Kannada NewsLatest

ಯಾರಾಗಲಿದ್ದಾರೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ?

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಸಲೀಲೆ ಸಿಡಿ ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಇದೀಗ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವೂ ತೆರವಾಗಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬೆಳಗಾವಿ ಜಿಲ್ಲಾ ಉಸ್ತುವಾರಿಯನ್ನು ಯಾರ ಹೆಗಲಿಗೆ ವಹಿಸಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ.

ಹಿಂದೆ ಬೆಳಗಾವಿ ಜಿಲ್ಲೆ ಉಸ್ತುವಾರಿಯನ್ನು ಜಗದೀಶ್ ಶೆಟ್ಟರ್ ಹೆಗಲಿಗೆ ವಹಿಸಲಾಗಿತ್ತು. ಆದರೆ ಅವರು ಜಿಲ್ಲೆಯನ್ನು ಸಂಪೂರ್ಣ ನಿರ್ಲಕ್ಷ್ಯಿಸಿದ್ದಾರೆ. ಜಿಲ್ಲೆಗೆ ಅವರು ಬರುತ್ತಲೂ ಇಲ್ಲ ಎಂದು ಸ್ವತ: ಬಿಜೆಪಿ ಕಾರ್ಯಕರ್ತರೇ ಆರೋಪಿಸಿದ್ದರು.

ಬಳಿಕ ಜಿಲ್ಲಾ ಉಸ್ತುವಾರಿ ಜವಾಬ್ದಾರಿಯನ್ನು ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್ ಜಾರಕಿಹೊಳಿಯವರಿಗೇ ವಹಿಸಲಾಗಿತ್ತು.  ಆದರೆ ಇದೀಗ ರಾಸಲೀಲೆ ಆರೋಪದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಮತ್ತೆ ಖಾಲಿಯಾಗಿದೆ.

ಉಮೇಶ ಕತ್ತಿ, ಲಕ್ಷ್ಮಣ ಸವದಿ ಹಾಗೂ ಶಶಿಕಲಾ ಜೊಲ್ಲೆ ಇವರಲ್ಲಿ ಒಬ್ಬರಿಗೆ ಸಚಿವಸ್ಥಾನ ನೀಡಬಹುದು.  ಉಮೇಶ್ ಕತ್ತಿ ಇದೀಗ ಸಚಿವ ಸಂಪುಟವನ್ನು ಸೇರ್ಪಡೆಯಾಗಿರುವುದರಿಂದ ಹಾಗೂ 8 ಬಾರಿ ಶಾಸಕರಾಗಿರುವ ಹಿರಿಯರೂ ಆಗಿರುವುದರಿಂದ ಅವರಿಗೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಕೊಡುವ ಸಾಧ್ಯತೆಯೂ ದಟ್ಟವಾಗಿದೆ.  ಲಕ್ಷ್ಮಣ ಸವದಿ ಬಳಿ ಉಪಮುಖ್ಯಮಂತ್ರಿಯಂತಹ ದೊಡ್ಡ ಜವಾಬ್ದಾರಿ ಇರುವುದರಿಂದ ಅವರಿಗೆ ಉಸ್ತುವಾರಿ ಕೊಡುವ ಸಾಧ್ಯತೆ ಕಡಿಮೆ. ಉಮೇಶ ಕತ್ತಿಯಂತಹ ಹಿರಿಯರೆದುರು ಶಶಿಕಲಾ ಜೊಲ್ಲೆಗೆ ಉಸ್ತುವಾರಿ ಜವಾಬ್ದಾರಿ ವಹಿಸುವ ಸಾಧ್ಯತೆಯೂ ಕ್ಷೀಣ.

ರಮೇಶ ಜಾರಕಿಹೊಳಿ ಅವರಿಂದ ಖಾಲಿಯಾಗಿರುವ ಸ್ಥಾನಕ್ಕೆ ಬಾಲಚಂದ್ರ ಜಾರಕಿಹೊಳಿ ಅವರನ್ನು ಸೇರಿಸಿಕೊಂಡರೆ ಅವರಿಗೇ ಉಸ್ತುವಾರಿ ವಹಿಸುವ ಬಗ್ಗೆಯೂ ಚಿಂತಿಸಬಹುದು. ಬಾಲಚಂದ್ರ ಜಾರಕಿಹೊಳಿ ಕೂಡ ಸಾಕಷ್ಟು ಅನುಭವಿಯಾಗಿದ್ದು, ಎಲ್ಲರನ್ನೂ ಒಟ್ಟಿಗೆ ಒಯ್ಯುವ ಸಾಮರ್ಥ್ಯ ಹೊಂದಿದ್ದಾರೆ. 

ಒಟ್ಟಾರೆ ಇದೀಗ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಯಾರಾಗಲಿದ್ದಾರೆ ಎಂಬುದೇ ಎಲ್ಲರ ಕುತೂಹಲ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button