಸ್ ಲ್ಯಾಬ್ ನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಉದ್ಘಾಟಿಸುವರು.

ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರೂ, ಕೆಎಲ್ಇ ವಿವಿ ಕುಲಾಧಿಪತಿಗಳೂ ಆಗಿರುವ ಡಾ.ಪ್ರಭಾಕರ ಕೋರೆ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು.

ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆಂಡ್ ರಿಸರ್ಚ್(ಡೀಮ್ಡ್-ಟು-ಬಿ-ಯುನಿರ್ವಸಿಟಿ)ನ ಅಧೀನ ಸಂಸ್ಥೆಯಾದ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಹೊಸ ಉಪಕ್ರಮವಾದ ಕೆಎಲ್‌ಇ ಅತ್ಯಾಧುನಿಕ ಸಿಮ್ಯುಲೇಶನ್ ಸೆಂಟರ್ ಹಾಗೂ ಕ್ಲಿನಿಕಲ್ ಸ್ಕಿಲ್ಸ್ ಲ್ಯಾಬ್ ವ್ಯವಸ್ಥೆಯು ಆಧುನಿಕ ಬಹುವೃತ್ತಿಯ ತರಬೇತಿ ಸೌಲಭ್ಯಗಳನ್ನು ಹೊಂದಿದೆ.

ಈ ಪ್ರಯೋಗಾಲಯವು ಶ್ರೇಷ್ಠ ತಂತ್ರಜ್ಞಾನದ ಹೈಟೆಕ್, ಹೈ-ಫಿಡೆಲಿಟಿ ಸಿಮ್ಯುಲೇಟರ‍್ಸ್ ಹಾಗೂ ಕೌಶಲ್ಯ ತರಬೇತುದಾರರ ವ್ಯವಸ್ಥೆಗಳನ್ನು ಒಳಗೊಂಡಿದೆ. ರೋಗಿಯ ಸುರಕ್ಷತೆಯನ್ನು ಉತ್ತೇಜಿಸುವ ಧ್ಯೇಯದೊಂದಿಗೆ ಅಪಾಯಮುಕ್ತ ಕಲಿಕೆಯ ಮೂಲಕ ವೈದ್ಯಕೀಯ ವೃತ್ತಿಪರರ ಪಠ್ಯಕ್ರಮದಲ್ಲಿ ಸಾಮರ್ಥ್ಯ ಆಧಾರಿತ ಸಿಮ್ಯುಲೇಶನ್ ಶಿಕ್ಷಣವನ್ನು ಸೇರಿಸಲು ಈ ಕೇಂದ್ರವು ಬದ್ಧವಾಗಿದೆ.
ಸಿಮ್ಯುಲೇಶನ್ ಆಧಾರಿತ ತರಬೇತಿಯು ವೈದ್ಯಕೀಯ ಶಿಕ್ಷಣದಲ್ಲಿ ಈ ಸಮಯದ ಅವಶ್ಯಕತೆಯಾಗಿದೆ. ಗಂಭೀರವಾಗಿ ಅನಾರೋಗ್ಯ ಪೀಡಿತ ರೋಗಿಗಳ ಪುನರುಜ್ಜೀವನ, ತುರ್ತು ಆರೈಕೆ, ಕ್ಲಿಷ್ಟ ಸಂದರ್ಭಗಳಲ್ಲಿ ಹೆರಿಗೆಗಳನ್ನು ನಡೆಸುವುದು, ಶಸ್ತ್ರ ಚಿಕಿತ್ಸೆಗಳು, ಕ್ಯಾಥರೈಜೇಶನ್, ವೆನಿಪಂಕ್ಚರ್, ಟ್ರಾಕಿಯೋಸ್ಟೊಮಿ, ಇನ್‌ಟುಬೇಶನ್ ಇತ್ಯಾದಿಗಳ ಕುರಿತು ರೋಗಿಗಳ ಆರೈಕೆಯಲ್ಲಿ ವಿವಿಧ ಕೌಶಲ್ಯಗಳನ್ನು ರೂಢಿ ಮಾಡಿಕೊಳ್ಳಲು ವೈದ್ಯಕೀಯ ವಿದ್ಯಾರ್ಥಿಗಳಿಗೆ ಹಾಗೂ ತರಬೇತುದಾರರಿಗೆ ಇಲ್ಲಿ ಅವಕಾಶ ಕಲ್ಪಿಸಲಾಗಿದೆ.

