Kannada NewsKarnataka NewsLatest

ಬೆಳಗಾವಿ ಉಪಚುನಾವಣೆ: ರಮೇಶ ಜಾರಕಿಹೊಳಿ ಕನಸು ನನಸಾಗಲಿದೆಯೇ?

ಚುನಾವಣೆ ಪ್ರಚಾರಕ್ಕೆ ಬರಲಿದ್ದಾರಾ ಮಾಜಿ ಉಸ್ತುವಾರಿ ಸಚಿವ?

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕನಿಷ್ಠ 2 ಲಕ್ಷ ಮತಗಳ ಅಂತರದಿಂದ ಬಿಜೆಪಿ ಗೆಲುವು ಸಾಧಿಸಬೇಕು – ಇದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಅವರು ಪದೇ ಪದೆ ಹೇಳುತ್ತ ಬಂದಿರುವ ಮಾತು.

ಬಿಜೆಪಿಯ ಪ್ರತಿಯೊಂದು ಸಭೆಗಳಲ್ಲಿ ಈ ಮಾತನ್ನು ಹೇಳುತ್ತ ಕಾರ್ಯಕರ್ತರಲ್ಲಿ ಉತ್ಸಾಹ ತುಂಬುತ್ತ ಬಂದಿದ್ದರು. ಸುರೇಶ ಅಂಗಡಿಯವರ ಕುಟುಂಬದಲ್ಲೇ ಒಬ್ಬರಿಗೆ ಟಿಕೆಟ್ ನೀಡಬೇಕೆನ್ನುವುದು ನನ್ನ ಮನದಾಳದ ಇಂಗಿತ. ಆದರೆ ಪಕ್ಷದ ಹೈಕಮಾಂಡ್ ಯಾರಿಗೇ ಟಿಕೆಟ್ ನೀಡಿದರೂ ಅವರನ್ನು 2 ಲಕ್ಷ ಮತಗಳ ಅಂತರದಿಂದ ಆರಿಸಿ ತರಬೇಕು ಎಂದು ರಮೇಶ ಜಾರಕಿಹೊಳಿ ಕನಿಷ್ಠ ಒಂದು ಡಜನ್ ಬಾರಿ ಹೇಳಿದ್ದಾರೆ.

ಬರಲಿದ್ದಾರಾ ಪ್ರಚಾರಕ್ಕೆ?

ಈಗ ಬೆಳಗಾವಿ ಲೋಕಸಭಾ ಉಪಚುನಾವಣೆ ಘೋಷಣೆಯಾಗಿದೆ. ಏಪ್ರಿಲ್ 17ರಂದು ಮತದಾನ ನಡೆಯಲಿದೆ. ಇನ್ನು ತಿಂಗಳು ಕೂಡ ಪೂರ್ತಿ ಇಲ್ಲ ಚುನಾವಣೆ ಪೂರ್ಣಗೊಳ್ಳಲು. ಇದೇ 23ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಈವರೆಗೂ ಬಿಜೆಪಿಯಾಗಲಿ, ಕಾಂಗ್ರೆಸ್ ಆಗಲಿ ತಮ್ಮ ಅಭ್ಯರ್ಥಿ ಘೋಷಣೆ ಮಾಡಿಲ್ಲ. ಏಪ್ರಿಲ್ 3ಕ್ಕೆ ಕಣ ಚಿತ್ರಣ ಸ್ಪಷ್ಟವಾಗಲಿದೆ.

ರಮೇಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಇಡೀ ಕ್ಷೇತ್ರವನ್ನು ಸುತ್ತುವ ಮತ್ತು ಪಕ್ಷದ ಅಭ್ಯರ್ಥಿ ಗೆಲ್ಲಿಸಿ ತರುವ ಜವಾಬ್ದಾರಿನ್ನು ಹೊರುವವರಿದ್ದರು. ಅಷ್ಟೇ ಉತ್ಸಾಹದಿಂದ ಅನೇಕ ಬಾರಿ ಕಾರ್ಯಕರ್ತರ ಸಭೆಗಳನ್ನೂ ನಡೆಸಿದ್ದರು.

