ಬೇಡ ಜಂಗಮ ಸಮಾಜಕ್ಕೆ ಜಾತಿ ಪ್ರಮಾಣ ಪತ್ರಕ್ಕೆ ಒತ್ತಾಯ; ಬೇಡಿಕೆ ಈಡೇರಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಎಚ್ಚರಿಕೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಆರ್ಥಿಕವಾಗಿ ಹಾಗೂ ಶೈಕ್ಷಣೀಕವಾಗಿ ಹಿಂದುಳಿದ ಬೇಡ ಜಂಗಮ ಸಮಾಜಕ್ಕೆ ಜಾತಿ ಪ್ರಮಾಣ ಪತ್ರ ನೀಡಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಅಖಿಲ ಭಾರತ ಜಂಗಮ ಮಹಾಸಭಾದ ರಾಜ್ಯಾಧ್ಯಕ್ಷ ಅರುಣಕುಮಾರ ಜಡಿಮಠ ಎಚ್ಚರಿಕೆ ನೀಡಿದ್ದಾರೆ.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತ ಜಂಗಮ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕದ ಉದ್ಘಾಟನೆ ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಲವು ದಶಕಗಳಿಂದ ಸಾಂವಿಧಾನಿಕವಾಗಿ ಸಿಗಬೇಕಾದ ಜಾತಿ ಪ್ರಮಾಣ ಪತ್ರವನ್ನು ನೀಡದೇ ಅನ್ಯಾಯ ಮಾಡಲಾಗುತ್ತಿದೆ. ಇದರಿಂದ ಬೇಡ ಜಂಗಮರು ಆರ್ಥಿಕವಾಗಿ, ಶೈಕ್ಷಣಿಕವಾಗಿ ತೀರಾ ಹಿಂದುಳಿಯುವಂತಾಗಿದೆ. ಆದ್ದರಿಂದ ಜಾತಿ ಪ್ರಮಾಣ ಪತ್ರ ನೀಡಬೇಕು. ಬೇಡ ಜಂಗಮ ಸಮಾಜಕ್ಕೆ ಜಾತಿ ಪ್ರಮಾಣ ನೀಡದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಕಾರ್ಯಕ್ರಮ ರೂಪಿಸಲಾಗುವುದು ಎಂದು ಮುಖಂಡರು ಎಚ್ಚರಿಕೆ ನೀಡಿದರು.
ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡಬೇಕು ಎಂದು ಕಳೆದ 70ವರ್ಷಗಳಿಂದ ಹೋರಾಟ ಮಾಡುತ್ತ ಬರಲಾಗಿದೆ. ಆದರೆ ಇದುವರೆಗೂ ಫಲ ಸಿಕ್ಕಿಲ್ಲ. ಜಂಗಮ ಸಮಾಜ ಎಲ್ಲ ರೀತಿಯಿಂದ ಹಿಂದುಳಿದಿದ್ದು, ಮೀಸಲಾತಿಗೆ ಅರ್ಹವಾಗಿದ್ದರೂ ರಾಜಕೀಯ ಧುರೀಣರ ಮನೋಭಾವದಿಂದ ಮೀಸಲಾತಿ ಸಾಧ್ಯವಾಗಿಲ್ಲ. ಸಮಾಜಕ್ಕೆ ಮೀಸಲಾತಿ ದೊರೆಯದಿದ್ದರೆ ಹೋರಾಟ ತೀವ್ರಗೊಳ್ಳುವುದು ನಿಶ್ಚಿತ ಎಂದರು.
ಬೇಡ ಜಂಗಮ ಸಮಾಜದ ಮುಖಂಡ ಚಂದ್ರಶೇಖರ ಸವಡಿ ಸಾಲಿಮಠ ಮಾತನಾಡಿ, ಬೇಡ ಜಂಗಮ ಸಮಾಜಕ್ಕೆ ಜಾತಿ ಪ್ರಮಾಣ ಪತ್ರ ನೀಡುವಲ್ಲೂ ಸರ್ಕಾರ ಹಿಂದೇಟು ಹಾಕುತ್ತಿದೆ. ಈ ಧೋರಣೆ ಬದಲಾಗದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ರೂಪಿಸಲಾಗುವುದು ಎಂದರು.
ಅಖಿಲ ಭಾರತ ಜಂಗಮ ಮಹಾಸಭಾ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ಓಂಕಾರಮೂರ್ತಿ ಕೋಟಿಮಠ, ಎ.ಪಿ.ಚಿಕ್ಕಮಠ, ಸಂಗಯ್ಯ ಹಿರೇಮಠ, ಮಹಾಂತೇಶ ರಣಗಟ್ಟಿಮಠ, ಪ್ರಶಾಂತ ಗಾಲಿಮಠ ಅಧಿಕಾರ ಸ್ವೀಕರಿಸಿದರು.
ಈ ಕಾರ್ಯಕ್ರಮದಲ್ಲಿ ಅಖಿಲ ಭಾರತ ಜಂಗಮ ಮಹಾಸಭಾ ಕಾನೂನು ಸಲಹೆಗಾರ ವಸುಂಧರಾ, ಚಂದ್ರಕಲಾ ಮಠಪತಿ, ದುಂಡಯ್ಯ ಬೇವಿನಕೊಪ್ಪಮಠ, ಶಿವಕುಮಾರ ಶಿವಪೂಜಿಮಠ, ಶಿವಾನಂದ ಹಿರೇಮಠ, ರಾಜಶೇಖರ ಹಿರೇಮಠ, ಶಂಕರಯ್ಯ ಹಿರೇಮಠ, ಮಹಾದೇವ ಮಠಪತಿ, ಮಹೇಶ ಹಿರೇಮಠ, ಮಹಾಂತೇಶ ಹಿರೇಮಠ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