ಈ ಕೇಂದ್ರದಲ್ಲಿ ತರಬೇತಿ ಹೊಂದಿದವರು ನೈಜ ರೋಗಿಗಳ ಮೇಲೆ ಸುರಕ್ಷಿತವಾಗಿ ನಿರ್ವಹಿಸಲು ಸಾಕಷ್ಟು ಪರಿಣ ತಿಯನ್ನು ಪಡೆಯುವವರಗೆ ಈ ಕೌಶಲ್ಯಗಳನ್ನು ಮಾದರಿಗಳಲ್ಲಿ ಅಭ್ಯಾಸ ಮಾಡುತ್ತಾರೆ. ಇದು ಸ್ನಾತಕ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಬೋಧನೆ ಹಾಗೂ ತರಬೇತಿಗೆ ಮಾತ್ರ ಸಹಾಯವಾಗುವುದಲ್ಲದೇ ಕಾರ್ಯನಿರತ ವೈದ್ಯರಿಗೆ ತಮ್ಮ ಸಹಕಾರಿ ಕಾರ್ಯವಿಧಾನದ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡು ಅಧ್ಯಯನ ಮಾಡಲು ಸಹಾಯಕವಾಗುತ್ತದೆ.
ಈ ಕೇಂದ್ರವು ರಾಜ್ಯದ ಈ ಭಾಗದಲ್ಲಿಯೇ ಒಂದು ವಿಶೇಷ ಕೇಂದ್ರವಾಗಿದೆ. ಅತ್ಯಾಧುನಿಕ ವೈದ್ಯಕೀಯ ಸಿಮ್ಯುಲೇಟರ‍್ಸ್‌ಗಳು ಮತ್ತು ಕೌಶಲ್ಯ ತರಬೇತುದಾರರನ್ನು ಕಲಿಯುವವರಿಗೆ ಸುರಕ್ಷಿತ ಮತ್ತು ನಿಯಂತ್ರಿಕ ವಾತಾವರಣದಲ್ಲಿ ಕಲಿಯಲು ಅವಕಾಶಗಳನ್ನು ಒದಗಿಸುತ್ತದೆ. ಅನುಭವದ ಮೂಲಕ ಕಲಿಕೆಯ ನವೀನ ವಿಧಾನಗಳನ್ನು ಒದಗಿಸುವ ಈ ಕೇಂದ್ರವು ತರಬೇತಿ ಪಡೆಯುವವರಿಗೆ ಒಂದು ಅನನ್ಯ ಅವಕಾಶವನ್ನು ಒದಗಿಸಿ, ಆರೋಗ್ಯದ ಗುಣಮಟ್ಟವನ್ನು ಸುಧಾರಿಸುತ್ತದೆ. ಸುರಕ್ಷಿತ, ಮೇಲ್ವಿಚಾರಣೆ ಮತ್ತು ಕ್ರಿಯಾತ್ಮಕ ಕಲಿಕೆಯ ವಾತಾವರಣದಲ್ಲಿ ಆರೈಕೆದಾರರಲ್ಲಿ ಉನ್ನತಮಟ್ಟದ ಕಾರ್ಯಕ್ಷಮತೆಯನ್ನು ಇನ್ನಷ್ಟು ಬಲಪಡಿಸುತ್ತದೆ.
ಬೆಳಗಾವಿಯ ಜವಾಹರಲಾಲ ನೆಹರು ವೈದ್ಯಕೀಯ ಮಹಾವಿದ್ಯಾಲಯದ ವಿಶಾಲವಾದ ಆವರಣದಲ್ಲಿ ಸ್ಥಾಪಿತವಾದ ಈ ಕೇಂದ್ರವು ತಾಯಿಯ ಭ್ರೂಣದ ಆರೈಕೆ, ನವಜಾತಶಿಶು ಆರೈಕೆ ಮತ್ತು ವಯಸ್ಕ ರೋಗಿಗಳ ಆರೈಕೆಗಾಗಿ ಲ್ಯಾಪ್ರೊಸ್ಕೋಪಿಪ್ ಶಸ್ತ್ರಚಿಕಿತ್ಸೆ ಮತ್ತು ಇಂಟರವೆನ್ಷನಲ್ ಅಲ್ಟ್ರಾಸೌಂಡ್ ತರಬೇತಿಗಾಗಿ ಸಂಪೂರ್ಣ ದೇಹದ ಅತ್ಯಾಧುನಿಕ ಗುಣಮಟ್ಟದ ಸಿಮ್ಯುಲೇಟರ‍್ಸ್‌ಗಳನ್ನು ಹೊಂದಿದೆ.

