ಪ್ರಗತಿವಾಹಿನಿ ಸುದ್ದಿ; ಮೈಸೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪತ್ರ ಬರೆದು ದೂರು ನೀಡಿದ ವಿಚಾರವಾಗಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಸಿಎಂ ನನ್ನ ಗಮನಕ್ಕೆ ತರದೇ ನೇರವಾಗಿ ಅನುದಾನ ಬಿಡುಗಡೆ ಮಾಡಿದ್ದಾರೆ. ನನ್ನ ಇಲಾಖೆಯಲ್ಲಿನ ಹಣ ವರ್ಗಾವಣೆ ಮಾಡಿದ್ದಾರೆ. ಇದು ಕಾನೂನು ಉಲ್ಲಘನೆಯಾಗುತ್ತದೆ ಹೀಗಾಗಿ ನಾನು ದೂರು ನೀಡಿದ್ದಾಗಿ ಸ್ಪಷ್ಟಪಡಿಸಿದರು.
ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಈಶ್ವರಪ್ಪ, ಸಚಿವರ ಗಮನಕ್ಕೆ ತರದೇ ಇಲಾಖೆ ಹಣ ವರ್ಗಾವಣೆ, ಹಣ ಬಿಡುಗಡೆ ಮಾಡಿದ್ದಾರೆ. ಹಣ ಬಿಡುಗಡೆ ಬಳಿಕ ನನ್ನ ಸಚಿವರ ಗಮನಕ್ಕೆ ತರುವಂತೆ ಹೇಳಿದ್ದಾರೆ. ಹಾಗಾಗಿ ನಾನು ಪ್ರಧಾನಿ ಮೋದಿ, ಅಮಿತ್ ಶಾ ಅವರಿಗೂ ಪತ್ರ ಬರೆದಿದ್ದೇನೆ ಎಂದರು.
ಬೆಂಗಳೂರು ನಗರ ಜಿ.ಪಂ ಗೆ ನನ್ನ ಗಮನಕ್ಕೆ ತರದೇ ಹಣ ಬಿಡುಗಡೆ ಮಾಡಲಾಗಿದ್ದರಿಂದ ಅನುದಾನ ತಡೆ ಹಿಡಿದಿದ್ದೇನೆ. ಆರ್ಥಿಕ ಇಲಾಖೆ ಜತೆ ನಾನು ನೇರವಾಗಿ ಮಾತನಾಡಿದ್ದೇನೆ. ಅವರು ನಮ್ಮಿಂದ ತಪ್ಪಾಗಿದೆ ತಿದ್ದಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಸಿಎಂ ಮೊದಲು ನನ್ನ ಗಮನಕ್ಕೆ ತರಬೇಕಿತ್ತು. ಸಚಿವರಿಗೇ ಗೊತ್ತಿಲ್ಲದೇ ಹಣ ವರ್ಗಾವಣೆ ಕಾನೂನು ಉಲ್ಲಂಘನೆಯಾಗುತ್ತದೆ. ರಸ್ತೆ ಅಭಿವೃದ್ಧಿಗಾಗಿ ಶಾಸಕರಿಗೆ ಹಣ ನೀಡಲು ನನ್ನ ಆಕ್ಷೇಪವಿಲ್ಲ. ಆದರೆ ನಿಯಮಾನುಸಾರ ಹಣ ನೀಡಲಿ ಎಂಬುದು ನನ್ನ ಆಗ್ರಹ ಎಂದರು.
ನಾನು ರೆಬಲ್ ಅಲ್ಲ. ಸಿಎಂ ವಿರುದ್ಧ ಯಾವತ್ತೂ ರೆಬಲ್ ಆಗಿಲ್ಲ. ನನ್ನ ನಿರ್ಧಾರ ನ್ಯಾಯಬದ್ಧವಾಗಿದೆ. ರಾಜೀನಾಮೆ ಬಗ್ಗೆಯೂ ಕೇಳಿದ್ದಾರೆ. ಖಾತೆ ಬದಲಾವಣೆ ಬಗ್ಗೆಯೂ ಚರ್ಚೆ ನಡೆದಿದೆ. ರಾಜ್ಯದ ಹಲವು ಶಾಸಕರು, ಸಂಸದರು, ಪಕ್ಷದ ಪದಾಧಿಕಾರಿಗಳು ನನ್ನ ಪರ ಮಾತನಾಡಿದ್ದಾರೆ. ಸಹಿ ಸಂಗ್ರಹಿಸುವ ಬಗ್ಗೆಯೂ ಅವರು ಕೇಳಿದ್ದಾರೆ. ಆದರೆ ಸಹಿ ಸಂಗ್ರಹ ಬೇಡ ಎಂದು ನಾನು ಹೇಳಿದ್ದೇನೆ. ರಾಜ್ಯದಲ್ಲಿ ಒಂದು ನೀತಿ ನಿಯಮ ಜಾರಿ ಮಾಡಬೇಕು ಎಂಬುದು ನನ್ನ ಪ್ರಯತ್ನ. ಈ ಬಗ್ಗೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಣೀಲ್ ಜೊತೆಗೂ ಚರ್ಚಿಸಿದ್ದೇನೆ. ಚುನಾವಣೆ ಬಳಿಕ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಸಿಡಿ ಪ್ರಕರಣ; ಇಂದು ವಿಚಾರಣೆಗೆ ಹಾಜರಾಕ್ತಾರಾ ರಮೇಶ್ ಜಾರಕಿಹೊಳಿ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