Latest

ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಏಕೆ ಬೇಡ?

ದಿ.  24 ಮಾರ್ಚ್ 2021ರಂದು ಶಿರಸಿಯಲ್ಲಿ ಜರುಗಿದ “ಬೇಡ್ತಿ, ಅಘನಾಶಿನಿ-ವರದಾ ನದಿ ಜೋಡಣೆ ಯೋಜನೆಗಳ” ಸಾಧಕ-ಬಾಧಕಗಳ ಕುರಿತು ಸಮಾಲೋಚನಾ ಕಾರ್ಯಾಗಾರಲ್ಲಿ ಕೈಗೊಂಡ ನಿರ್ಣಯಗಳಿಗೆ ಕಾರಣಗಳು.

 

ವೈಜ್ಞಾನಿಕ, ಸಾಮಾಜಿಕ ಹಾಗೂ ಆರ್ಥಿಕ ಕಾರಣಗಳು

 

Home add -Advt
  1. ಹೆಚ್ಚುವರಿ ನೀರು ಇಲ್ಲ: ಬೇಡ್ತಿನದಿ ಜಲಾನಯನ ಪ್ರದೇಶದಲ್ಲಿ ಈಗಾಗಲೇ ಕಡಿಮೆ ಮಳೆಯಾಗುತ್ತಿದ್ದು, ಇಲ್ಲಿನ ಅಂತರ್ಜಲಮಟ್ಟ ಕುಸಿದಿದೆ. ಹೀಗಾಗಿ ಜುಲೈ-ಅಗಸ್ಟ್ ತಿಂಗಳಿನ ಮಳೆನೀರು ಹೊರತುಪಡಿಸಿದರೆ, ಇಲ್ಲಿ ನೀರಿನ ಸಹಜ ಹರಿವಿಲ್ಲ. ಹೆಚ್ಚುವರಿ ನೀರಿಲ್ಲದೆ, ಉದ್ದೇಶಿತ ಯೋಜನೆಯು ಖಂಡಿತಾ ನೀರು ಪೂರೈಸಲಾಗದು. (ಇಲ್ಲಿ ಸಾಕಷ್ಟು ಗುಣಮಟ್ಟದ ನೀರು ಲಭ್ಯವಾಗದೇ ಇರುವದರಿಂದ, ಯಲ್ಲಾಪುರ ಪಟ್ಟಣಕ್ಕೆ ಕುಡಿಯುವ ನೀರು ಪೂರೈಸಲು ರೂಪಿಸಿದ್ದ ದೊಡ್ಡ ಯೋಜನೆ ವಿಫಲವಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು).

 

  1. ನೀರಿನ ಕೊರತೆ ಎದುರಾಗುವದು: ಬೇಡ್ತಿ ಜಲಾನಯನ ಪ್ರದೇಶದ ಶಿರಸಿ, ಯಲ್ಲಾಪುರ, ಅಂಕೋಲಾ ತಾಲ್ಲೂಕಿನ ಹಳ್ಳಿ-ಪಟ್ಟಣಗಳು ಕುಡಿಯುವ ಹಾಗೂ ಕೃಷಿನೀರಿಗಾಗಿ, ಇಲ್ಲಿನ ಕಿರುನದಿ-ತೊರೆಗಳನ್ನೇ ಸಂಪೂರ್ಣ ಅವಲಂಬಿಸಿವೆ. ಇಲ್ಲಿಂದ ನೀರನ್ನು ಭಾರಿ ಪ್ರಮಾಣದಲ್ಲಿ ಬೇರೆಡೆಗೆ ಒಯ್ದರೆ, ಈ ಎಲ್ಲೆಡೆ ನೀರಿನ ತೀವೃ ಕೊರತೆ ಉಂಟಾಗುತ್ತದೆ.

 

  1. ಜೀವವೈವಿಧ್ಯ ನಾಶ ಹಾಗೂ ಅಂತರ್ಜಲ ಕುಸಿತ: ಪಟ್ಟಣದಹೊಳೆ, ಸೋಂದಾಹೊಳೆ, ಶಾಲ್ಮಲಾ, ಬೇಡ್ತಿನದಿ ಇವೆಲ್ಲ ಪಶ್ಚಿಮಘಟ್ಟದ ಅನನ್ಯ ಅರಣ್ಯಪ್ರದೇಶ ಹಾಗೂ ಜೀವವೈವಿಧ್ಯವಿರುವ ಸೂಕ್ಷ್ಮಪರಿಸರವಾಗಿದೆ. ಇಲ್ಲಿನ ನದಿಮೂಲಗಳನ್ನು ನಾಶಮಾಡಿ ಈ ಯೋಜನೆ ಹಮ್ಮಿಕೊಂಡರೆ, ಅಂತರ್ಜಲ ಕುಸಿದು ನೀರಿನ ಕೊರತೆ ಇನ್ನಷ್ಟು ಹೆಚ್ಚುತ್ತದೆ.

