ಸರಸ ಸಮ್ಮೋಹನ
ಯಾವಳಾದರೂ ಹುಡುಗಿ ಆ ಎರಡು ಜಡೆಗಳಲ್ಲಿ ಒಂದು ಜಡೆ ಬೆನ್ನಹಿಂದೆ , ಇನ್ನೊಂದು ಜಡೆ ಎದೆಮುಂದೆ ಒಕ್ಕೊಂಡು ಬಂದಳೆಂದರೆ ಅವಳು ಒಬ್ಬ ಹುಡುಗನನ್ನು ಲವ್ ಮಾಡುತ್ತಿದ್ದಾಳೆಂದೇ ನಮಗೆ ಗ್ಯಾರಂಟಿ ! ಅದು ಸತ್ಯವೂ ಆಗಿರುತ್ತಿತ್ತು !
ಪ್ರೊ. ಜಿ. ಎಚ್. ಹನ್ನೆರಡುಮಠ
ಅರವತ್ತು ವರ್ಷಗಳ ಹಿಂದೆ ನಮ್ಮೂರಿಗೆ ಇನ್ನೂ “ಲವ್” ಎಂಬ ಶಬ್ದ ಬಂದಿರಲಿಲ್ಲ !
ಅಂದರೆ ಆಗ ಲವ್ ಇರಲಿಲ್ಲ ಅಂತ ಅರ್ಥ ಅಲ್ಲ , ಆದರೆ ಲವ್ವಿಗೆ ಬೊವ್ ಬೊವ್ ತರಹದ ಶೋಮನ್‌ಶಿಪ್ಪು ಇರಲಿಲ್ಲ ! ಪ್ರೀತಿ ಪ್ರೀತಿ ಮಾತ್ರವಾಗಿತ್ತು…. ಪಂಪಂಪೋ ಬೋಂಗಾಲವ್ ಇರಲಿಲ್ಲ !
ನಮ್ಮ ಸಾಲಿಯ ಹುಡಿಗಿಯರು ನೀಟಾಗಿ ತಲೆ ಬಾಚಿಕೊಂಡು, ಒಂದು ದೊಡ್ಡ ಮಣಭಾರದ ಕೊತವಾಲ ಜಡೆ ಬೆನ್ನ ಹಿಂದೆ ಒಕ್ಕೊಂಡು ಬರುತ್ತಿದ್ದರು.
ಆಗಿನ ಲೇಟೆಸ್ಟ ಫ್ಯಾಶನ್ನೆಂದರೆ ಎರಡು ಜಡೆ ! ಯಾವಳಾದರೂ ಹುಡುಗಿ ಆ ಎರಡು ಜಡೆಗಳಲ್ಲಿ ಒಂದು ಜಡೆ ಬೆನ್ನಹಿಂದೆ , ಇನ್ನೊಂದು ಜಡೆ ಎದೆಮುಂದೆ ಒಕ್ಕೊಂಡು ಬಂದಳೆಂದರೆ ಅವಳು ಒಬ್ಬ ಹುಡುಗನನ್ನು ಲವ್ ಮಾಡುತ್ತಿದ್ದಾಳೆಂದೇ ನಮಗೆ ಗ್ಯಾರಂಟಿ ! ಅದು ಸತ್ಯವೂ ಆಗಿರುತ್ತಿತ್ತು !
ಇಷ್ಟೆಲ್ಲಾ ಯಾಕೆ ಹೇಳಬೇಕಾಯಿತೆಂದರೆ ನನ್ನ ಕಾಲೇಜ ಕ್ಲಾಸಮೇಟ ಕಲ್ಲೇಶಿ “ಟೂ-ಇನ್-ಒನ್” ಪರ್ಸನ್ಯಾಲಿಟಿ ಇದ್ದವ ! ಆತ ಇತ್ತ ಲವ್ವರೂ ಸೈ…. ಅತ್ತ ಸ್ವಾಮಿ ವಿವೇಕಾನಂದನಂತೆ ಮಹಾನ್ ಸನ್ಯಾಸಿ ಆಗಬೇಕೆಂದು ಕನಸೂ ಕಾಣುತ್ತಿದ್ದ. ಒಮ್ಮೆ ತಲೆ ಬೋಳಿಸುತ್ತಿದ್ದ …. ಇನ್ನೊಮ್ಮೆ ಕ್ರಾಪೂ ತೆಗೆಯುತ್ತಿದ್ದ. ಗಾಂಧಿ ಟೊಪ್ಪಿಗಿಯ ಆ ಕಾಲದಲ್ಲಿ ಕ್ರಾಪು ತೆಗೆದವ ಉಡಾಳ ಟಪ್ಪೂ ಅಂತಲೇ ಅರ್ಥ ! ಬಕ್ಕತೆಲಿಯವರಿಗೆ ಬೆಲೆಯೇ ಇರಲಿಲ್ಲ.
