Latest

ರಾಮ ಮಂದಿರ ನಿರ್ಮಾಣಕ್ಕೆ ಬೆಂಬಲವಿದೆ, ಆದರೆ ಅದೇ ಹೆಸರಲ್ಲಿ ನಡೆಯುತ್ತಿರುವ ವಿಭಜನೆಗೆ ನನ್ನ ವಿರೋಧವಿದೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಮನ ಹೆಸರಿನ ಮೇಲೆ ನಡೆಯುತ್ತಿರುವ ರಾಜಕೀಯ, ಹಣದ ಕೊಳ್ಳೆ, ಅಧಿಕಾರಕ್ಕಾಗಿ ನಡೆಯುತ್ತಿರುವ ಸ್ತುತಿಯನ್ನು ಪ್ರಶ್ನೆ ಮಾಡಿದ್ದಕ್ಕೆ ನಕ(ಇ)ಲಿ ಹಿಂದೂಗಳು ಬೀದಿಗೆ ಬಿದ್ದು ಅರಚಾಡುತ್ತಿವೆ. ಇವರಿಗೆ ನೆನಪಿರಲಿ, ದೇವರಿಗಾಗಿ ನಾವು ಮಾಡಿದಷ್ಟು ಪ್ರಾರ್ಥನೆ, ಪೂಜೆಗಳ ಮುಂದೆ, ಈ ನಕಲಿಗಳು ಮಾಡಿದ ‘ಅಧಿಕಾರ ರಾಮ ಜಪ’ ಕಾಲು ಭಾಗಕ್ಕೂ ಸಾಲದು ಎಂದು ಮಾಜಿ ಸಿಎಂ ಹೆಚ್ ದಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ರಾಮ ಮಂದಿರ ದೇಣಿಗೆ ಸಂಗ್ರಹ ವಿಚಾರವಾಗಿ ತಾವು ನೀಡಿದ್ದ ಹೇಳಿಕೆ ವಿವಾದಕ್ಕೀಡಾದ ಹಿನ್ನೆಲೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ನನ್ನ ಹೇಳಿಕೆಯಲ್ಲಿ ಬೇಜವಾಬ್ದಾರಿ ಗುರುತಿಸಿರುವ ಧಾರ್ಮಿಕ ಮುಖಂಡರೊಬ್ಬರು ಮೊದಲು ತಮ್ಮ ಜವಾಬ್ದಾರಿ ಅರಿಯಬೇಕು. ರಾಮನ ಭಕ್ತಿಯು ಹಣ,ಅಧಿಕಾರ,ರಾಜಕಾರಣವಾಗಿ ಪರಿವರ್ತನೆಯಾಗುವುದನ್ನು ಅವರು ತಡೆದಿದ್ದರೆ, ಅದು ಅವರ ಜವಾಬ್ದಾರಿಯ ಸಮರ್ಥ ನಿರ್ವಹಣೆ ಆಗಿರುತ್ತಿತ್ತು. ಅದು ಬಿಟ್ಟು ರಾಜಕೀಯದ ಹೇಳಿಕೆ ನೀಡುವುದು ಧಾರ್ಮಿಕ ನಾಯಕರಿಗೆ ಶೋಭೆಯಲ್ಲ ಎಂದಿದ್ದಾರೆ.

