Karnataka NewsLatest

ಗಡಿ ವಿವಾದ: ಬಿಜೆಪಿ ನಾಯಕರೆಲ್ಲ ಸೇರಿ ಅಮಿತ್ ಶಾ ಗಮನ ಸೆಳೆಯಲಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ದೀರ್ಘ ಕಾಲದಿಂದ ಬಾಕಿ ಇರುವ, ಅನಗತ್ಯ ಕಿರಿಕಿರಿಗೆ ಕಾರಣವಾಗಿರುವ ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದವನ್ನು ಸುಪ್ರಿಂ ಕೋರ್ಟ್ ನಲ್ಲಿ ವಜಾಗೊಳಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಕೇಂದ್ರ ಗೃಹ ಸಚಿವರಿಗೆ ಕರ್ನಾಟಕದ ಬಿಜೆಪಿ ನಾಯಕರೆಲ್ಲ ಸೇರಿ ಮನವರಿಕೆ ಮಾಡಿಕೊಡಬೇಕಿದೆ.

ಭಾನುವಾರ ಬೆಳಗಾವಿಗೆ ಆಗಮಿಸುತ್ತಿರುವ ಅಮಿತ್ ಶಾ ಅವರನ್ನು ಎಲ್ಲ ನಾಯಕರು ಭೇಟಿಯಾಗಿ, ಗಡಿ ವಿವಾದವನ್ನು ಮಹಾರಾಷ್ಟ್ರ ಅನಗತ್ಯವಾಗಿ ಕೆಣಕುತ್ತಿರುವುದರಿಂದ ಮತ್ತು ಸುಪ್ರಿಂ ಕೋರ್ಟ್ ಗೆ ಹೋಗಿರುವುದರಿಂದ ಆಗುತ್ತಿರುವ ಸಮಸ್ಯೆಗಳನ್ನು ತಿಳಿಸಿ, ವಿವಾದವನ್ನು ಶಾಶ್ವತವಾಗಿ ಇತ್ಯರ್ಥಗೊಳಿಸಲು ಮುಂದಾಗುವಂತೆ ಮನವೊಲಿಸಬೇಕು.

ಗಡಿ ವಿವಾದ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ. ಇದೇನಿದ್ದರೂ ಸಂಸತ್ತಿನಲ್ಲಿ ಇತ್ಯರ್ಥವಾಗಬೇಕಿರುವ ವಿಷಯ. ಹಾಗಾಗಿ ಸುಪ್ರಿಂ ಕೋರ್ಟ್ ನಿಂದ ಮಹಾರಾಷ್ಟ್ರ ಅರ್ಜಿ ಹಿಂಪಡೆದು, ಯಥಾ ಸ್ಥಿತಿ ಮುಂದುವರಿಸಿಕೊಂಡು ಹೋಗುವಂತೆ ಒತ್ತಡ ತರಬೇಕು ಎಂದು ಅಮಿತ್ ಶಾ ಅವರನ್ನು ಒತ್ತಾಯಿಸಬೇಕು.

ರಾಜ್ಯದ ಬಿಜೆಪಿ ನಾಯಕರಿಗೆ ಈ ಕುರಿತು ಉತ್ತಮ ಅವಕಾಶ ಒದಗಿ ಬಂದಿದೆ. ಕೇಂದ್ರ ಗೃಹ ಇಲಾಖೆ ಮನಸ್ಸು ಮಾಡಿದರೆ ಈ ವಿವಾದ ಇತ್ಯರ್ಥ ದೊಡ್ಡ ವಿಷಯವಲ್ಲ. ಹಾಗಾಗಿ ಬಿಜೆಪಿ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು.

ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ

ಮಹಾರಾಷ್ಟ್ರ ದಾಖಲಿಸಿರುವ ಪ್ರರಣವನ್ನು ವಜಾಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹಿರಿಯ ವಕೀಲ ಹಾಗೂ ಗಡಿತಜ್ಞ ಡಾ. ರವೀಂದ್ರ ತೋಟಿಗೇರ ಒತ್ತಾಯಿಸಿದ್ದಾರೆ.