ಆತ ಅದ್ಭುತ ಮಹಾಜ್ಞಾನಿ ! ಆಗಲೇ ಸನ್ನೇಸಿ ಮಠದಲ್ಲಿ ಆರು ಶಾಸ್ತ್ರಗಳಲ್ಲಿ ಪರಿಣತ. ವಿವೇಕಾನಂದರ ಪುಸ್ತಕಗಳನ್ನು ಅರಗಿಸಿ ಕುಡಿದವ. ಇಂಥಾ ಭಾರಿ ದೊಡ್ಡ ಸನ್ಯಾಸಿ ಗೆಳೆಯ ಒಂದು ಸಲ ಏಕ್ದಂ ನಮ್ಮ ಕಾಲೇಜಿನ ಒಂದು ಬೋರಂಗಿ ಬಣ್ಣದ ಕಾರಂಜಿ ಹುಡಿಗಿಯನ್ನು ಲವ್ ಮಾಡಿಬಿಟ್ಟ. ಆ ಸುದ್ದಿ ನಮಗೆ ಚಳಿಗಾಲದಲ್ಲಿ ಬಿಸೇ ಭಜಿ ತಿಂದಷ್ಟು ಖುಶಿ ಆತು. ನಾವೆಲ್ಲ ಝೀರೋಗಳ ಮುಂದೆ ಅವನೇ ಹೀರೋ ಆದ !
ಇಲ್ಲಿ ಕೇಳ್ರಿ ಖರೇ ಮಜಾ ! ಅವರಿಬ್ಬರೂ ತಮ್ಮ ಮ್ಯಾರೇಜ ಕಾರ್ಡ ಪ್ರಿಂಟ ಮಾಡಿಸಿ, ತಾವೇ ಮನೆಮನೆಗೆ ಹೋಗಿ ಹಂಚಿದರು. ಆಗ ಹುಬ್ಬಳ್ಳಿ ಸುತ್ತಮುತ್ತ ಭಾರೀ ಗಿಡಮರ ಗುಂಪುಗಳಿದ್ದವು.
ಆಗ ಡೇಟಿಂಗ್ ಇರಲಿಲ್ಲ… ಬರಿ ಮೀಟಿಂಗ್ ಇತ್ತು !
ಚೀಟಿಂಗ್ ಇರಲಿಲ್ಲ…. ಬರೀ ಚಾಟಿಂಗ್ ಇತ್ತು !
ಇಲ್ಲಿ ಮುಂದೆ ಕೇಳ್ರಿ ಹೊಸಾ ಸುದ್ದಿ ! ಇನ್ನೇನು ಅವರ ಲಗ್ನ ಇನ್ನು ನಾಲ್ಕು ದಿನಾ ಇದೆ ಅಂದರೆ , ಈ “ಟೂ-ಇನ್-ಒನ್” ಮಹಾಶಯನಿಗೆ ಒಮ್ಮೆಲೇ ಗೌತಮ ಬುದ್ಧನಂತೆ ಅರ್ಜಂಟ್ ವೈರಾಗ್ಯ ಉಕ್ಕೇರಿ ಬಂತು ! ರಾತ್ರೋರಾತ್ರಿ ಆತ ಮನೆಯಲ್ಲಿ ಸಾವಿರ ರೂಪಾಯಿ ಕಳವು ಮಾಡಿದ. ಆಗಿನ ಸಾವಿರ ಅಂದರೆ ಈಗಿನ ಲಕ್ಷವೇ ಸೈ ! ಯಾಕೆಂದರೆ ಮೋಹನ-ಮಲ್ಲಿಕಾರ್ಜುನ ಸಿನಿಮಾ ಟಾಕೀಜಿನಲ್ಲಿ ಸಿನೆಮಾ ಟಿಕೇಟ್ ರೇಟೇ ಐದು ಆಣೆ ಇದ್ದ ಕಾಲ ಅದು !