ಆದರೆ ಇಂತಹ ಸಂದರ್ಭದಲ್ಲಿ ರಮೇಶ ಜಾರಕಿಹೊಳಿ ಸಿಡಿ ಪ್ರಕರಣದಿಂದಾಗಿ ಸಚಿವಸ್ಥಾನವನ್ನು ಕಳೆದುಕೊಳ್ಳಬೇಕಾಗಿ ಬಂದಿದೆ. ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಅಷ್ಟು ಬೇಗ ಪ್ರಕರಣ ಮುಗಿದು ರಮೇಶ ಜಾರಕಿಹೊಳಿ ಚುನಾವಣೆ ಪೂರ್ವ ಮತ್ತೆ ಸಚಿವಸ್ಥಾನ ಪಡೆಯುವುದು ಸಾಧ್ಯವೂ ಇಲ್ಲ. ಪ್ರಕರಣ ಇತ್ಯಾರ್ಥವಾದರೂ ಚುನಾವಣೆ ನೀತಿಸಂಹಿತೆ ಕಾರಣಕ್ಕಾಗಿ ಈಗ ಸಚಿವ ಸಂಪುಟ ಸೇರುವುದು ಸಾಧ್ಯವಿಲ್ಲ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ  ರಮೇಶ ಜಾರಕಿಹೊಳಿ ಚುನಾವಣೆ ಪ್ರಚಾರಕ್ಕೆ ಬರಲಿದ್ದಾರಾ ಎನ್ನುವ ಪ್ರಶ್ನೆ ಮೂಡಿದೆ. ಬಿಜೆಪಿ ಈವರೆಗೂ ಪ್ರಚಾರ ತಂತ್ರ ರೂಪಿಸಿಲ್ಲ. ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿಲ್ಲ. ರಮೇಶ ಜಾರಕಿಹೊಳಿ ಅವರನ್ನು ತನ್ನ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರಿಸಲಿದೆಯೇ ಎನ್ನುವುದು ಸಹ ಗೊತ್ತಾಗಿಲ್ಲ. ಒಂದೊಮ್ಮೆ ರಮೇಶ ಜಾರಕಿಹೊಳಿ ಪ್ರಚಾರಕ್ಕೆ ಬರಲು ಸಿದ್ದರಾದರೂ  ಸಿಡಿ ಪ್ರಕರಣ ಹಸಿಯಾಗಿರುವುದರಿಂದ ಬಿಜೆಪಿ ಅವರನ್ನು ಪ್ರಚಾರದಿಂದ ದೂರವಿಡುವ ತೀರ್ಮಾನಕ್ಕೆ ಬರಲಿದೆಯೇ ಎನ್ನುವ ಪ್ರಶ್ನೆಯೂ ಇದೆ.

ಏನೇ ಆದರೂ ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಗೆ ದೊಡ್ಡ ಪೆಟ್ಟು ಬಿದ್ದಿದೆ. ಪಕ್ಷಕ್ಕೆ ಇದೊಂದು ಮುಜುಗರ ತರುವ ವಿಷಯವಾಗಲಿದೆಯೇ ಅಥವಾ ಇದನ್ನೇ ಬೇರೆ ರೀತಿಯಲ್ಲಿ ಪ್ರಚಾರಕ್ಕೆ ಬಳಸಿಕೊಳ್ಳಲು ತಂತ್ರ ಹೆಣೆಯಲಿದೆಯೇ ಕಾದು ನೋಡಬೇಕಿದೆ.

ಪ್ರಚಾರ ಕಾವೇರುವ ಹೊತ್ತಿಗೆ ಪ್ರಕರಣ ಯಾವ ತಿರುವು ಪಡೆಯುತ್ತದೆ, ಯಾವ ಹಂತಕ್ಕೆ ತಲುಪುತ್ತದೆ ಎನ್ನುವುದೂ ಸ್ಪಷ್ಟವಿಲ್ಲ. ಏನೇ ಆದರೂ ಸಿಡಿ ವಿಷಯ ಈ ಬಾರಿಯ ಲೋಕಸಭಾ ಉಪಚುನಾವಣೆಯ ಪ್ರಚಾರದಲ್ಲಿ ದೊಡ್ಡ ಸದ್ದು ಮಾಡುವುದಂತೂ ನಿಜ. ಎರಡೂ ಪಕ್ಷಗಳು ಇದನ್ನು ಆರೋಪ -ಪ್ರತ್ಯಾರೋಪಗಳಿಗೆ ಆಹಾರ ಮಾಡಿಕೊಳ್ಳುವುದು ನಿಶ್ಚಿತ.

ರಮೇಶ ಜಾರಕಿಹೊಳಿ ಮಾನಸಿಕವಾಗಿ ಪ್ರಚಾರಕ್ಕೆ ಬರಲು ಸಿದ್ದರಾಗಲಿದ್ದಾರಾ? 2 ಲಕ್ಷ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಅವರ ಕನಸು ನನಸಾಗಲಿದೆಯಾ? ಕಾದು ನೋಡಬೇಕಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button