
ಪ್ರಗತಿವಾಹಿನಿ ಸುದ್ದಿ; ಗದಗ: ಔಷಧಿಯ ಸಸ್ಯತಾಣ ಗದಗ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಮತ್ತೆ ಬೆಂಕಿ ಅವಘಡ ಸಂಭವಿಸಿದ್ದು, ಕಳೆದ ಮೂರು ದಿನಗಳಿಂದ ಹೊತ್ತಿ ಉರಿಯುತ್ತಿರುವ ಬೆಂಕಿಯ ಕೆನ್ನಾಲಿಗೆ ಗುಡ್ಡದ ಬಹುತೇಕ ಭಾಗಗಳನ್ನು ಆವರಿಸಿದೆ.
ಕಾಡ್ಗಿಚ್ಚಿನಿಂದಾಗಿ ಅಪಾರ ಪ್ರಮಾಣದ ಸಸ್ಯಸಂಕುಲ, ಪ್ರಾಣಿ-ಪಕ್ಷಿಗಳು, ವನ್ಯಜೀವಿಗಳು ಸಾವನ್ನಪ್ಪಿದ್ದು, 5 ಸಾವಿರ ಹೆಕ್ಟೇರ್ ಪ್ರದೇಶದ ಔಷಧಿ ಸಸ್ಯ ಪ್ರದೇಶ ಬೆಂಕಿಗಾಹುತಿಯಾಗಿದೆ.
ಮುಂಡರಗಿ ತಾಲೂಕಿನ ಡೋಣಿ ತಾಂಡಾದ ಬಳಿ ಕಿಡಿಗೇಡಿಗಳು ಕಪ್ಪತ್ತಗುಡ್ಡಕ್ಕೆ ಬೆಂಕಿ ಹಚ್ಚಿದ್ದಾರೆ. ಆರಂಭದಲ್ಲಿ ಒಂದು ಕಡೆ ಬೆಂಕಿ ಕಾಣಿಸಿಕೊಂಡಿದೆ. ಅದಾದ ಬಳಿಕ 10 ಕಡೆಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕಿಡಿಗೇಡಿಗಳ ಕೃತ್ಯವೇ ಇರಬೇಕು ಎಂಬುದು ಹಲವ ಆರೋಪ. ಕಪ್ಪತಗುಡ್ಡದ ತುಂಬೆಲ್ಲ ಬೆಂಕಿ ವ್ಯಾಪಿಸುತ್ತಿದ್ದು, ಬೆಂಕಿಯನ್ನು ನಿಯಂತ್ರಿಸುವುದು ಅರಣ್ಯ ಇಲಾಖೆ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ.
					
				
					
					
					
					
					
					
					


