✍️ ಪುಷ್ಪ ಪ್ರಸಾದ್ ಉಡುಪಿ
ದಿನಾಂಕ 14-05-2021 ಶುಕ್ರವಾರ ‘ಅಕ್ಷಯ ತೃತೀಯ‘ ದಿನ. ಸನಾತನ ಧರ್ಮದಲ್ಲಿ ಈ ದಿನಕ್ಕೆ ವಿಶೇಷ ಮಹತ್ವವಿದೆ. ಅವುಗಳು ಯಾವ್ಯಾವುದು ಎಂದು ತಿಳಿದುಕೊಳ್ಳೋಣ ಬನ್ನಿ :-
ಹಿಂದುಗಳ ಅತ್ಯಂತ ಪವಿತ್ರವಾದ ಶುಭ ಮುಹೂರ್ತಗಳಲ್ಲಿ ಯುಗಾದಿ, ಅಕ್ಷಯ ತೃತೀಯ, ವಿಜಯ ದಶಮಿಗಳದ್ದು ಮೇಲ್ಪಂಕ್ತಿ. ಈ ದಿವಸಗಳಂದು ಸಾಮಾನ್ಯವಾಗಿ ಎಲ್ಲಾ ಶುಭ ಕೆಲಸವನ್ನು ಮಾಡಿದರೆ ತುಂಬಾ ಒಳ್ಳೆದು. ಅಕ್ಷಯ ತೃತೀಯ ದಿವಸ ಜೀವನದ ಹೊಸ ಕೆಲಸ, ಉದ್ಯೋಗ ಪ್ರಾರಂಭ, ಚಿನ್ನಾಭರಣ ಖರೀದಿ ತುಂಬಾ ಶುಭಕರ ಎಂದು ಹೇಳಲಾಗುತ್ತಿದೆ. ಹೀಗಾಗಿ ಪ್ರತಿವರ್ಷ ಅಕ್ಷಯ ತೃತೀಯ ದಿನದಂದು ಚಿನ್ನಾಭರಣ, ಆಸ್ತಿ ಕೊಳ್ಳುವವರ ಸಂಖ್ಯೆ ದ್ವಿಗುಣವಾಗುತ್ತಲೇ ಇದೆ.
ಗಂಗಾ ಮಾತೆ ಸ್ವರ್ಗದಿಂದ ಭೂಮಿಗಿಳಿದ ದಿನವೇ ಅಕ್ಷಯ ತೃತೀಯ ಎಂಬ ಪ್ರತೀತಿ. ಇದು ಕೃತ ಯುಗದ ಪ್ರಾರಂಭ ದಿನ. ಪರಶುರಾಮ ಹಾಗೂ ಬಸವೇಶ್ವರರು ಜನಿಸಿದ್ದು ಇದೇ ದಿವಸ. ಅಕ್ಷಯ ತೃತೀಯದಂದು ವಿಷ್ಣುವಿನ ಪೂಜೆ ಮಾಡಿದರೆ ಮೋಕ್ಷ ದೊರೆಯುವುದೆಂಬ ಪ್ರತೀತಿ ಇದೆ. ಅದರಲ್ಲೂ ಅಕ್ಷಯ ತೃತೀಯ ತಿಥಿಯ ಜೊತೆ ರೋಹಿಣಿ ನಕ್ಷತ್ರವಿದ್ದರೆ ಮಹಾ ಪುಣ್ಯಕರ ಎಂಬ ನಂಬಿಕೆಯಿದೆ. ಈ ದಿನದಂದು ವಿಷ್ಣು ಮತ್ತು ಲಕ್ಷ್ಮೀ ಗಂಗಾದೇವಿಗೆ ಪೂಜೆ ಸಲ್ಲಿಸಿದ್ದರಿಂದ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಸಕಲ ದೋಷ ಪರಿಹಾರವಾಗುತ್ತದೆಂದು ಪುರಾಣ ಪ್ರತೀತಿ ಇದೆ.
ಅಕ್ಷಯ ತೃತೀಯ ದಿನ ಸೂರ್ಯ, ಚಂದ್ರ ಏಕಕಾಲದಲ್ಲಿ ಉನ್ನತ ಪ್ರಮಾಣ ಮುಟ್ಟಿ ಉಚ್ಚರಾಶಿಯಲ್ಲಿ ಉಜ್ವಲತೆ ಸಂಭವಿಸುವುದರಿಂದ ಎಲ್ಲಾ ಕಾರ್ಯಗಳಿಗೆ ಶುಭಕರ. ಸೂರ್ಯ ಆತ್ಮಕಾರಕವಾದರೆ, ಚಂದ್ರ ಮನಸ್ಸುಕಾರಕ. ಹೀಗಾಗಿ ಆತ್ಮ ಮತ್ತು ಮನಸ್ಸು ಪರಿಪೂರ್ಣತೆ ಕಾಣುವ ದಿನ ಇದಾಗಿದೆ.