ಈ ಕುರಿತು ಅವರು ವಿವರ ಮಾಹಿತಿ ಒದಗಿಸಿದ್ದಾರೆ.

ಕರ್ನಾಟಕ ಹಾಗೂ ಮಹಾರಾಷ್ಟ್ರ ಸೇರಿದಂತೆ ಇನ್ನೀತರ ರಾಜ್ಯಗಳಿಗೆ ಹೊಂದಿಕೊಂಡಿರುವ ಗಡಿ ಪ್ರಕರಣದ ವಿಚಾರ ದಿವಾಣಿ ನ್ಯಾಯಾಲಯದ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರೆ ರಾಜ್ಯಗಳ ಮಧ್ಯದ ಗಡಿ ವಿವಾದ ಕೇಂದ್ರ ಗೃಹ ಸಚಿವರ ಅಂಗಗಳಲ್ಲಿದ್ದು, ಇದೀಗ ಅಮಿತ ಶಾ ಅವರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದು ತೀವ್ರ ಕುತೂಹಲ ಮೂಡಿಸಿದೆ.
ಮಹಾರಾಷ್ಟ್ರ ಹಾಗೂ ಕರ್ನಾಟಕದ ಗಡಿ ವಿವಾದ ಕುರಿತು 2004 ರಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರಿಂ ಕೋರ್ಟ್‌ನಲ್ಲಿ ಅತೀ ಹೆಚ್ಚು ಮರಾಠಿ ಮಾತನಾಡುವ ಪ್ರದೇಶಗಳಾದ ಬೆಳಗಾವಿ ಹಾಗೂ 810 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ವಿಲೀನೀಕರಣಗೊಳಿಕೊಳ್ಳಬೇಕೆಂದು ದಿವಾಣಿ ಪ್ರಕರಣವೊಂದನ್ನು ದಾಖಲಿಸಿದೆ.

ರಾಜ್ಯ ಪುನರ್ ವಿಂಗಡಣಾ ಕಾಯ್ದೆ 1956 ಕಾಯ್ದೆ ಕಲಂ 7(1) (b) & (c)ಮತ್ತು 8(1)(a)(1)ಯನ್ನು ರದ್ದುಪಡಿಸಿ, ಹೆಚ್ಚಿನ ಸಂಖ್ಯೆಯ ಮರಾಠಿ ಭಾಷಿಕರನ್ನು ಹೊಂದಿರುವ ಬೆಳಗಾವಿ ಜಿಲ್ಲೆ ಸೇರಿದಂತೆ ಗಡಿ ಭಾಗದ 810 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕು ಎಂದು ವಾದವನ್ನು ಮುಂದಿಟ್ಟುಕೊಂಡು ಸುಪ್ರಿಂಕೋರ್ಟ್ ನಲ್ಲಿ  ಪ್ರಕರಣ ದಾಖಲಿಸಿದೆ.

ಆದರೆ ಗಡಿ ವಿವಾದವು ಯಾವುದೇ ದಿವಾಣಿ ನ್ಯಾಯಾಲಯ, ಪ್ರಧಾನ ಮಂತ್ರಿ, ಸಂಸದೀಯ ವ್ಯವಹಾರ ಹಾಗೂ ಕಾನೂನು ಮಂತ್ರಾಲಯದ ವ್ಯಾಪ್ತಿಗೊಳಪಡುವುದಿಲ್ಲ. ಆದರೆ ಸಂಸತ್ತಿನಲ್ಲಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ. ಸಂಸತ್ತನಲ್ಲಿ ಚರ್ಚೆಗೆ ತರಬಹುದಾದಲ್ಲಿ ಪ್ರಕರಣವನ್ನು ಸ್ವತಃ ಕೇಂದ್ರ ಗೃಹ ಸಚಿವರೇ ಪ್ರಸ್ತಾವ ಸಲ್ಲಿಸಬೇಕು. ಅಂದಾಗ ಮಾತ್ರ ಚರ್ಚೆ ನಡೆಸಿ ಯಾವುದೇ ನಿರ್ಧಾರ ತೆಗೆದುಕೊಳ್ಳಬಹುದಾಗಿದೆ.