 

  1. ರೈತರ ಹೊಲ-ತೋಟಗಳ ಕಾಡುಪ್ರಾಣಿ ಹಾವಳಿಯಲ್ಲಿ ಹೆಚ್ಚಳ: ಈ ಬೃಹತ್ ಯೋಜನೆಯಿಂದ ಕಾಡು ಮತ್ತಷ್ಟು ಛಿದ್ರವಾಗುವದರಿಂದ, ರೈತರನ್ನು ಈಗಾಗಲೇ ಕಂಗಾಲಾಗಿಸಿರುವ ತೋಟ-ಹೊಲ-ಗದ್ದೆಗಳಲ್ಲಿನ ಕಾಡುಪ್ರಾಣಿ ಹಾವಳಿ ಇನ್ನೂ ಹೆಚ್ಚುತ್ತದೆ.

 

  1. ಭೂಕುಸಿತದ ಭೀತಿ: ಆಣೆಕಟ್ಟು, ಸುರಂಗ, ಜಲಾಶಯಗಳ ನೆಲಬಾವಿ, ಕೊಳವೆಮಾರ್ಗಗಳು-ಇವನ್ನೆಲ್ಲ ಭಾರಿ ಸ್ಫೋಟಕಗಳನ್ನು ಬಳಸಿಯೇ ನಿರ್ಮಿಸುವದು. ಇದರಿಂದಾಗಿ ಈ ಪ್ರದೇಶದಲ್ಲಿ ಭೂಕುಸಿತದ ಸಾಧ್ಯತೆಗಳು ಹೆಚ್ಚಾಗುತ್ತವೆ. (ಈ ಪ್ರಸ್ತಾವಿತ ಯೋಜನಾ ಸ್ಥಳಗಳಿಂದ ಕೆಲವೇ ಕಿಮಿ ದೂರದಲ್ಲಿ, ಬೇಡ್ತಿ ನದಿಗುಂಟ ಅರಬೈಲುಘಟ್ಟ ಪ್ರದೇಶದಲ್ಲಿ ಕಳೆದವರ್ಷ ಭಾರಿ ಭೂಕುಸಿತವಾಗಿದ್ದನ್ನು ಇಲ್ಲಿ ಉಲ್ಲೇಖಿಸಬಹುದು). ಸ್ಪೋಟಕಗಳ ಬಳಕೆಯಿಂದ, ನೆಲದಾಳದಲ್ಲಿ ಬಿರುಕುಗಳು ಹೆಚ್ಚಿ, ಅಂತರ್ಜಲ ಮತ್ತಷ್ಟು ಕುಸಿದು, ಈ ಪ್ರದೇಶದಲ್ಲಿ ನೀರಿನ ಕೊರತೆ ಮತ್ತಷ್ಟು ಹೆಚ್ಚುತ್ತದೆ. (ಈಗಾಗಲೇ ಯಲ್ಲಾಪುರ, ಮುಂಡಗೋಡು, ಶಿರಸಿ ತಾಲ್ಲೂಕುಗಳ ಪೂರ್ವಭಾಗದಲ್ಲಿ ಕುಡಿಯುವ ಹಾಗೂ ನೀರಾವರಿ ನೀರಿನ ಭಾರಿ ಕೊರತೆ ಇರುವದನ್ನು ಇಲ್ಲಿ ಉಲ್ಲೇಖಿಸಬಹುದು).
  2. ಕರಾವಳಿಯಲ್ಲಿ ಸಿಹಿನೀರಿನ ಕೊರತೆ: ಈಗಾಗಲೇ ಅಂಕೋಲಾ, ಕುಮಟಾ, ಹೊನ್ನಾವರ ಸೇರಿದಂತೆ, ಕರಾವಳಿ ಪ್ರದೇಶದಲ್ಲಿ ಕುಡಿಯುವ ಹಾಗೂ ನೀರಾವರಿಗಾಗಿ ಸಿಹಿನೀರಿನ ವ್ಯಾಪಕ ಕೊರತೆಯಿದೆ. ಬೇಡ್ತಿನದಿಯಲ್ಲಿ ನೀರು ಇನ್ನಷ್ಟು ಕಡಿಮೆಯಾದರೆ, ಕರಾವಳಿ ಪ್ರದೇಶದಲ್ಲಿ ಮೇಲ್ಮೈಸಿಹಿನೀರು ಒಣಗಿ, ಅಂತರ್ಜಲ ಮರುಪೂರಣ ಕುಸಿದು, ಜಲಮೂಲಗಳೆಲ್ಲ ಬರಿದಾಗಬಹುದು. ಹೀಗಾಗಿ, ಕರಾವಳಿಯ ಸಿಹಿನೀರಿನ ಸುರಕ್ಷತೆಗೆ ಭಂಗಬರುವದು.