ಶ್ರೀಕೃಷ್ಣನ ಆದೇಶದಂತೆ ಪಾಂಡವರು ಸೂರ್ಯನನ್ನು ಪ್ರಾರ್ಥಿಸಿ ದ್ರೌಪದಿ ಅಕ್ಷಯ ಪಾತ್ರೆಯನ್ನು ಪಡೆದ ದಿನವೇ ಈ ಅಕ್ಷಯ ತೃತೀಯ. ಚಾಮುಂಡೇಶ್ವರಿ ರಾಕ್ಷಸರನ್ನು ಸಂಹರಿಸಿದ್ದು, ವೇದವ್ಯಾಸರು ಗಣಪತಿಯೊಂದಿಗೆ ಮಹಾಭಾರತ ಬರೆಯಿಸಲು ಪ್ರಾರಂಭಿಸಿದ್ದು ಇದೇ ದಿನ. ಹೀಗಾಗಿ ಅಕ್ಷಯ ತೃತೀಯ ದಿನ ಶುಭಕಾರ್ಯ ಹಾಗೂ ದಾನಧರ್ಮ ಮಾಡಿದರೆ ಹೆಚ್ಚಿನ ಪ್ರತಿಫಲ ಸಿಗುತ್ತದೆ.
ಈ ಅಕ್ಷಯ ತೃತೀಯದಂದು ಚಿನ್ನಾಭರಣ, ರತ್ನಾಭರಣ, ಭೂಮಿ ಇತ್ಯಾದಿ ಖರೀದಿ ಹಾಗೂ ಆಸ್ತಿಯಲ್ಲಿ ಹೂಡಿಕೆಗೆ ಯೋಗ್ಯ. ಜನರು ಉಳಿತಾಯ ಮತ್ತು ಸಂಪತ್ತಿನ ಸದುಪಯೋಗ ಹಾಗೂ ಸಮೃದ್ಧಿಗಾಗಿ ಖರೀದಿ ಮತ್ತು ಹೂಡಿಕೆಗೆ ತೊಡಗುತ್ತಾರೆ. ಜೊತೆಗೆ ವಿವಾಹ, ಗೃಹಪ್ರವೇಶ ಕೂಡ ಮಾಡುತ್ತಾರೆ.
ಪ್ರತಿ ಬಾರಿ ಅಕ್ಷಯ ತೃತೀಯ ಸಂಭ್ರಮ ಚಿನ್ನ ಪ್ರಿಯರ ಸಡಗರವನ್ನು ಇಮ್ಮಡಿಗೊಳಿಸುತ್ತದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಹಿನ್ನೆಲೆಯಲ್ಲಿ ಚಿನ್ನಾಭರಣ ಮಳಿಗೆಗಳು ಸಹ ಅಕ್ಷಯ ತೃತೀಯ ದಿನದಂದು ಗ್ರಾಹಕರನ್ನು ಆಕರ್ಷಿಸಲು ತುದಿಗಾಲಲಿ ನಿಲ್ಲುತ್ತವೆ. ಈ ಸಂಭ್ರಮವನ್ನು ಹಲವಾರು ವಿಶೇಷ ಕೊಡುಗೆಗಳೊಂದಿಗೆ ಸ್ವಾಗತಿಸುತ್ತವೆ. ಆದರೆ ಇಂದಿನ ದಿನ ಕೊರೋನ ಬಂದು ಲಾಕ್ಡೌನ್ ಆದ್ದರಿಂದ ಆನ್ಲೈನ್ ಖರೀದಿಗೆ ಮಾತ್ರ ಅವಕಾಶವಿದೆ.
ಇನ್ನು ಸನಾತನ ಧರ್ಮದಲ್ಲಿರುವಂತಹ ಕೆಲವು ಮಹತ್ವಗಳೆಂದರೆ:-
1) ನಾಲ್ಕು ಯುಗಗಳಾದ ಸತ್ಯ, ತ್ರೇತಾ, ದ್ವಾಪರ ಮತ್ತು ಕಲಿಯುಗಗಳಲ್ಲಿ, ಸತ್ಯ ಅಥವಾ ಕೃತಯುಗ ಪ್ರಾರಂಭವಾಗಿದ್ದು ‘ಅಕ್ಷಯ ತೃತೀಯ’ ದಿನದಂದು.