ಧ್ವಂದ್ವ ನಿಲುವಿನಲ್ಲಿ ಮಹಾರಾಷ್ಟ್ರ :
ಗಡಿ ವಿಷಯಲ್ಲಿ ಮಹಾರಾಷ್ಟ್ರ ಸರ್ಕಾರ ದ್ವಂಧ್ವ ನಿಲುವು ತಾಳಿದ್ದಲ್ಲದೇ ನ್ಯಾಯಾಲಯದ ಮುಂದೆ ಪ್ರಕರಣ ದಾಖಲಿಸಿ ಕೈ ಕಟ್ಟಿಸಿಕೊಂಡಿದೆ. ಎಂಇಎಸ್ ಕಾರ್ಯಕರ್ತ ಹಾಗೂ ವಕೀಲ ಅರುಣಕುಮಾರ ದತ್ತಾತ್ರೇಯ ಸರದೇಸಾಯಿ ಎಂಬುವರು 1988 ರಲ್ಲೆ ಬೆಳಗಾವಿ ಜಿಲ್ಲೆಯ ಖಾನಾಪೂರದ ದಿವಾಣಿ ನ್ಯಾಯಾಲಯದಲ್ಲಿ ರಾಜ್ಯ ಪುನರ್ ವಿಂಗಡಣಾ ಕಾಯ್ದೆ 1956 ಕಾಯ್ದೆ ಕಲಂ 7(1)(b) ಮತ್ತು 8(1)(a) ಹಾಗೂ 8(2)ಯನ್ನು ರದ್ದುಪಡಿಸಿ, ಹೆಚ್ಚಿನ ಸಂಖ್ಯೆಯ ಮರಾಠಿ ಭಾಷಿಕರನ್ನು ಹೊಂದಿರುವ ಬೆಳಗಾವಿ ಜಿಲ್ಲೆ ಸೇರಿದಂತೆ ಗಡಿ ಭಾಗದ 810 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಬೇಕು. ದೈಹಿಕವಾಗಿ ಈ ಪ್ರದೇಶಲ್ಲಿದ್ದು ಮಾನಸಿಕವಾಗಿ ನಾವೆಲ್ಲರೂ ಮಹಾರಾಷ್ಟರದಲ್ಲಿದ್ದೇವೆ. ಆದ್ದರಿಂದ ಇಲ್ಲಿ ಯಾವುದೇ ರೀತಿಯ ತೆರಿಗೆ ತುಂಬುವುದಿಲ್ಲ. ಕರ್ನಾಟಕ ಸರ್ಕಾರ, ಅಂದಿನ ಬೆಳಗಾವಿ ಎಸ್ಪಿ ಕೆ.ನಾರಾಯಣರಾವ್ ಹಾಗೂ ಖಾನಾಪೂರ ಠಾಣೆಯ ಪಿಎಸ್‌ಐ ಸುರೇಶ ನಾಯ್ಡು ವಿರುದ್ಧ ಪ್ರಕರಣ ದಾಖಲಿಸಿದ್ದರು. ಅಲ್ಲದೇ ಪೊಲೀಸ್‌ರು ನಮ್ಮ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ವಾದ ಮಾಡಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಖಾನಾಪುರದ ದಿವಾಣಿ ನ್ಯಾಯಾಲಯ ಗಡಿ ಪ್ರಕರಣ ದಿವಾಣಿ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ, ಕೇಂದ್ರೀಯ ಕಾಯ್ದೆಗಳು ಸಂವಿಧಾನಿಕ ಹಕ್ಕನ್ನು ಪಡೆದುಕೊಂಡು ಬಂದಿರುವುದರಿಂದ ರಾಜ್ಯ ಪುನರ್ ವಿಂಗಡಣಾ ಕಾಯ್ದೆ 1956 ಕಾಯ್ದೆ 7 ಮತ್ತು 8ನ್ನು