  3. ಕರಾವಳಿಯ ಮೀನುಗಾರಿಕೆಗೆ ಪೆಟ್ಟು: ಬೇಡ್ತಿ ಹಾಗೂ ಅಘನಾಶಿನಿ ನದಿಗಳು ಮಳೆಗಾಲದಲ್ಲಿ ಹೊತ್ತೊಯ್ಯುವ  ಸಿಹಿನೀರು ಹಾಗೂ ಲವಣಾಂಶಭರಿತ ಪೋಷಕಾಂಶಗಳು ಕರಾವಳಿಯ ಹಿನ್ನೀರು, ಕಾಂಡ್ಲಾ, ಅಳಿವೆ ಹಾಗೂ ಸಮುದ್ರದ ಜಲಚರಗಳ  ಸಂತಾನಾಭಿವೃದ್ಧಿ ಹಾಗೂ ಪೋಷಣೆಗೆ ಬಲು ಅಗತ್ಯ. ಆದರೆ, ಈ ನದಿಗಳಲ್ಲಿ ಸಿಹಿನೀರಿನ ಹರಿವು ಕಡಿಮೆಯಾಗಿದ್ದರಿಂದ, ಕರಾವಳಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಮೀನಿನ ಇಳುವರಿ ಕಡಿಮೆಯಾಗುತ್ತಿದೆ. ಇದರಿಂದಾಗಿ, ಪಾರಂಪರಿಕ ಮೀನುಗಾರರು ಈಗಾಗಲೇ ಸಂಕಷ್ಟಕ್ಕೀಡಾಗಿದ್ದಾರೆ. ಈ ಯೋಜನೆಯಿಂದಾಗಿ, ಬೇಡ್ತಿನದಿಯ ಇರುವ ಹರಿವೂ ಇಲ್ಲದಾಗಿ, ಮೀನುಗಾರಿಕೆ ಆರ್ಥಿಕತೆಯನ್ನೇ ಅವಲಂಬಿಸಿರುವ ಲಕ್ಷಾಂತರ ಕುಟುಂಬಗಳು ನಿರ್ಗತಿಕರಾಗುತ್ತಾರೆ.
  4. ಕಾನೂನುಗಳಿಗೆ ವಿರುದ್ಧವಾದದ್ದು: ಬೇಡ್ತಿ ಕಣಿವೆ ಸಂರಕ್ಷಿತ ಪ್ರದೇಶವೂ ಸೇರಿದಂತೆ, ಅತ್ಯಂತ ಸೂಕ್ಷ್ಮಪರಿಸರದ ಸಹ್ಯಾದ್ರಿಯ ಈ ಪ್ರದೇಶದಲ್ಲಿ ಈ ಬೄಹತ್ ಯೋಜನೆ ಹಮ್ಮಿಕೊಳ್ಳುವದು, ಅರಣ್ಯ ಸಂರಕ್ಷಣಾ ಕಾಯ್ದೆ, ವನ್ಯಜೀವಿ ಸಂರಕ್ಷನೆ ಕಾಯ್ದೆ ಹಾಗೂ ಜೀವವೈವಿಧ್ಯ ಸಂರಕ್ಷಣಾ ಕಾಯ್ದೆಗಳ ಮೂಲಭೂತ ಆಶಯ ಮತ್ತು ನಿಯಮಗಳಿಗೆ ವಿರುದ್ಧವಾದುದು.
  5. ಆರ್ಥಿಕವಾಗಿ ಕಾರ್ಯಸಾಧುವಲ್ಲ: ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಹಮ್ಮಿಕೊಳ್ಳುವ ಈ ಯೋಜನೆಯು ಆರ್ಥಿಕವಾಗಿ ಕೂಡ ಕಾರ್ಯಸಾಧುವಲ್ಲ. ಏಕೆಂದರೆ, ಇಲ್ಲಿನ ಪರಿಸರನಾಶವಾಗಿ ಈ ಪ್ರದೇಶದಲ್ಲೂ ನೀರಿನ ಕೊರತೆಯುಂಟಾಗುತ್ತದೆ. ಇಲ್ಲಿ ಹೆಚ್ಚುವರಿ ನೀರಿನ ಲಭ್ಯತೆಯೇ ಇರದಿರುವದರಿಂದ, ಬಯಲುನಾಡಿಗೆ ನೀರು ಒಯ್ಯಲೂ ಸಾಧ್ಯವಾಗದು.
  6. ಒಟ್ಟಾರೆಯಾಗಿ, ಇದು ಕೃಷಿ ಮತ್ತು ಪರಿಸರಕ್ಕೆ ಭಾರಿ ಘಾಸಿ ಮಾಡುವ ಅವೈಜ್ನಾನಿಕವಾದ ಯೋಜನೆ. ಯಾರಿಗೂ ನೀರು ಪೂರೈಸಲಾಗದ ಸುಸ್ಥಿರವಲ್ಲದ ಹಾಗೂ ಕಾರ್ಯಸಾಧುವಲ್ಲದ ಯೋಜನೆ. ವನವಾಸಿಗಳು, ರೈತರು, ಮೀನುಗಾರರು-ಎಲ್ಲರೂ ಸೇರಿದಂತೆ, ಮಲೆನಾಡು ಹಾಗೂ ಕರಾವಳಿಯ ಜನಸಮೂದಾಯಕ್ಕೆ ಮಾರಕವಾಗಬಲ್ಲ ಯೋಜನೆ. ಆದ್ದರಿಂದ, ಈ ಯೋಜನೆಯನ್ನು ಕೈಬಿಡುವದು ನಾಡಿನ ಸಕಲರ ಹಿತದೃಷ್ಟಿಯಿಂದ, ತೀರಾ ಅಗತ್ಯವಿದೆ.