ಆ ನಮ್ಮ ಕಾಲೇಜ ಹೀರೋನಿಗೆ ಸ್ಪೀಡ್ ಆಗಿ ವೈರಾಗ್ಯ ಬಂತು ! ರಾತ್ರೋರಾತ್ರಿ ಸನ್ನೇಸಿಮಠಕ್ಕೆ ಹೋಗಿ, ತಲೆ ಬೋಳಿಸಿಕೊಂಡು, ತನ್ನ ಪ್ಯಾಂಟ್ -ಶರ್ಟ ಭಿಕ್ಷುಕರಿಗೆ ಕೊಟ್ಟು, ಥೇಟ ವಿವೇಕಾನಂದನಂತೆ ಅಪ್ಪಟ ಕಾವಿ ನಿಲುವಂಗಿ ತೊಟ್ಟು , ನಮ್ಮೂರಿಗೆ ಕಟ್ಟಕಡೆಯ ನಮಸ್ಕಾರ ಹೇಳಿ, ರೈಲು ಹತ್ತಿ, ಆಗ್ರಾ- ದಿಲ್ಲಿ- ಡೆಹರಾಡೂನ- ಹರಿದ್ವಾರ-ಋಷಿಕೇಶ- ಮಸ್ಸೂರಿ- ಕಾಶಿ- ಕೇದಾರ- ದಾರ್ಜಿಲಿಂಗ- ಸಿಮ್ಲಾಗಳಿಗೆ ಹೋಗಿ , ಹಿಮಾಲಯ ಪರ್ವತದ ಅಖಂಡ ಅದ್ಭುತ ಸನ್ಯಾಸಿಯಾಗಿಬಿಟ್ಟ ! ಮಹಾ ಯೋಗಿಪುಂಗವ ಆಗಿಬಿಟ್ಟ! ಚಿಗುರುಮೀಸೆಯ ಚಲುವ ಸನ್ಯಾಸಿಯಾದ !
ಹಾಂ…. ಆಗ ಒಂದು ದಿನ ಏನಾಯಿತು ಗೊತ್ತೇ ? ಅಬ್ಬಬ್ಬಾ…
ಸಿಮ್ಲಾದ ಸುಂದರ ಸ್ವಿಮಿಂಗ್ ಪಾಂಡಿನಲ್ಲಿ ಇಂದ್ರ ಲೋಕದಿಂದ ಭೂಲೋಕಕ್ಕೆ ಜಾರಿಬಂದಂತಿದ್ದ ಹಲವಾರು ವಿದೇಶಿ ಚಂದುಟಿಯ ಚಲುವಿನ ಚಂಗಣಗಿಲ ಚನ್ನೆಯರು ರೀಲ ದಾರದಷ್ಟು ದಪ್ಪನ್ನ ಚಡ್ಡಿ ಧರಿಸಿ ಈಜಾಡುತ್ತಿದ್ದರು. ಈತ ….ಶಿವಾ ಶಿವಾ…. ಎಂದು ಆ ಹೊಂಡದಲ್ಲಿ ಮುಳುಗಿ ಏಳುವಷ್ಟರಲ್ಲಿ ಅವರ ಮಖಮಲ್ಲು ಮೈಕಟ್ಟು ಕಂಡು ಶವಾಸನ ಹಾಕಿಬಿಟ್ಟ !
ಇವನ ವೈರಾಗ್ಯ ಕೋತಂಬ್ರಿ ಶಿವುಡಾತು ! ಯೋಗದ ಕಿಚ್ಚು ತಂಬೂಳಿ ಸಾರು ಆತು ! ಜ್ಞಾನಾಗ್ನಿ ಹುಳಿಮಜ್ಜಿಗಿ ಆಮ್ರ ಆತು ! ವೈರಾಗ್ಯ ಬಳ್ಳೊಳ್ಳಿ ಚಟ್ನಿ ಆತು ! ತಾನುಟ್ಟಿದ್ದ ಕಾವಿಬಟ್ಟೆ ಅಲ್ಲಿಯೇ ಟರಟರ ಹರಿದುಬಿಟ್ಟ. ಕಾಶ್ಮೀರಿ ಶೈಲಿಯ ಕಲರ್ ಜುಬ್ಬಾ ಪಾಯಿಜಾಮ ಹಾಕಿಕೊಂಡು, ಅರ್ಜಂಟ ರೈಲು ಹತ್ತಿ ನಮ್ಮೂರಿಗೆ ಬಂದವನೇ, ಇವನಿಗಾಗಿ ಅಳುತ್ತ ಕುಳಿತಿದ್ದ ಆ ಗುಲಗಂಜಿ ಬಣ್ಣದ ಅಪರಂಜಿ ಮೇನಕೆಯನ್ನು ಧುಢುಮ್ಮೆಂದು ಮದುವಿಯಾಗಿಬಿಟ್ಟ ! ಅವಳ ಕಣ್ಣೀರು ಕಾವ್ಯವಾಯಿತು ! ವಿಯೋಗ ರಸಯೋಗವಾಯಿತು ! ನವಿಲುಕೊಳ್ಳದ ಗುಡ್ಡದಲ್ಲಿ ಮತ್ತೆ ಕೋಗಿಲೆ ಕೂಗಿದವು !
