ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯಲ್ಲಿ ಕಳೆದ ವರ್ಷ ಫೆಬ್ರವರಿ 26 ರಂದು ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರಿಂದ ಪ್ರಾರಂಭಗೊಂಡ ರೋಟರಿ-ಕೆ ಎಲ್ ಇ ಡಯಾಲೈಸಿಸ್ ಕೇಂದ್ರದಲ್ಲಿ 1000 ಡಯಾಲೈಸಿಸ್ ಚಿಕಿತ್ಸೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಕುರಿತು ಕಾರ್ಯಕ್ರಮ ನಡೆಯಿತು.
ಬೆಳಗಾವಿ ನಗರ ಹಾಗೂ ಸುತ್ತಮುತ್ತಲ ಹಳ್ಳಿಗಾಡಿನ ನಾಗರಿಕರಿಗೆ ಡಯಾಲೈಸಿಸ್ ಚಿಕಿತ್ಸೆಯನ್ನು ಕಡಿಮೆ ದರದಲ್ಲಿ ನೀಡಲಾಗುತ್ತಿದೆ. ಈ ಸಂದರ್ಭದಲ್ಲಿ ರೊಟರಿ ಕ್ಲಬ್ ಆಫ್ ಬೆಳಗಾವಿ ಅಧ್ಯಕ್ಷ ಡಾ. ಕೆ ಎಮ್ ಕೇಲೂಸ್ಕರ ಮಾತನಾಡುತ್ತ ಸಾಮಾಜಿಕ ಕಾರ್ಯದಲ್ಲಿ ರೋಟರಿ ಸಂಸ್ಥೆಯು ಮೊದಲಿನಿಂದಲೂ ಮುಂಚೂಣಿಯಲ್ಲಿದೆ. ಕೆ ಎಲ್ ಇ ಯಂತಹ ಆರೋಗ್ಯ ಸೇವಾ ಸಂಸ್ಥೆಗಳೊಂದಿಗೆ ಇನ್ನೂ ಹಲವಾರು ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯಲ್ಲಿದೆ. ಈ ಮೂಲಕ ನಮ್ಮ ಸಮಯ, ಹಣ, ಸೇವಾಮನೋಭಾವನೆ ಮುಂತಾದವುಗಳ ಸದ್ವಿನಿಯೋಗವಾಗುತ್ತದೆ ಎಂದು ಅಭಿಮತ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಖ್ಯಾತ ಮೂತ್ರಪಿಂಡ ತಜ್ಞ ಡಾ. ವಿಜಯಕುಮಾರ ಪಾಟೀಲ ಮಾತನಾಡುತ್ತ ಅತ್ಯಾಧುನಿಕ ಉಪಕರಣಗಳ ಜ್ಞಾನ, ಅನುಭವ, ಸಂಶೊಧನೆಗಳು ಹಾಗೂ ನಿರಂತರ ಶಿಕ್ಷಣ ಕಾರ್ಯಕ್ರಮಗಳು ಮುಂತಾದವುಗಳು ಗುಣಮಟ್ಟದ ಚಿಕಿತ್ಸೆಯನ್ನು ನೀಡಲು ಅತ್ಯುಪಯೋಗಿಯಾಗಿವೆ. ಕೆ ಎಲ್ ಸಂಸ್ಥೆಯ ಎಲ್ಲ ಹಿರಿಯ ವೈದ್ಯರು, ನಿರ್ದೇಶಕರುಗಳ ಸಕಾರಾತ್ಮಕ ಪ್ರೋತ್ಸಾಹಗಳಿಂದ ಇಂದು ಈ ಸಾಧನೆಯನ್ನು ಮಾಡಲಾಗಿದೆ. ಅದರಲ್ಲೂ ಕೊವಿಡ್ ಸಮಯದಲ್ಲಿ ಸುರಕ್ಷಾ ಕ್ರಮಗಳನ್ನು ಅನುಸರಿಸುವ ಮೂಲಕ ಎಲ್ಲರಿಗೂ ಚಿಕಿತ್ಸೆ ನೀಡುವಲ್ಲಿ ಆಸ್ಪತ್ರೆಯ ಎಲ್ಲ ಹಿರಿಯ ವೈದ್ಯರು ಹಾಗೂ ದಾದಿಯರು ಕೊಡುಗೆಯು ಅಪಾರವಾಗಿದೆ ಎಂದು ಸ್ಮರಿಸಿದರು.
ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರಾದ ಡಾ. ಎಸ್ ಸಿ ಧಾರವಾಡ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ ದೇಶದೆಲ್ಲೆಡೆ ಮೂತ್ರಪಿಂಡದ ಕಾಯಿಲೆಗಳಿಂದ ಬಳಲುತ್ತಿರುವ ಸಂಖ್ಯೆಯು ದಿನದಿಂದ ದಿನಕ್ಕೆ ಅಧಿಕವಾಗುತ್ತಿದೆ. ಬೆಳಗಾವಿ ನಗರ ಹಾಗೂ ಗ್ರಾಮೀಣ ಪ್ರದೇಶಗಳು ಮತ್ತು ಪಕ್ಕದ ರಾಜ್ಯಗಳಾದ ಗೋವಾ ಮಹಾರಾಷ್ಟ್ರಗಳಿಂದಲೂ ಜನರು ತಂಡೋಪತಂಡವಾಗಿ ಬಂದು ಡಯಾಲೈಸಿಸ್ ಚಿಕಿತ್ಸೆಯನ್ನು ಹೊಂದುತ್ತಿದ್ದಾರೆ. ಇಂದಿನ ದುಬಾರಿಯುಗದಲ್ಲಿ ಸಾರ್ವಜನಿಕರ ಕೈಗೆಟುಕುವ ದರದಲ್ಲಿ ಇಂತಹ ಅನೇಕ ಸೇವೆಗಳನ್ನು ನೀಡಲಾಗುತ್ತಿದೆ. ಇದು ಕೆ ಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೊರೆ ಅವರ ಕನಸಿನ ಗಿಡ ಹೆಮ್ಮರವಾಗಿ ಬೆಳೆಯುವಂತೆ ತೋರುತ್ತಿದೆ. ಅವರ ಕನಸು ನನಸಾಗಿದೆ ಎಂದರು.
ಈ ಸಂದರ್ಭದಲ್ಲಿ ಕೋರೊನಾ ಸೊಂಕಿನ ಸಂಕಷ್ಟದ ನಡುವೆಯೂ ಒಂದು ವರ್ಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಈ ಸಾಧನೆ ಮಾಡಿದ ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿಗಳು ನಿಜಕ್ಕೂ ಅಭಿನಂದನಾರ್ಹರು ಎಂದು ಸಂತಸ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್‍ನ ಮಾಜಿ ಗವರ್ನರ ಅವಿನಾಶ ಪೊತದಾರ ಹಾಗೂ ಮಾಜಿ ಅಧ್ಯಕ್ಷರಾದ ಡಾ. ಎಮ್ ಎ ಉಡಚನಕರ ಸಾಂದರ್ಭಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆಪ ಬೆ¼ಗಾವಿಯ ಕಾರ್ಯದರ್ಶಿ ಗಣೇಶ ದೇಶಪಾಂಡೆ, ಮಾಜಿ ಅಧ್ಯಕ್ಷ ಸಚಿನ ಬಿಚು, ಹೆಸರಾಂತ ಉದ್ಯಮಿ ನಿತಿನ ಶಿರಗುರಕರ, ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ಹಿರಿಯ ವೈದ್ಯ ಡಾ. ಬಿ ಎಸ್ ಮಹಾಂತಶೆಟ್ಟಿ, ಕೆ ಎಲ್ ಇ ಇನ್ಸಿಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸನ ಪ್ರಾಂಶುಪಾಲ ವಿಕ್ರಾಂತ ನೆಸರಿ ಮುಂತಾದ ವೈದ್ಯಕೀಯ ಹಾಗೂ ವೈದ್ಯಕೀಯೇತರ ಸಿಬ್ಬಂದಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಸಂತೋಷ ಇತಾಪೆ ನಿರೂಪಿಸಿದರು. ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಬಿ ಎಸ್ ಮಹಾಂತಶೆಟ್ಟಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