Latest

ಉದಯೋನ್ಮುಖ ಲೇಖಕಿಯರ ಕೃತಿ ಹೊರತರಲು ಚಿಂತನೆ: ಹೇಮಾಸೊನೊಳ್ಳಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಲೇಖಕಿಯರ ಸಂಘದಿಂದ ಮುಂದಿನ ಸಾಲಿನಲ್ಲಿ ಉದಯೋನ್ಮುಖ ಬರಹಗಳನ್ನು ಕೃತಿರೂಪದಲ್ಲಿ ಹೊರತರಲು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಹೇಮಾ ಸೊನೊಳ್ಳಿ ಹೇಳಿದರು.

ಇಲ್ಲಿನ ಚನ್ನಮ್ಮ ವೃತ್ತದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ಜಿಲ್ಲಾ ಲೇಖಕಿಯರ ಸಂಘದಿಂದ ನಡೆದ ದತ್ತಿ ನಿಧಿ ಕಾರ್ಯಕ್ರಮ, ಕನ್ನಡ ಕಥಾ ಸ್ಪರ್ಧೆ ಹಾಗೂ ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ದತ್ತಿ ದಾನಿಗಳಾದ ದೀಪಿಕಾ ಚಾಟೆ, ಸುನಂದಾ ಮುಳೆ, ಜಯಶೀಲಾ ಬ್ಯಾಕೋಡ, ರೇಖಾ ಶ್ರೀನಿವಾಸ, ಯಮುನಾ ಕಂಬಾರ, ಸುಮಿತ್ರಾ ಮಲ್ಲಾಪುರ ಅವರು ಮಾತನಾಡಿ, ತಮ್ಮ ನೆನಪುಗಳನ್ನು ತೆರೆದಿಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪತ್ರಕರ್ತೆ ಕೀರ್ತಿಶೇಖರ್ ಕಾಸರಗೋಡು ಮಾತನಾಡಿ, ಇಂದಿನ ಕಂಪ್ಯೂಟರ್ ಯುಗದಲ್ಲಿ ಹೆಣ್ಣುಮಕ್ಕಳು ಸೈಬರ್ ಕ್ರೈಂ ಬಗ್ಗೆ ಎಚ್ಚರ ವಹಿಸಬೇಕು.ಲೇಖಕಿಯರು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಲೇಖನ, ಕವನ, ಕಥೆಗಳನ್ನು ದುರ್ಬಳಕೆ ಮಾಡಿ ಕೊಳ್ಳಲಾಗುತ್ತಿದ್ದು, ಈ ಬಗ್ಗೆ ಜಾಗೃತೆ ವಹಿಸಬೇಕು ಎಂದು ಹೇಳಿದರು. ಅವಕಾಶಗಳಿಗಾಗಿ ಅತ್ತಿತ್ತ ಹುಡುಕಾಟ ನಡೆಸುವ ಮುನ್ನ ನಾವೇ ಅವಕಾಶ ಸೃಷ್ಟಿಸಿಕೊಳ್ಳಬೇಕು. ಮಾನಸಿಕವಾಗಿ ಗಟ್ಟಿತನ ತಂದುಕೊಂಡು ಕೆಲವೊಂದು ವಿಚಾರದಲ್ಲಿ ದುಡುಕು ನಿರ್ಧಾರ ತೆಗೆದುಕೊಳ್ಳುವುದನ್ನು ಕೈಬಿಡಬೇಕು ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಲೇಖಕಿಯರ ಸಂಘದ ಉಪಾಧ್ಯಕ್ಷೆ ಹಮೀದಾ ಬೇಗಂ ದೇಸಾಯಿ ಅವರು ಸ್ವಾಗತಿಸಿ ಪರಿಚಯಿಸಿದರು. ಕಾರ್ಯದರ್ಶಿ ಇಂದಿರಾ ಮೋಟೆಬೆನ್ನೂರ, ಜ್ಯೋತಿ ಬಾದಾಮಿ, ನಿರ್ಮಲಾ ಬಟ್ಟಲ್, ಶೈಲಜಾ ಕುಲಕರ್ಣಿ, ಶಕುಂತಲಾ ಬಾಳೇಕುಂದ್ರಿ ಮತ್ತಿತರರು ಉಪಸ್ಥಿತರಿದ್ದರು. ನಂತರ ಸಂಘದ ಸದಸ್ಯರಿಗಾಗಿ ಕಥಾಸ್ಪರ್ಧೆ ಮತ್ತು ದೇಶಭಕ್ತಿ ಗಾಯನ ಏರ್ಪಡಿಸಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button