ಒಬ್ಬರು ಹೇಳಿದ್ದಾರೆ… ಶ್ರೀರಾಮನ ಮೇಲೆ ನಂಬಿಕೆ ಇದ್ದರೆ ಕುಮಾರಸ್ವಾಮಿ ದೇಣಿಗೆ ನೀಡಲಿ ಎಂದು. ಹಣ, ದೇಣಿಗೆ ನೀಡಿ ಶ್ರೀರಾಮನನ್ನು ಕುರುಡು ಕುರುಡಾಗಿ ಆರಾಧಿಸುವ ಭಕ್ತ ನಾನಲ್ಲ. ಹಣ ನೀಡಿ ನನ್ನ ಭಕ್ತಿ ಸಾಬೀತು ಮಾಡಬೇಕಿಲ್ಲ. ನಮ್ಮೆಲ್ಲರ ಭಕ್ತಿ, ಭಾವನೆಗಳನ್ನು ಹಣವಾಗಿ, ಅಧಿಕಾರವಾಗಿ ಪರಿವರ್ತಿಸುವ ನಿಮ್ಮ ನಡವಳಿಕೆ ತಿದ್ದಿಕೊಳ್ಳಿ. ಪಬ್ಲಿಸಿಟಿಗೆ ನಾನು ಈ ಹೇಳಿಕೆ ಕೊಟ್ಟಿದ್ದೇನೆ ಎಂದು ಸೋದರ ಶ್ರೀರಾಮುಲು ಹೇಳಿದ್ದಾರೆ. ಪಾಪ ಅವರು ಮುಗ್ಧರು. ದೈವಬಲ, ಜನಾಶಿರ್ವಾದದಿಂದ 2 ಬಾರಿ ಸಿಎಂ ಆದ ನಾನು ಇನ್ನು ಯಾವ ಪಬ್ಲಿಸಿಟಿ ಪಡೆಯಬೇಕಿದೆ? ನನಗೆ ಅದರ ಅಗತ್ಯವೇನಿದೆ? ರಾಮ ಮಂದಿರ ಆಗಬೇಕೆಂದು ಕುಮಾರಸ್ವಾಮಿ ಅವರ ಮನಸ್ಸಲ್ಲೂ ಇದೆ ಎಂಬ ಅವರ ಮಾತನ್ನು ಮಾತ್ರ ಅನುಮೋದಿಸುತ್ತೇನೆ ಎಂದು ತಿಳಿಸಿದ್ದಾರೆ.

ಇತಿಹಾಸ ಹೇಳುತ್ತಾ ನಿಂತಿರುವ ಪುರಾತನ ದೇಗುಲಗಳ ಹಿಂದೆ ಜನರನ್ನು ವಿಭಜಿಸಿದ ಕತೆಗಳಿಲ್ಲ. ಆ ದೇಗುಲಗಳ ನಿರ್ಮಾಣಕ್ಕಾಗಿ ದೇಣಿಗೆ ಹೆಸರಿನಲ್ಲಿ ಹಣ ಸಂಗ್ರಹಿಸಿದ ಉಲ್ಲೇಖವಿಲ್ಲ. ದೇವರನ್ನು ರಾಜಕೀಯಕ್ಕಾಗಿ ಉಪಯೋಗಿಸಿಕೊಂಡ ಉಲ್ಲೇಖವಿರುವ ಒಂದೇ ಒಂದು ಶಾಸನ ನಮಗೆ ಸಿಕ್ಕಿಲ್ಲ. ಈಗ ಇಂಥ ಕೃತ್ಯ ಮಾಡುತ್ತಿರುವವರು ದಯವಿಟ್ಟು ನಿಲ್ಲಿಸಿ.

ಈ ವಿಚಾರವಾಗಿ ಮಕ್ಕಳು-ಮರಿಗಳಿಗೆ,ಅಪ್ಪನ ಅಧಿಕಾರದ ಹಿಂದೆ ಅಡಗಿ ದುಡ್ಡು ಕೊಳ್ಳೆ ಹೊಡೆಯುತ್ತಿರುವ ಸ್ವಘೋಷಿತ ನವ ಇಲಿಗಳಿಗೆ ನಾನು ಪ್ರತಿಕ್ರಿಯಿಸಲಾರೆ. ಇಷ್ಟು ಹೇಳಿಯೂ ಅರ್ಥವಾಗದವರಿಗೆ ಹೇಳುವುದು ಇಷ್ಟೆ-ರಾಮಮಂದಿರ ಹಿಂದೂಗಳ ಭಕ್ತಿ,ಭಾವನೆಗಳ ಮೂರ್ತ ರೂಪ ಅದು ಆಗಬೇಕು. ಆದರೆ ಅದೇ ಹೆಸರಿನಲ್ಲಿ ನಡೆಯುತ್ತಿರುವ ವಿಭಜನೆಗೆ ನನ್ನ ವಿರೋಧವಿದೆ ಎಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button