ರದ್ದುಪಡಿಸುವ ಅಧಿಕಾರ ದಿವಾಣಿ ನ್ಯಾಯಾಲಯದ ವ್ಯಾಪ್ತಿಗಿಲ್ಲ ಎಂದು ತಿಳಿಸಿ, ಈ ಅರ್ಜಿಯನ್ನು ತೀರಸ್ಕೃರಿಸಿದ್ದರಿಂದ ಜಿಲ್ಲಾ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು, ಜಿಲ್ಲಾ ನಾಯ್ಯಾಲಯವೂ ವಿಚಾರಣೆ ನಡೆಸಿ, ಮತ್ತೆ ಕೆಳ ನ್ಯಾಯಾಲಯಕ್ಕೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ ಮರುಪರಿಶೀಲನೆ ನಡೆಸುವಂತೆಯೂ ಆದೇಶಿಸಿತ್ತು. ಇದೆ ಪ್ರಕರಣದಲ್ಲಿ
ಮಹಾರಾಷ್ಟ್ರ ಸರ್ಕಾರ 07/11/1988 ರಂದು ಕೈಫಿಯತ್ ಸಲ್ಲಿಸಿತ್ತು. ಕೈಫಿಯತ್ತಿಗೆ ಕೊಲ್ಹಾಪುರ ಡಿಸ್ಟಿಕ್ಟ್ ಗರ್ವನಮೆಂಟ್ ಪಿಡ್ಲರ್ ಎಸ್.ಜಿ.ನಾಯಿಕ ಎಂಬುವರು ಸಹಿಮಾಡಿದ್ದರು. ಕೈಫಿಯತ್ತನಲ್ಲಿ ಗಡಿ ವಿಚಾರವು ದಿವಾಣಿ ನ್ಯಾಯಾಲಯದ ವ್ಯಾಪ್ತಿಗಿಲ್ಲ ಹಾಗೂ ರಾಜ್ಯ ಪುನರ್ ವಿಂಗಡಣಾ ಕಾಯ್ದೆಯ ಕಲಂನ್ನು ರದ್ದುಗೊಳಿಸುವ ಅಧಿಕಾರ ನ್ಯಾಯಾಲಯಕ್ಕೆ ಇಲ್ಲ. ಗಡಿ ವಿಚಾರ ಸಂಸತ್ತಿನಲ್ಲಿ ಚರ್ಚೆ ಮಾಡುವ ಮೂಲಕ ಅದಿನಿಯಮಕ್ಕೆ ತಿದ್ದುಪಡಿಮಾಡಬೇಕಾಗುತ್ತದೆ ಹಾಗೂ ಈ ಮೂಲಕವೇ ಇತ್ಯರ್ಥಪಡಿಸಬೇಕಾಗುತ್ತದೆ ಎಂದು ಕೈಫಿಯತನಲ್ಲಿ ಸ್ಪಷ್ಟವಾಗಿ ನಮೂದಿಸಿದ್ದಾರೆ. ಒಂದು ಕಡೆ ಮಹಾರಾಷ್ಟ್ರ ಸರ್ಕಾರದ ಪಿಡ್ಲರ್ ಸಿದ್ದಪಡಿಸಿದ ಕೈಫಿಯತ್ತನಲ್ಲಿ ನ್ಯಾಯಾಲಯಕ್ಕೆ ಅಧಿಕಾರ ಇಲ್ಲ ಎಂಬ ಅಂಶವನ್ನು ನಮೂದಿಸಲಾಗಿದ್ದರೂ, ಗಡಿ ವಿಚಾರ ಕುರಿತು ೨೦೦೪ ರಲ್ಲಿ ಮಹಾರಾಷ್ಟ್ರ ರಾಜ್ಯವು ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ರಾಜ್ಯ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಿಕೊಂಡು ಸುಪ್ರಿಂ ಕೋರ್ಟಿನ ಮೋರೆ ಹೋಗಿರುವುದು ಎಷ್ಟರ ಮಟ್ಟಿಗೆ ಸರಿ.