2) ವೇದವ್ಯಾಸರು ಮಹಾಭಾರತವನ್ನು ರಚಿಸುವ ಸಂದರ್ಭದಲ್ಲಿ ಅವರಿಗೆ ಸಹಾಯಕನಾಗಿ ಗಣೇಶನು ನೆರವಾಗಿದ್ದು ‘ಅಕ್ಷಯ ತೃತೀಯ’ ದಿನದಂದು.
3) ಭಗೀರಥನ ಪ್ರಯತ್ನದಿಂದ ಗಂಗಾವತರಣವಾಗಿದ್ದು (ಶಿವನ ಜಟೆಯಿಂದ ಗಂಗೆ ಭೂಮಿಗೆ ಇಳಿದದ್ದು) ‘ಅಕ್ಷಯ ತೃತೀಯ’ ದಿನದಂದು.
4) ದಶಾವತಾರಗಳಲ್ಲಿ ಒಂದಾದ ‘ಪರಶುರಾಮಾವತಾರ’ ಪ್ರಾರಂಭವಾಗಿದ್ದು (ಹುಟ್ಟಿದ ದಿನ) ‘ಅಕ್ಷಯ ತೃತೀಯ’ ದಿನದಂದು.
5) ಸಂಪತ್ತಿನ ಒಡೆಯ ಮತ್ತು ಯಕ್ಷರ ರಾಜ ‘ಕುಬೇರ’ನಿಗೆ ನಿಧಿ/ಸಂಪತ್ತು ದೊರೆತದ್ದು ‘ಅಕ್ಷಯ ತೃತೀಯ’ ದಿನದಂದು.
6) ಕುಚೇಲನಿಗೆ ಗೆಳೆಯ ಶ್ರೀಕೃಷ್ಣನಿಂದ ಅನುಗ್ರಹ ಪ್ರಾಪ್ತಿಯಾಗಿದ್ದು ‘ಅಕ್ಷಯ ತೃತೀಯ’ ದಿನದಂದು.
7) ಅಮೃತ ಪ್ರಾಪ್ತಿಗಾಗಿ ದೇವತೆಗಳು ಮತ್ತು ರಾಕ್ಷಸರು ಸಮುದ್ರ ಮಂಥನ ಮಾಡುತ್ತಿದ್ದ ವೇಳೆ ಲಕ್ಷ್ಮೀ ಹುಟ್ಟಿದ್ದು ‘ಅಕ್ಷಯ ತೃತೀಯ’ ದಿನದಂದು.
8) ದುಶ್ಯಾಸನನು ದ್ರೌಪದಿಯ ವಸ್ತ್ರಾಪಹರಣ ಮಾಡುತ್ತಿದ್ದ ವೇಳೆ ಶ್ರೀಕೃಷ್ಣನು ಆಕೆಯ ಮಾನವನ್ನು (ಸೀರೆಯನ್ನು ನೀಡುವುದರ ಮೂಲಕ) ಕಾಪಾಡಿದ್ದು ‘ಅಕ್ಷಯ ತೃತೀಯ’ ದಿನದಂದು.
ಅಕ್ಷಯ ತೃತೀಯ ದಿನದ ಬಗ್ಗೆ ಇವಿಷ್ಟು ಪುರಾಣದ ಸಂಗತಿಗಳಾದರೆ, ನಾವಿರುವ ಕಲಿಯುಗದಲ್ಲಿ ಈ ಕೆಳಗಿನ ಸಂಗತಿಗಳು ಈ ರೀತಿ ಇವೆ:
1) ಆಂಧ್ರಪ್ರದೇಶದ ವಿಶಾಖಾಪಟ್ಟಣಂ ಬಳಿ ಇರುವ ಸಿಂಹಾದ್ರಿ ಅಥವಾ ಸಿಂಹಾಚಲಂ ದೇವಾಲಯದಲ್ಲಿ (ಹಿರಣ್ಯಕಶಿಪುವನ್ನು ಮಹಾವಿಷ್ಣುವು ‘ನರಸಿಂಹಾವತಾರ’ದಲ್ಲಿ ಸಂಹರಿಸಿದ ಸ್ಥಳ) ವರ್ಷದ 364 ದಿನಗಳ ಕಾಲವೂ ಮೂಲದೇವರಾದ ನರಸಿಂಹಸ್ವಾಮಿಯ ಮುಖವನ್ನು ಚಂದನದಿಂದ ಮರೆಮಾಡಿರುತ್ತಾರೆ. ಕಾರಣ ನರಸಿಂಹಸ್ವಾಮಿಯ ಅತಿ ಉಗ್ರಸ್ವರೂಪ ಮೂರ್ತಿಯನ್ನು ನೋಡಲಾಗುವುದಿಲ್ಲ. ಆದರೆ…. ‘ಅಕ್ಷಯ ತೃತೀಯ’ ದಿನದಂದು ಮಾತ್ರ ದೇವರ ಮುಖವನ್ನು ಚಂದನದಿಂದ ಮರೆಮಾಚದೇ ನೈಜ ದರ್ಶಕಕ್ಕೆ ಅವಕಾಶವಿರುತ್ತದೆ. ಹೀಗಾಗಿ ಅಂದು ಬಹುತೇಕ ಆಂಧ್ರಪ್ರದೇಶ ಮತ್ತು ಇನ್ನೀತರ ಭಾಗದ ಜನರು ಅಲ್ಲಿ ನೆರೆದಿರುತ್ತಾರೆ.
