ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೊರೊನಾ ವಿಚಾರದಲ್ಲಿ ಸರ್ಕಾರದ ನಿರ್ಲಕ್ಷ್ಯ ಧೋರಣೆ ಇದೇ ರೀತಿ ಮುಂದುವರಿದಲ್ಲಿ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಎಚ್ಚರಿಕೆ ನೀಡಿದ್ದಾರೆ.
ಕೊರೊನಾದಿಂದಾಗಿ ರಾಜ್ಯದಲ್ಲಿ ಉಂಟಾಗಿರುವ ಸ್ಥಿತಿಗತಿ ಕುರಿತು ಪಕ್ಷದ ಸಂಸದರು, ಶಾಸಕರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿದ ಅವರು, ಕೆಪಿಸಿಸಿ ಅಧ್ಯಕ್ಷರು, ಹಿರಿಯ ನಾಯಕರೊಂದಿಗೆ ಚರ್ಚಿಸಿ ಹೋರಾಟದ ರೂಪುರೇಷೆ ಸಿದ್ಧಪಡಿಸುವುದಾಗಿ ತಿಳಿಸಿದರು.
ತಮ್ಮ ಕ್ಷೇತ್ರಗಳಲ್ಲಿ ಕೊರೊನಾ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್ಗಳಿಗೆ ತೀವ್ರ ಕೊರತೆ ತಲೆದೋರಿದೆ ಎಂದು ಶಾಸಕರು ಶಾಸಕಾಂಗ ಪಕ್ಷದ ನಾಯಕರ ಗಮನ ಸೆಳೆದರು.
ಕೇಂದ್ರ ಮತ್ತು ರಾಜ್ಯ ಸರ್ಕಾರ ಕೊರೊನಾ ಸೋಂಕು ನಿಯಂತ್ರಿಸುವ ಮತ್ತು ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ವಿಫಲವಾಗಿದೆ ಎಂದು ಜನ ಸಾಮಾನ್ಯರು ಹೇಳುತ್ತಿದ್ದಾರೆ. ಜನ ಎರಡೂ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋವಿಡ್ ಎರಡನೇ ಅಲೆ ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಿಲ್ಲ. ಎರಡನೇ ಅಲೆ ಕುರಿತು ಉಭಯ ಸರ್ಕಾರಕ್ಕೆ ಮಾಹಿತಿ ಇತ್ತು. ತಜ್ಞರು ಸಹ ಎಚ್ಚರಿಕೆ ಕೊಟ್ಟಿದ್ದರು. ಆದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿಲ್ಲ. ರಾಜ್ಯದಲ್ಲಿ ತಜ್ಞರ ತಂಡ ಕಳೆದ ವರ್ಷ ನವೆಂಬರ್ನಲ್ಲೇ ವರದಿ ನೀಡಿತ್ತು. ಆದರೆ, ಸರ್ಕಾರ ನಡೆಸುವವರು ಕೊರೊನಾ ನಿಯಂತ್ರಿಸುವದಕ್ಕಿಂತ ಮುಖ್ಯವಾಗಿ ಚುನಾವಣೆಗಳನ್ನು ನಡೆಸುವುದಲ್ಲಿಯೇ ಮೈಮರೆತಿದ್ದರು. ಹೀಗಾಗಿ ತಜ್ಞರ ಶಿಫಾರಸುಗಳನ್ನು ಜಾರಿಗೆ ತರುವಲ್ಲಿ ನಿರ್ಲಕ್ಷ್ಯ ಮಾಡಿದರು.
ಚುನಾವಣೆಗಳನ್ನು ನಡೆಸಿದ್ದರಿಂದ ಜನ ಸೇರುವಂತಾಯಿತು. ಹೀಗಾಗಿ ಸೋಂಕು ವ್ಯಾಪಕವಾಗಿ ಹರಡಿತು. ಸ್ವತಃ ಮುಖ್ಯಮಂತ್ರಿಗಳೇ ಪ್ರಚಾರ ಸಭೆಗಳಲ್ಲಿ ಭಾಗಿಯಾದರು. ಆದರೆ, ಕೇರಳದಲ್ಲಿ ಈ ರೀತಿ ಆಗಲಿಲ್ಲ. ಸೋಂಕು ನಿಯಂತ್ರಿಸುವಲ್ಲಿ ಅಲ್ಲಿಯ ಸರ್ಕಾರ ಸಫಲವಾಗಿದೆ. ಕೊರೊನಾ ಸೋಂಕಿನಲ್ಲಿ ಬೆಂಗಳೂರಿಗೆ ಇಡೀ ದೇಶದಲ್ಲೇ ನಂಬರ್ ಒನ್ ಸ್ಥಾನ ಸಿಕ್ಕಿದೆ. ರಾಜ್ಯದಲ್ಲಿ ಸೋಂಕಿತರಿಗೆ ಬೆಡ್, ಆಂಬ್ಯುಲೆನ್ಸ್, ರೆಮಿಡಿಸಿವರ್, ವೆಂಟಿಲೇಟರ್, ಆಕ್ಷಿಜನ್ ಸಿಗುತ್ತಿಲ್ಲ. ನಾವು ಸಹ ಸರ್ಕಾರಕ್ಕೆ ಹೇಳಿ ಸಾಕಾಯಿತು. ನಿರ್ಲಕ್ಷ್ಯ ಧೋರಣೆ ಇದೇ ರೀತಿ ಮುಂದುವರಿದರೆ ಬೀದಿಗಿಳಿಯುವುದು ಅನಿವಾರ್ಯ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಅನೇಕ ಕ್ಷೇತ್ರಗಳಲ್ಲಿ ಶಾಸಕರು ಸೋಂಕಿತರಿಗೆ ನೆರವಾಗುತ್ತಿದ್ದಾರೆ. ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುತ್ತಿದ್ದಾರೆ. ನಿಜಕ್ಕೂ ಇದು ಒಳ್ಳೆಯ ಕೆಲಸವಾಗಿದ್ದು ಮುಂದುವರಿಸಿ ಎಂದರು.
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಕಾರ್ಯಾಧ್ಯಕ್ಷರಾದ ಧ್ರುವನಾರಾಯಣ, ಈಶ್ವರ ಖಂಡ್ರೆ, ಸಲೀಂ ಅಹಮದ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಎಸ್.ಆರ್. ಪಾಟೀಲ್ ಭಾಗವಹಿಸಿದ್ದರು.
24 ರೋಗಿಗಳ ಸಾವು ಪ್ರಕರಣ; ಘಟನೆ ಬಗ್ಗೆ ಸ್ಪಷ್ಟನೆ ನೀಡಿದ ಆರೋಗ್ಯ ಸಚಿವ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