
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೇಂದ್ರದ 3 ಕೃಷಿ ಕಾಯ್ದೆ ವಿರೋಧಿಸಿ ಕರೆ ನೀಡಿರುವ ಚಕ್ಕಾ ಜಾಮ್ ಪ್ರತಿಭಟನೆ ರಾಜ್ಯಾದ್ಯಂತ ಆರಂಭವಾಗಿದ್ದು, ರೈತರು ರಾಜ್ಯದ ಹಲವು ಭಾಗಗಳಲ್ಲಿ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು, ಮೈಸೂರು, ದಾವಣಗೆರೆ, ತುಮಕೂರು, ಕೊಪ್ಪಳ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ಬಳ್ಳಾರಿ, ಬೆಳಗಾವಿ, ಧಾರವಾಡ,ಗುಲ್ಬರ್ಗ, ಬಾಗಲಕೋಟೆ, ರಾಯಚೂರು, ಗದಗ, ಹಾವೇರಿ, ಬೀದರ್, ಶಿವಮೊಗ್ಗ, ಉತ್ತರ ಕನ್ನಡದಲ್ಲಿ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುತ್ತಿದೆ.
ಯಲಹಂಕದಲ್ಲಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಹೆದ್ದಾರಿ ತಡೆ ನಡೆಸಲಾಯಿತು. ಈ ವೇಳೆ ಪೊಲೀಸರು 3 ಗಂಟೆಗಳ ಕಾಲ ಹೆದ್ದಾರಿ ತಡೆಗೆ ಅವಕಾಶ ನೀಡುವುದಿಲ್ಲ. ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದು ಹೇಳಿ ಪ್ರತಿಭಟನಾಕರರನ್ನು ವಶಕ್ಕೆ ಪಡೆಯಲು ಮುಂದಾದರು. ಈ ವೇಳೆ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆಯಿತು. ಅಂತಿಮವಾಗಿ ಪೊಲೀಸರು ಕುರುಬೂರು ಶಾಂತಕುಮಾರ್ ಸೇರಿದಂತೆ ಹಲವು ರೈತರನ್ನು ವಶಕ್ಕೆ ಪಡೆದರು.
ಈ ವೇಳೆ ಮಾತನಾಡಿದ ಶಾಂತಕುಮಾರ್, ಸರ್ಕಾರ ನಮ್ಮ ಮೇಲೆ ಬಲ ಪ್ರಯೋಗ ಮಾಡಿ ಬಂಧಿಸುತ್ತಿದೆ. ಕೇಂದ್ರದ ಕೃಷಿ ಕಾಯ್ದೆ ರೈತರಿಗೆ ಮಾರಕವಾಗಿದ್ದು, ರೈತರ ಹಕ್ಕನ್ನು ಮೋದಿ ಸರ್ಕಾರ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದರೆ ರೈತರ ಧ್ವನಿಯನ್ನೂ ಹತ್ತಿಕ್ಕುವ ಯತ್ನ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