ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಹೊರಬೀಳುತ್ತಿದ್ದಂತೆ ರಾಜ್ಯದ 6 ಸಚಿವರು ನ್ಯಾಯಾಲಯದ ಮೊರೆ ಹೋಗಿದ್ದು ಇಂದು ಇನ್ನೂ 6 ಸಚಿವರು ನ್ಯಾಯಾಲಯದ ಮೊರೆ ಹೋಗಲಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ ತಿಳಿಸಿದ್ದಾರೆ.
ರಾಜ್ಯದ ಸಮ್ಮಿಶ್ರ ಸರಕಾರ ಕೆಡವಿ ಬಿಜೆಪಿ ಸರಕಾರ ಅಸ್ಥಿತ್ವಕ್ಕೆ ತರುವುದ್ಕಕಾಗಿ ಮುಂಬೈಗೆ ತೆರಳಿದ್ದ ಸಚಿವರಾದ ಭೈರತಿ ಬಸವರಾಜ, ಶಿವರಾಮ ಹೆಬ್ಬಾರ್, ಡಾ.ಕೆ.ಸುಧಾಕರ, ಎಸ್.ಟಿ.ಸೋಮಶೇಖರ, ಬಿ.ಸಿ.ಪಾಟೀಲ, ನಾರಾಯಣ ಗೌಡ ನ್ಯಾಯಾಲಯಕ್ಕೆ ಮೊರೆ ಹೋದವರು.
ಇವರ ಜೊತೆಗೆ ಇಂದು ಇನ್ನೂ 6 ಸಚಿವರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಿದ್ದಾರೆ. ನಾವು ಮುಂಬೈಗೆ ಹೊದವರೆಲ್ಲ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುತ್ತಿದ್ದೇವೆ ಎಂದು ಸೋಮಶೇಖರ ಹೇಳಿದ್ದಾರೆ. ನಮ್ಮ ವಿರುದ್ಧ ಮೊದಲಿನಿಂದಲೂ ಷಢ್ಯಂತ್ರ ನಡೆಯುತ್ತಿದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಕೋರ್ಟ್ ಮೆಟ್ಟಿಲೇರುತ್ತೇವೆ ಎಂದು ಅವರು ತಿಳಿಸಿದ್ದಾರೆ.
ತಮ್ಮ ವಿರುದ್ಧ ಯಾವುದೇ ರೀತಿಯ ಮಾನಹಾನಿಕರ ಸುದ್ದಿಗಳನ್ನು ಪ್ರಕಟಿಸಬಾರದು ಎಂದು ಒಟ್ಟೂ 67 ಮಾಧ್ಯಮಗಳನ್ನು ಎದುರುದಾರರನ್ನಾಗಿಸಿ ಈ ಸಚಿವರು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಇಂದು ಅರ್ಜಿಯ ವಿಚಾರಣೆ ನಡೆಯಲಿದೆ.
ತಮ್ಮ ಬಳಿ ಹಲವರ ಸಿಡಿಗಳಿವೆ ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ ಮುಲಾಲಿ ಹೇಳಿಕೆ ನೀಡಿದ ಬೆನ್ನಲ್ಲೇ ಈ ಸಚಿವರು ನ್ಯಾಯಾಲಯಕ್ಕೆ ಹೋಗಿರುವುದು ಕುತೂಹಲ ಮೂಡಿಸಿದೆ. ರಾಜಶೇಖರ ಮುಲಾಲಿ ಅವರನ್ನು 68ನೇ ಪ್ರತಿವಾದಿಯನ್ನಾಗಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