ನಿರ್ಣಯಗಳು

ಬೇಡ್ತಿ -ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮೀತಿಯ ಆಶ್ರಯದಲ್ಲಿ ದಿನಾಂಕ: ೨೪-೩-೨೦೨೧ ರಂದು ಪಶ್ಚಿಮ ಘಟ್ಟದ ನದೀ ತಿರುವು ಯೋಜನೆಗಳ ಸಾಧಕ-ಬಾಧಕಗಳ ಕುರಿತು ರಾಜ್ಯ ಮಟ್ಟದ ಸಮಾಲೋಚನಾ ಕಾರ‍್ಯಾಗಾರ ನಡೆಯಿತು. ಪರಮ ಪೂಜ್ಯ ಶ್ರೀ ಶ್ರೀಮದ್‌ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಶ್ರೀ ಸ್ವರ್ಣವಲ್ಲೀ ಮಹಾ ಸಂಸ್ಥಾನ ಇವರ ಗೌರವ ಅಧ್ಯಕ್ಷತೆಯಲ್ಲಿ ನಡೆದ ಕಾರ‍್ಯಾಗಾರದಲ್ಲಿ ವಿಜ್ಞಾನಿಗಳು, ಜನಪ್ರತಿನಿಧಿಗಳು, ರೈತರು, ವನವಾಸಿಗಳು, ಮಹಿಳೆಯರು ಪಶ್ಚಿಮಘಟ್ಟದ ಜಿಲ್ಲೆಗಳ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

೧) ರಾಜ್ಯ ನೀರಾವರಿ ಇಲಾಖೆ ಬೇಡ್ತಿ-ವರದಾ ನದೀ ಜೋಡಣೆ ಯೋಜನೆ ಕುರಿತು ವಿವರ ಯೋಜನಾವರದಿ (ಡಿ.ಪಿ.ಆರ್) ತಯಾರಿಸಲು ಕೇಂದ್ರ ಸರ್ಕಾರದ ಎನ್.ಡಬ್ಲ್ಯು.ಡಿ.ಎ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಗೆ ನೀಡಿರುವ ಆದೇಶವನ್ನು ಹಿಂಪಡೆಯಬೇಕು. ರದ್ದುಪಡಿಸಬೇಕು. ಈ ಕುರಿತು ಎನ್‌ಡಬ್ಲ್ಯುಡಿಎ ಅವರು ಯಾವುದೇ ಸ್ಥಳ ಸಮೀಕ್ಷೆ ಕೈಗೆತ್ತಿಕೊಳ್ಳಬಾರದು.