ಹೌದು….. ನಮ್ಮೂರು ಒಂದು ಕಾಲಕ್ಕೆ ಹೀಗಿಯೇ ಇತ್ತು ! ಅದೊಂದು ನವರಸಗಳು ತುಂಬಿದ್ದ ಅರ್ಥಪೂರ್ಣವಾದ ಕಾಲ ! ಇಂದಿನ ಕ್ಲಬ್ಬಾಯಣಗಳು ಮೋಜಾಯಣಗಳು ಇನ್ನೂ ನಗರ ಪ್ರವೇಶಿಸಿರಲಿಲ್ಲ. ನಾವು ಎಷ್ಟು ಜಾಣರಿದ್ದೆವೆಂದರೆ ಹನಿಮೂನು ಅಂದರೆ ಅದರ ಅರ್ಥವೇ ಗೊತ್ತಿರಲಿಲ್ಲ. ಹನಿಮೂನು ಅಂದರೆ…. ಚಂದ್ರನ ಬೆಳದಿಂಗಳದಲ್ಲಿ ಮಾಳಿಗಿಮೇಲೆ ಕುಂತು ಹನಿಯನ್ನು ಹಚ್ಚಿಕೊಂಡು ರೊಟ್ಟಿ ತಿನ್ನುವದು…. ಎಂದೇ ನಾವು ತಿಳಕೊಂಡಿದ್ದೆವು. ಪ್ರತಿಯೊಬ್ಬಳು ಹುಡಿಗಿಯ ಕಣ್ಣಿನಲ್ಲಿ ಒಬ್ಬಳು ಗುಪ್ತ ಶಕುಂತಲೆ ಕನಸಿನ ತೂಗುಮಂಚ ಕಟ್ಟಿ ತೂಗುತ್ತಿದ್ದಳು ! ಹುಡುಗರೂ ಅಷ್ಟೇ . ಅವರು ಕಲ್ಪನೆಯಲ್ಲಿ ದುಶ್ಶಂತರಾದರೂ ಕಾರ್ಯ ಸಾಧನೆಯಲ್ಲಿ ಮಹಾ ಅಳಬುರುಕರೇ ಆಗಿದ್ದರು! ನಮ್ಮೂರಿನ ಪ್ರತಿಯೊಂದು ಹನುಮಂತದೇವರ ಗುಡಿಗಳೂ ಅವರ ಮೀಟಿಂಗ್ ಪ್ಲೇಸ್ ಆಗಿದ್ದವು. ಬ್ರಹ್ಮಚಾರಿ ಹನುಮಂತ ಅವರ ಪ್ರೀತಿಯ ಸಂರಕ್ಷಕನಾಗಿದ್ದ !
ಒಂದೆಡೆ ಸನ್ನೇಸಿ ಮಠದ ಪ್ರಭಾವ. ಇನ್ನೊಂದೆಡೆಗೆ ಡೆಕ್ಕನ ಟಾಕೀಜ- ಚಂದ್ರಕಲಾ ಟಾಕೀಜ- ಗಣೇಶ ಟಾಕೀಜಗಳಲ್ಲಿ ಐದಾಣೆ ಸಿನಿಮಾ ! ಆಗಾಗ ಭರಾಟಿಯಿಂದ ಬರುತ್ತಿದ್ದ ಏಣಿಗಿ ಬಾಳಪ್ಪನವರ ನಾಟಕಗಳು, ಗುಬ್ಬಿ ಕಂಪನಿಯ ಸಂಗೀತ ಪ್ರಧಾನ ನಾಟಕಗಳು ಸಾರ್ವತ್ರಿಕವಾಗಿ ಕಂಪನವನ್ನೇ ಹುಟ್ಟಿಸುತ್ತಿದ್ದವು ! ನನ್ನ ಲಂಗೋಟಿ ಗೆಳೆಯ ಬಳೆಗಾರ ನಾಬೂ ಜಗಜ್ಜೋತಿ ಬಸವೇಶ್ವರ ನಾಟಕ ನಾಲ್ವತ್ತು ಸಲ ನೋಡಿದ್ದ. ಅಂಥಾ ಅದ್ಭುತ ಗೆಳೆಯ ನಾಬೂ ಸತ್ತಮೇಲೆ ನನ್ನ ಕಲ್ಪನೆಯ ಆ ಪ್ರಾಚೀನ ಪಟ್ಟಣ ಸೋತುಹೋದ ನೋವಾಯಿತು !
