ಪ್ರತ್ಯೇಕ ರಾಜ್ಯ ಎಂದಿದ್ದ ಉಮೇಶ ಕತ್ತಿ ಈಗೇಕೆ ಮಾತನಾಡುತ್ತಿಲ್ಲ? – ಡಿ.ಕೆ.ಶಿವಕುಮಾರ ಪ್ರಶ್ನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಸುಸಂಸ್ಕೃತ, ಸಭ್ಯ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಸ್ವಭಾವ ಅವರದ್ದು. ಅವರ ಬಗ್ಗೆ ಎಲ್ಲೂ ಅಪಸ್ವರ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಎಲ್ಲ ಮುಖಂಡರು ಚುನಾವಣೆ ಮುಗಿಯುವವರೆಗೂ ಇಲ್ಲೇ ಇರ್ತಾರೆ. ಜಿಲ್ಲಾ ಕಾಂಗ್ರೆಸ್ ಮೇಲೆ ಅವಲಂಭಿತರಾಗದೆ ಅವರವರಿಗೆ ವಹಿಸಿಕೊಟ್ಟ ಕೆಲಸ ಮಾಡುತ್ತಾರೆ ಎಂದು ತಿಳಿಸಿದರು.
ಈ ಸರಕಾರ ಬಂದು 2 ವರ್ಷವಾದರೂ ಸುವರ್ಣ ವಿಧಾನಸೌಧದಲ್ಲಿ ಒಂದೇ ಒಂದು ಸಭೆಯನ್ನೂ ಮಾಡಿಲ್ಲ. ಉತ್ತರ ಕರ್ನಾಟಕ ನಿರ್ಲಕ್ಷ್ಯದ ವಿರುದ್ಧ ಉಮೇಶ ಕತ್ತಿ ಪ್ರತ್ಯೇಕ ರಾಜ್ಯ ಮಾಡ್ತೀವಿ ಅಂದಿದ್ದರು. ಆದರೆ ಸುವರ್ಣ ವಿಧಾನಸೌಧದ ಕುರಿತು, ಉತ್ತರ ಕರ್ನಾಟಕ ನಿರ್ಲಕ್ಷ್ಯ ಕುರಿತು ಈಗ ಒಂದೇ ಒಂದು ಮಾತನಾಡುತ್ತಿಲ್ಲ. ಸರಕಾರದ ವಿರುದ್ಧ ಜನರೆಲ್ಲ ಪ್ರತಿಭಟನೆ ಮಾಡಲು ಕಾಯುತ್ತಿದ್ದಾರೆ. ಕೊರೋನಾ ಇರುವುದರಿಂದ ಸುಮ್ಮನಿದ್ದಾರೆ ಎಂದು ಶಿವಕುಮಾರ ಹೇಳಿದರು.
ಕೊರೋನಾ ಸಂದರ್ಭದಲ್ಲಿ ಹಾನಿಗೀಡಾದವರಿಗೆ ಸರಕಾರದಿಂದ ಏನೂ ನೆರವು ಸಿಕ್ಕಿಲ್ಲ. ಆಡಳಿತ ಸಂಪೂರ್ಣ ಕುಸಿದು ಹೋಗಿದೆ. ಬೆಲೆ ಏರಿಕೆ ಮಿತಿಮೀರಿದೆ. ಗ್ಯಾಸ್, ಸಿಮೆಂಟ್. ಯೂರಿಯಾ , ಕಬ್ಬಿಣ ಎಲ್ಲ ಪದಾರ್ಥಗಳ ದರ ಗಗನಕ್ಕೇರಿದೆ. ಜನರ ಆಕ್ರೋಶವನ್ನು ಈ ಚುನಾವಣೆಯಲ್ಲಿ ತೋರಿಸುತ್ತಾರೆ ಎಂದರು.
ಸಾರಿಗೆ ನೌಕರರಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಅವರನ್ನು ಸರಕಾರ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿದೆ ಎಂದ ಅವರು, ನಾವು ಬಸ್ ಸ್ಟ್ಯಾಂಡ್ ನಲ್ಲೇ ಇರೋದು. ನಾವು ಜನರ ಮಧ್ಯೆ ಇರೋದು. ಬಿಜೆಪಿಯವರ ಹಾಗೆ ವಿಧಾನಸೌಧದಲ್ಲೇ ಇರೋದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ತಿರುಗೇಟು ನೀಡಿದರು.
ಹಳ್ಳಿಗಳಲ್ಲಿ ಸಾವಿರಾರು ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದಾರೆ. ಕೊರೋನಾ ಸಂದರ್ಭದಲ್ಲಿ ಸಂಕಷ್ಟಕ್ಕೀಡಾದವರೆಲ್ಲ ನಮಗೆ ಬೆಂಬಲ ನೀಡುತ್ತಿದ್ದಾರೆ ಎಂದು ಅವರು ಹೇಳಿದರು.
ಮುಖಂಡರಾದ ಕೆ.ಎಚ್.ಮುನಿಯಪ್ಪ, ರಾಮಲಿಂಗಾ ರಡ್ಡಿ, ಎಂ.ಬಿ.ಪಾಟೀಲ, ಲಕ್ಷ್ಮಿ ಹೆಬ್ಬಾಳಕರ್, ನಾಗರಾದ ಯಾದವ ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