ಕಿತ್ತೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ
ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು : ಖಚಿತ ಮಾಹಿತಿ ಮೇರೆಗೆ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಎರಡು ಲಾರಿಗಳನ್ನು ಕಿತ್ತೂರು ಪೋಲಿಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಹಾವೇರಿಯಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ ಅನ್ನಭಾಗ್ಯ ಅಕ್ಕಿಯ ಲಾರಿಗಳನ್ನು ಕಿತ್ತೂರು ಗಜರಾಜ ಪ್ಯಾಲೇಸ್ ಎದುರಿಗೆ ರಾಷ್ಟ್ರಿಯ ಹೆದ್ದಾರಿ 4 ರಲ್ಲಿ ವಶಕ್ಕೆ ಪಡೆದು, ಚಾಲಕರು ಹಾಗೂ ಕ್ಲೀನರ್ಗಳನ್ನು ಬಂಧಿಸಿದ್ದಾರೆ.
ಎರಡು ಲಾರಿಗಳಲ್ಲಿ ಸಾಗಿಸುತ್ತಿದ್ದ 12 ಲಕ್ಷ ಮೌಲ್ಯದ ತಲಾ 50ಕೆಜಿಯ 1040 ಚೀಲ ರೇಷನ್ ಅಕ್ಕಿ, ಎರಡು ಲಾರಿ, 4 ಮೋಬೈಲ್ ಪೋನ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೊಪ್ಪಳ ಜಿಲ್ಲೆಯ ಕವಲೂರಿನ ಸಂತೋಷ ಅಶೋಕ ಕಾಮೋಜಿ (21), ಮಹೇಶ ಶರಣಯ್ಯ ಕುರವತ್ತಿಮಠ (20), ಸವದತ್ತಿ ತಾಲೂಕಿನ ಕಗರಾಳ ಗ್ರಾಮದ ಬುಡಾನ್ಸಾಬ ಅಗಸರ(24), ನವಲಗುಂದ ತಾಲೂಕಿನ ತಿರ್ಲಾಪೂರ ಗ್ರಾಮದ ಸುಲೇಮಾನ್ ಅಗಸರ(20) ಬಂಧಿತರು. ಆರೋಪಿಗಳನ್ನು ಬಂಧಿಸಿ ತನಿಖೆಗೆ ಒಳಪಡಿಸಿ ಜಾಲದ ಹಿಂದಿರುವ ಮತ್ತೊಬ್ಬ ಆರೋಪಿ ಹಾನಗಲ್ ತಾಲೂಕಿನ ಹಿರೂರಿನ ಸಿದ್ದನಗೌಡ ಚನ್ನಬಸಪ್ಪ ಪಾಟೀಲ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಆತನ ಬಂಧನಕ್ಕೆ ಕಿತ್ತೂರು ಪೋಲಿಸರು ಜಾಲ ಬೀಸಿದ್ದಾರೆ.
ಈ ಕುರಿತು ಕಿತ್ತೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಿತ್ತೂರು ಸಿಪಿಐ ಮಂಜುನಾಥ ಕುಸಗಲ್, ಪಿಎಸ್ಐ ದೇವರಾಜ ಉಳ್ಳಾಗಡ್ಡಿ ಇನ್ನೂ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