೨) ಪಶ್ಚಿಮಘಟ್ಟದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳ ದಿಕ್ಕು ತಿರುಗಿಸುವ ಕುರಿತು ಅಧ್ಯಯನ ಮಾಡಲು ರಾಜ್ಯ ನೀರಾವರಿ ಇಲಾಖೆ ಎನ್.ಡಬ್ಲ್ಯು.ಡಿ.ಎ ಗೆ ನೀಡಿರುವ ಆದೇಶ ಹಿಂಪಡೆಯಬೇಕು ಹಾಗೂ ರದ್ದು ಪಡಿಸಬೇಕು.

೩) ಈ ಮೇಲಿನ ೨ ಬೇಡಿಕೆಗಳನ್ನು ಈಡೇರಿಸಲು ರಾಜ್ಯದ ಮುಖ್ಯಮುಂತ್ರಿಗಳಿಗೆ ನಿಯೋಗದ ಮೂಲಕ ಹಕ್ಕೊತ್ತಾಯದ ಮನವಿ ಸಲ್ಲಿಸಬೇಕು. ಮಾನ್ಯ ಸ್ಪೀಕರ್,  ಉ.ಕ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರ ನೇತೃತ್ವದಲ್ಲಿ ಈ ನಿಯೋಗ ಒಯ್ಯಲು ದಿನಾಂಕ ನಿಶ್ಚಯಿಸಬೇಕು.

೪) ಜಿಲ್ಲೆಯ ಜಿಲ್ಲಾ ಪಂಚಾಯತ , ತಾಲೂಕ ಪಂಚಾಯತಗಳು, ಎಲ್ಲಾ ಗ್ರಾಮ ಪಂಚಾಯತಗಳು ಬೇಡ್ತಿ-ವರದಾ ಸೇರಿದಂತೆ ಪಶ್ಚಿಮ ಘಟ್ಟದಲ್ಲಿ ನದೀ ತಿರುವು/ನದೀ ಜೋಡಣೆ ಯೋಜನೆ ಪ್ರಸ್ತಾವನೆಗಳನ್ನು ಸರ್ಕಾರ ಕೈ ಬಿಡಬೇಕು ಎಂಬ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಕಾರ್ಯಾಗಾರ ಮನವಿ ಮಾಡಿದೆ.

೫) ಇದೇ ರೀತಿ ಉ.ಕ ಜಿಲ್ಲೆಯ ಸಹಕಾರಿ ಸಂಸ್ಥೆಗಳು, ಗ್ರಾಮೀಣ ಅಭಿವೃದ್ಧಿ , ಕೃಷಿ ಕಿಸಾನ್, ರೈತ ವನವಾಸಿ ಸಂಘಟನೆಗಳು ಸರ್ಕಾರಕ್ಕೆ ಮನವಿ ಮಾಡಬೇಕು ಎಂದು ಕಾರ‍್ಯಾಗಾರ ಕರೆನೀಡಿದೆ.

೬) ಪಶ್ಚಿಮ ಘಟ್ಟದ ವಿವಿಧ ಸಂಘ-ಸಂಸ್ಥೆಗಳು ತಮ್ಮ ತಮ್ಮ ಜಿಲ್ಲೆಗಳಲ್ಲಿ ನದೀ ತಿರುವು/ ಜೋಡಣೆ ಯೋಜನೆಗಳ ದುಷ್ಪರಿಣಾಮಗಳ ಕುರಿತು ಜನಜಾಗೃತಿ ಸಭೆ ನಡೆಸಲು ಕರೆ ನೀಡಲಾಗಿದೆ. ಈ ಕುರಿತು ಮುಂದಿನ ಕಾರ್ಯಚಟುವಟಿಕೆಗಳನ್ನು ಚುರುಕುಗೊಳಿಸಲು ಪಶ್ಚಿಮ ಘಟ್ಟದ ಪರಿಸರ ಸಂಘ ಸಂಸ್ಥೆಗಳ ಒಕ್ಕೂಟ ರಚಿಸಲಾಗುತ್ತದೆ.

೭) ಈ ಹಿನ್ನೆಲೆಯಲ್ಲಿ, ಕಾಳಿ, ಬೇಡ್ತಿ, ಅಘನಾಶಿನಿ, ಶರಾವತಿ ನದಿಗಳು ಸೇರಿದಂತೆ ಪಶ್ಚಿಮ ಘಟ್ಟದಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿರುವ ಯಾವುದೇ ನದಿ ತಿರುವು ಅಥವಾ ಜೋಡಣೆ ಯೋಜನೆಗಳನ್ನು ಕೈಬಿಡಬೇಕು.

Related Articles

Back to top button