ಈಗಿನ ಯಾವ ಹೀರೋ-ಹೀರೋಯಿನ್‌ಗಳು ಇನ್ನೂ ಹುಟ್ಟಲಾರದ ಆ ಕಾಲದಲ್ಲಿ “ಹರಿಣಿ” ನಟಿಸಿದ “ಜಗನ್ಮೋಹಿನಿ” ಸಿನಿಮಾದ ಪ್ರಭಾವದಿಂದ ಹುಬ್ಬಳ್ಳಿ ಪಕ್ಕದ ಹಳ್ಳಿಯ ಒಬ್ಬ ಗೌಡರ ಹುಡುಗ ….”ಹರಿಣಿ….ಹರಿಣಿ….” ಎನ್ನುತ್ತ ಶಾಶ್ವತವಾಗಿ ಹುಚ್ಚನಾಗಿ ಹೋದ !
ನಾವೂ ಒಂಥರಾ ಝೀರೋ ಟೆಂಪರೇಚರಿನ ಹರಿಣೀಪ್ರಿಯರೇ ಆಗಿದ್ದೆವು ! ಆಗಿನ್ನೂ ರಾಜಕುಮಾರ ಬಂದಿರಲಿಲ್ಲ. ನರಸಿಂಹರಾಜು, ಲೀಲಾವತಿ, ರಾಜಕುಮಾರರು ಕಂಪನಿ ನಟರಾಗಿ ಸಿದ್ಧಾರೂಢಮಠದಲ್ಲಿ ತಂಗುತ್ತಿದ್ದರು.
ಅಂದು ನಾವು ದೂರದಿಂದಲೇ ಪ್ರೀತಿಸಿದ ಆ ಢುಮ್ಮಕ್ಕ ಡುಂಡುಂ ಪೆದ್ದಂಟಿ ಹುಡುಗಿಯರ ಮಮ್ಮಕ್ಕಳು ಈಗ ತಮ್ಮ ಮಕ್ಕಳೊಂದಿಗೆ ಪ್ಯಾರೀಸ, ಲಂಡನ್, ಹಾಲಿವುಡ್ಡಿನಲ್ಲಿ ಕಡಲಾಚೆಯ ಕಾಮಿನಿಯರಾಗಿದ್ದಾರೆ. ನಾವು ಹೂಬೇ ಹೂಬೇ ಅನುಭವಿಸಿದ ಆ ಪ್ರೀತಿಯ ಸುಖ ಈಗ ಎಲ್ಲಿ ?
ಆಗ ಪ್ರೀತಿ ಪ್ರೀತಿಯಾಗಿತ್ತು ! ಕೈಮುಟ್ಟಿ ಮೈಮುಟ್ಟಿ ಪ್ರೀತಿಸುವವರು ಉಡಾಳರೆಂದೇ ನಂಬಿದ ಆ ಕಾಲದ ಆ ಕನಸಿನ ಕಲ್ಪನೆಯ ಕನ್ನಡದ ಶಕುಂತಲೆಯರು ಮರಳಿ ಬರುವರೇ ?
ಲೇಖಕರ ವಿಳಾಸ – ಪ್ರೊ. ಜಿ. ಎಚ್. ಹನ್ನೆರಡುಮಠ
# ೫ : “ಮಾವು ಮಲ್ಲಿಗೆ” : ಇಂದ್ರಪ್ರಸ್ಥ ಕಾಲನಿ
ಬನ್ನೇರುಘಟ್ಟದ ದಾರಿ : ಗೊಟ್ಟಿಗೆರೆ ಅಂಚೆ :
ಬೆಂಗಳೂರ- ೫೬೦೦೮೩
ದೂರವಾಣಿ: ೯೯೪೫೭ ೦೧೧೦೮
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