2) ‘ಅಕ್ಷಯ ತೃತೀಯ’ ದಿನದಂದು ತಮ್ಮ ಸಾಮರ್ಥ್ಯಾನುಸಾರ ಹೋಮವನ್ನು ನೇರವೇರಿಸಿದ್ದಲ್ಲಿ ಅಥವಾ ಸಾರ್ವಜನಿಕವಾಗಿ ಹೋಮ ಆಯೋಜಿಸಿದ ಸ್ಥಳದಲ್ಲಿ ಭಾಗವಹಿಸಿದರೆ “ಅಶ್ವಮೇಘ” ಯಾಗ ಮಾಡಿದ ಪುಣ್ಯಪ್ರಾಪ್ತಿಯಾಗುತ್ತದೆ.
3) ‘ಅಕ್ಷಯ ತೃತೀಯ’ ದಿನದಂದು ತಮ್ಮ ಶಕ್ತ್ಯಾನುಸಾರ ಯಾವುದೇ ಹೊಸ ವಸ್ತುಗಳನ್ನು ಖರೀದಿಸಬಹುದಾಗಿದೆ. (ಧನಿಕರು ಮತ್ತು ಅನುಕೂಲಸ್ಥರು ಚಿನ್ನವನ್ನು ಖರೀದಿಸಬಹುದು, ಆದರೆ ಕಡ್ಡಯವಲ್ಲ) ಏನೂ ಬೇಡವೆಂದರೂ ಅಡಿಗೆಗೆ ಬಳಸುವ ಉಪ್ಪಿನ ಪ್ಯಾಕೇಟನ್ನಾದರೂ ಖರೀದಿಸಿದರೆ ಚಿನ್ನವನ್ನು ಖರೀದಿಸಿದ ಫಲವೇ ಪ್ರಾಪ್ತಿಯಾಗುತ್ತದೆ.
4) ‘ಅಕ್ಷಯ ತೃತೀಯ’ ದಿನದ ಇಡೀ ದಿನದ ಪ್ರತಿಯೊಂದು ಘಳಿಗೆಯೂ ಶುಭ ಮುಹೂರ್ತದ್ದೇ ಆಗಿರುತ್ತದೆ. ಅಂದು ಮಾತ್ರ ಯಾವುದೇ ರಾಹುಕಾಲ, ಗುಳಿಕಕಾಲ ಅಥವಾ ಇನ್ಯಾವುದೇ ಅಶುಭಕಾಲದ ಮಹತ್ವ ಇರುವುದಿಲ್ಲ.
ಈ ಮೇಲ್ಕಂಡ ವಿಷಯಗಳು ‘ಅಕ್ಷಯ ತೃತೀಯ‘ ದಿನದ’ ಮಹತ್ವವನ್ನು ಪಡೆದುಕೊಂಡಿದೆ. ಅದು ಬಿಟ್ಟು ಕೇವಲ ಚಿನ್ನವನ್ನು ಖರೀದಿಸಿದರೇ ಮಾತ್ರ ‘ಅಕ್ಷಯ ತೃತೀಯ‘ ದಿನದ ಫಲಪ್ರಾಪ್ತಿ ಎಂದು ನಂಬುವುದು ಶುದ್ಧ ಮೂರ್ಖತನ.
ಎಸ್.ಎಸ್.ಎಲ್.ಸಿ ಪರೀಕ್ಷೆ ಮುಂದೂಡಿಕೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