ಸರಿಸುಮಾರು ೮೦೦೦ ಚ.ಅಡಿ. ವಿಸ್ತೀರ್ಣದಲ್ಲಿ ವ್ಯಾಪಿಸಿರುವ ಈ ಕೇಂದ್ರವನ್ನು ನಿಜವಾದ ಕ್ಲಿನಿಕಲ್ ಪರಿಸರವನ್ನು ಅನುಕರಿಸುವ ಮೂಲಕ ಅಂತರ್‌ವೃತ್ತಿಪರ ತರಬೇತಿಯನ್ನು ಅನುಮತಿಸಲು ತೀವ್ರ ನಿಗಾ ಘಟಕ, ಶಸ್ತ್ರಚಿಕಿತ್ಸಾ ಕೊಠಡಿ ಮತ್ತು ಹೊರರೋಗಿಗಳ ವಿಭಾಗಗಳಾಗಿ ವಿಂಗಡಿಸಲಾಗಿದೆ. ಸ್ನಾತಕೋತ್ತರ ಹಾಗೂ ಸುಪರಸ್ಪೆಷಾಲಿಟಿ ಕೋರ್ಸ್‌ಗಳ ವಿದ್ಯಾರ್ಥಿಗಳಿಗಾಗಿ ಸಹಾಯಕವಾಗಲು ಸಿಮ್ಯುಲೇಟರ‍್ಸ್‌ಗಳೊಂದಿಗೆ ಭವಿಷ್ಯದ ವಿಸ್ತರಣೆಗೂ ಅವಕಾಶ ಕಲ್ಪಿಸಲಾಗಿದೆ.

ಈ ಕೇಂದ್ರವು ಔಷಧ, ಶುಶ್ರೂಷಾ, ಬಯೋಮೆಡಿಕಲ್, ಐಟಿ ಮತ್ತು ಸಂಬಂಧಿತ ವಿeನ ಕ್ಷೇತ್ರಗಳಿಂದ ತರಬೇತಿ ಪಡೆದ ಬೋಧನಾ ಪ್ರಕ್ರಿಯೆಯಲ್ಲಿ ಭಾಗಿಯಾಗುವ ವೃತ್ತಿಪರ ಅಧ್ಯಾಪಕರನ್ನು ಹೊಂದಿದೆ. ಕೇಂದ್ರದ ಕಾರ್ಯಚಟುವಟಿಕೆಗಳನ್ನು ಕೆಎಲ್‌ಇ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಆಂಡ್ ರಿಸರ್ಚ್‌ನ ಗೌರವಾನ್ವಿತ ಕುಲಾಧಿಪತಿಗಳಾದ ಡಾ.ಪ್ರಭಾಕರ ಕೋರೆ ಹಾಗೂ ಕುಲಪತಿಗಳಾದ ಡಾ.ವಿವೇಕ ಸಾವಜಿ ಅವರ ನೇತೃತ್ವದ ಸಮಿತಿಯು ನಿರಂತರವಾಗಿ ಮೇಲ್ವಿಚಾರಣೆಯನ್ನು ಮಾಡುತ್ತದೆ.
ಕೆಎಲ್‌ಇ ಅತ್ಯಾಧುನಿಕ ಸಿಮ್ಯುಲೇಶನ್ ಸೆಂಟರ್ ಹಾಗೂ ಕ್ಲಿನಿಕಲ್ ಸ್ಕಿಲ್ಸ್ ಲ್ಯಾಬ್‌ನ ಅಧಿಕೃತ ಉದ್ಘಾಟನೆಯನ್ನು  ಭಾನುವಾರ ಮಧ್ಯಾಹ್ನ 2  ಗಂಟೆಗೆ ನಿಗದಿಪಡಿಸಲಾಗಿದೆ. ಕೇಂದ್ರ ಗೃಹ ಸಚಿವ  ಅಮಿತ ಶಹಾ ಅವರಿಂದ ಉದ್ಘಾಟನೆಗೊಳ್ಳಲಿದೆ.

ಕರ್ನಾಟಕದ  ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಂಸದೀಯ ವ್ಯವಹಾರ, ಕಲ್ಲಿದ್ದಲು ಹಾಗೂ ಗಣಿ ಸಚಿವ ಪ್ರಹ್ಲಾದ ಜೋಶಿ ಅವರು ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.

ವಿವಿಧ ಸಿಮ್ಯುಲೇಶನ್ ಮತ್ತು ಕೌಶಲ್ಯ ಆಧಾರಿತ ಮುಂದುವರೆದ ವೈದ್ಯಕೀಯ ಶಿಕ್ಷಣ ಮತ್ತು ಕಾರ್ಯಾಗಾರಗಳನ್ನು ಆಯೋಜಿಸುವುದು ಜೊತೆಗೆ ದೈನಂದಿನ ತರಬೇತಿ ಮತ್ತು ಚಟುವಟಿಕೆಗಳೊಂದಿಗೆ ಈ ಕೇಂದ್ರವು ಕಾರ್ಯನಿರ್ವಹಿಸಲಿದೆ.

ಕೆಎಲ್ಇ ನಿರ್ದೇಶಕರೂ, ವಿಧಾನಪರಿಷತ್ತಿನ ಮುಖ್ಯಸಚೇತಕರೂ ಆಗಿರುವ ಮಹಾಂತೇಶ ಕವಟಗಿಮಠ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button