Kannada NewsKarnataka NewsLatest

ಧಾರ್ಮಿಕ ಆಚರಣೆ/ಸಮಾರಂಭ ನಿಷೇಧ: ಜಿಲ್ಲಾಧಿಕಾರಿ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದ್ದು, ಜಿಲ್ಲೆಯಲ್ಲಿ ಈ ಮಾರ್ಗಸೂಚಿ ಪಾಲನೆಗೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು  ಜಿಲ್ಲಾಧಿಕಾರಿ ಡಾ. ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.
ಭಾರತ ಸರ್ಕಾರದ ಕೇಂದ್ರ ಗ್ರಹ ಮಂತ್ರಾಲಯದ ಆದೇಶದ ಪ್ರಕಾರ ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು  ಸಾರ್ವಜನಿಕ ಸಮಾರಂಭ, ಆಚರಣೆ ಸೇರಿದಂತೆ ಮನರಂಜನೆ ಕಾರ್ಯಕ್ರಮ ಹಾಗೂ ಇತರೆ ಸಂದರ್ಭಗಳಲ್ಲಿ ಸೇರಬಹುದಾದ ಸಾರ್ವಜನಿಕರ ಸಂಖ್ಯೆಯನ್ನು ಮಿತಿಗೊಳಿಸಲು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಕೋವಿಡ್ ನಿಯಂತ್ರಣ ಕ್ರಮಗಳು:
ಹೊಸ ಮಾರ್ಗಸೂಚಿ ಪ್ರಕಾರ ತೆರೆದ ಪ್ರದೇಶದಲ್ಲಿ ಮದುವೆ ನಡೆಯುತ್ತಿದ್ದರೆ 200 ಜನರಿಗೆ ಹಾಗೂ ಕಲ್ಯಾಣ ಮಂಟಪ, ಸಭಾಂಗಣ, ಹಾಲ್ ಹಾಗೂ ಮುಚ್ಚಿದ ಯಾವುದೇ ಪ್ರದೇಶದಲ್ಲಿ ನಡೆಯುವ ಮದುವೆ ಸಮಾರಂಭಕ್ಕೆ 100 ಜನರಿಗೆ ಮಿತಿಗೊಳಿಸಬೇಕು.
ಜನ್ಮದಿನ ಹಾಗೂ  ಇತರೆ ಆಚರಣೆ ಸಂದರ್ಭದಲ್ಲಿ ತೆರೆದ ಪ್ರದೇಶದಲ್ಲಿ 50 ಹಾಗೂ ಸಭಾಂಗಣ, ಹಾಲ್ ಹಾಗೂ ಇತರೆ ಮುಚ್ಚಿದ ಪ್ರದೇಶದಲ್ಲಿ 25 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು.
ನಿಧನ/ಶವಸಂಸ್ಕಾರದ ವೇಳೆ ತೆರೆದ ಪ್ರದೇಶದಲ್ಲಿ 50 ಮತ್ತು ಮುಚ್ಚಿದ ಪ್ರದೇಶದಲ್ಲಿ 25 ಜನ;  ಅಂತ್ಯ ಕ್ರಿಯೆ ವೇಳೆ 25 ಜನರು ಮೀರದಂತೆ ಎಚ್ಚರಿಕೆ ವಹಿಸಬೇಕು.
ಇತರೆ ಸಮಾರಂಭಗಳ ಸಾಮದರ್ಭದಲ್ಲಿ ಹಾಲ್ (ಸಭಾಂಗಣ)ನ ವಿಸ್ತೀರ್ಣಕ್ಕೆ ಅನುಗುಣವಾಗಿ 50 ಜನ ಮೀರದಂತೆ ಇರಬೇಕು. ರಾಜಕೀಯ ಸಮಾವೇಶದಲ್ಲಿ 200 ಜನ ಮೀರದಂತೆ ನೋಡಿಕೊಳ್ಳಬೇಕು ಎಂದು ನೂತನ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಧಾರ್ಮಿಕ ಆಚರಣೆ-ಸಮಾರಂಭ ನಿಷೇಧ:
ಕೋವಿಡ್-೧೯ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಧಾರ್ಮಿಕ ಆಚರಣೆ ಹಾಗೂ ಸಮಾರಂಭಗಳನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ತಿಳಿಸಿದ್ದಾರೆ.
ಈ ಮೇಲ್ಕಂಡ ಸಂದರ್ಭಗಳಲ್ಲಿ ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರದ ಸಂಬಂಧಪಟ್ಟ ಇಲಾಖೆಗಳು ಹೊರಡಿಸುವ ಪ್ರಮಾಣಿತ ಕಾರ್ಯವಿಧಾನವನ್ನು ಎಲ್ಲರೂ ಕಟ್ಟುವ ಪಾಲಿಸಬೇಕು.
ಸಭಾಂಗಣ/ಕಲ್ಯಾಣಮಂಟಪ/ಸಿನಿಮಾ ಮಂದಿರ/ಹಾಲ್ ಗಳು ಹಾಗೂ ಜನ ಸೇರುವ ಇತರೆ ಪ್ರದೇಶಗಳ ಉಸ್ತುವಾರಿ ಹೊಂದಿದವರು ಕಡ್ಡಾಯವಾಗಿ ‌ಸ್ಯಾನಿಟೈಜೇಷನ್ ಕ್ರಮಗಳನ್ನು ಕೈಗೊಳ್ಳಬೇಕು.
ಮಾರ್ಗಸೂಚಿ ಪಾಲಿಸದಿದ್ದರೆ ಕಠಿಣ ಕ್ರಮ:
ಸರ್ಕಾರ ಪ್ರಕಟಿಸಿರುವ ಮಾರ್ಗಸೂಚಿಯನ್ನು ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಪಾಲನೆಗೆ ಸಂಬಂಧಿಸಿದಂತೆ ಆಯಾ ಉಪ ವಿಭಾಗಾಧಿಕಾರಿಗಳು ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಿಗೆ ಉಸ್ತುವಾರಿಯನ್ನು ವಹಿಸಲಾಗಿದೆ.
ಮಾರ್ಗಸೂಚಿಯನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯನ್ನು ಆಯಾ ತಾಲ್ಲೂಕುಗಳ ತಹಶೀಲ್ದಾರರು ನೇತೃತ್ವದಲ್ಲಿ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮತ್ತು ಸ್ಥಳೀಯ ನಗರ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಯಾ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳಿಗೆ ವಹಿಸಲಾಗಿದೆ.
ಮಾರ್ಗಸೂಚಿ ಪಾಲನೆಗೆ ಸಂಬಂಧಿಸಿದಂತೆ ನ್ಯೂನ್ಯತೆ ಕಂಡುಬಂದರೆ‌ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕೋವಿಡ್-೧೯ ನಿಯಂತ್ರಣ ಮಾರ್ಗಸೂಚಿ ಪಾಲನೆಯಲ್ಲಿ ಲೋಪವೆಸಗುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ -2005ರ ಕಲಂ 51ರಿಂದ 60 ಹಾಗೂ ಭಾರತೀಯ ದಂಡಸಂಹಿತೆ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button