1988 ರಲ್ಲಿ ಖಾನಾಪೂರ ದಿವಾಣಿ ನ್ಯಾಯಾಲಯ ಸ್ಪಷ್ಟವಾಗಿ ನಿರ್ಧಾರ ಕೈಗೊಂಡಿದ್ದರೂ, ಮಹಾರಾಷ್ಟ್ರ ಸರ್ಕಾರವು ಎಸ್ ಜಿ ನಾಯ್ಕರ ಮೂಲಕ ಸಲ್ಲಿಸಿರುವ ಕೈಫಿಯತನಲ್ಲಿ ಗಡಿ ಪ್ರಕರಣ ದಿವಾಣಿ ನ್ಯಾಯಾಲಯದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟವಾಗಿ ನಮೋದಿಸಲಾಗಿದೆ. ಆದರೂ 2004 ರಲ್ಲಿ ಮಹಾರಾಷ್ಟ್ರ ಸುಪ್ರಿಂ ಕೋರ್ಟ್‌ನಲ್ಲಿ ಪ್ರಕರಣ ದಾಖಲಿಸುವ ಮೂಲಕ ಸತ್ತ ಹಾವಿಗೆ ಜೀವ ಇದೆ ಎಂದು ಬಿಂಬಿಸುವ ಕಾರ್ಯ ಮಾಡುತ್ತಿದೆ.
1988 ರಲ್ಲಿನ ದಿವಾಣಿ ನ್ಯಾಯಲಯದ ತೀರ್ಪು ಸೇರಿದಂತೆ ಒಟ್ಟು 400 ಪುಟಗಳ ಮಹತ್ವದ ದಾಖಲೆಗಳನ್ನು ಈಗಾಗಲೇ ಕೇಂದ್ರ ಸಂಸದೀಯ, ಕಾನೂನು ಮತ್ತು ಪ್ರಧಾನ ಮಂತ್ರಿ ಮಂತ್ರಾಯಲಕ್ಕೆ ಸಲ್ಲಿಸಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಮೂರು ಮಂತ್ರಾಲಯಗಳು ಗಡಿ ಪ್ರಕರಣವು ತಮ್ಮ ವ್ಯಾಪ್ತಿಗೆ ಬರುವುದಿಲ್ಲ ಹೊರತು ಗೃಹ ಮಂತ್ರಾಯಲಕ್ಕೆ ಬರುತ್ತವೆ ಎಂದು ಪತ್ರ ನೀಡಿವೆ. ಅಲ್ಲದೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಸಲ್ಲಿಸಲಾಗಿದೆ. ಈ ಬಗ್ಗೆ ಸಕಾರಾತ್ಮವಾಗಿ ಸ್ಪಂದಿಸಿರುವ ಮುಖ್ಯಮಂತ್ರಿಗಳು ಕರ್ನಾಟಕ ಗಡಿ ಹಾಗೂ ನದಿ ಸಂರಕ್ಷಣಾ ಆಯೋಗಕ್ಕೂ ಪತ್ರಬರೆದಿದ್ದಾರೆ. ಈ ದಾಖಲೆಗಳನ್ನು ಇಟ್ಟುಕೊಂಡು ಮಹಾರಾಷ್ಟ್ರ ದಾಖಲಿಸಿರುವ ಪ್ರರಣವನ್ನು ವಜಾಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು  ಡಾ. ರವೀಂದ್ರ ತೋಟಿಗೇರ ಒತ್ತಾಯಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button