ಲಕ್ಷ್ಮೀನೃಸಿಂಹ ಮಹಾ ರಥೋತ್ಸವ ಸಂಕ್ಷೇಪ: ಇದ್ದಲ್ಲಿಂದಲೇ ಭಕ್ತಿ ಶ್ರದ್ಧೆ ಸಲ್ಲಿಸಿ
ಪ್ರಗತಿವಾಹಿನಿ ಸುದ್ದಿ; ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ವಿಶೇಷವಾಗಿ ನಡೆಸಲಾಗುತ್ತಿದ್ದ ಶ್ರೀಲಕ್ಷ್ಮೀನೃಸಿಂಹ ಜಯಂತಿ, ಮಹಾರಥೋತ್ಸವವನ್ನು ಸಂಕ್ಷೇಪಗೊಳಿಸಲಾಗಿದ್ದು, ಭಕ್ತರು, ಶಿಷ್ಯರು ಇದ್ದಲ್ಲಿಂದಲೇ ಭಕ್ತಿ ಶ್ರದ್ಧೆ ಸಲ್ಲಿಸುವಂತೆ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಸೂಚಿಸಿದ್ದಾರೆ.
ಈ ಕುರಿತು ಸಂಸ್ಥಾನದ ಪ್ರಕಟನೆ ನೀಡಿ, ಕೋವಿಡ್-19 ಖಾಯಿಲೆ ಎರಡನೇ ಅಲೆ ವ್ಯಾಪಕವಾಗುತ್ತಿದೆ. ತೀವ್ರ ಪರಿಣಾಮ ಉಂಟಾಗುತ್ತಿದೆ. ಕಳೆದ ವರ್ಷಕ್ಕಿಂತಲೂ ತುಂಬಾ ಹಾನಿ ಈಗಾಗಲೇ ಆಗಿವೆ. ಈ ಕಾರಣದಿಂದ ಈ ಬಾರಿಯೂ ಕೂಡ ಶ್ರೀಲಕ್ಷ್ಮೀನೃಸಿಂಹ ದೇವರ ರಥೋತ್ಸವ ಸಂಕ್ಷೇಪದಲ್ಲಿ ಮಾಡಬೇಕು ಎಂದು ತೀರ್ಮಾನಿಸಲಾಗಿದೆ. ಇದಕ್ಕೆ ಎಲ್ಲ ಶಿಷ್ಯ ಭಕ್ತರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.
ಮೇ 24, 25, 26 ರಂದು ಮೂರು ದಿನಗಳ ಕಾಲ ಶ್ರೀದೇವರ ಜಯಂತಿ ನಡೆಯಬೇಕಿದೆ. 25ಕ್ಕೆ ಜಯಂತಿ ಉತ್ಸವ ಹಾಗೂ ಮಹಾರಥೋತ್ಸವ ಆಗಿತ್ತು. ಈ ಉತ್ಸವವನ್ನು ಮಠದಲ್ಲಿ ಸಂಕ್ಷಿಪ್ತವಾಗಿ ನಡೆಸಲಾಗುತ್ತದೆ. ಈ ಉತ್ಸವದ ಸಂಕ್ಷೇಪ ಎಂದರೆ ಮಹಾರಥೋತ್ಸವ ಇಲ್ಲ. ಮಠದ ಒಳಗಡೆಗೆ ಚಿಕ್ಕ ರಥದಲ್ಲಿ ದೇವರಿಗೆ ಉತ್ಸವ ಇರುತ್ತದೆ. ಅಭಿಷೇಕ, ಹವನ, ಪೂಜೆಗಳು ಉಳಿದ ವಿಧಿ ವಿಧಾನಗಳು ನಡೆಯುತ್ತವೆ ಎಂದು ವಿವರಿಸಿದ್ದಾರೆ.
ಲಕ್ಷ್ಮೀನೃಸಿಂಹ ದೇವರು ಅವತಾರ ಎತ್ತಿದ ಮೇ 25ರ ಸಾಯಂಕಾಲ ಶಿಷ್ಯ ಭಕ್ತರು ತಮ್ಮ ಮನೆ ದೇವರಿಗೆ ವಿಶೇಷ ದೀಪ ಬೆಳಗಿಸಿ ಸಲ್ಲಿಸಿ, ದೇವರಿಗೆ ಪಾನಕ ನೈವೇದ್ಯ ಮಾಡಬೇಕು. ಭಜನೆ ಪೂಜೆ ಇತ್ಯಾದಿ ಮಾಡಬೇಕು. ರಥೋತ್ಸವದ ಸಂದರ್ಭದಲ್ಲಿ ಕೃಷಿ ಜಯಂತಿ ನಡೆಯುತ್ತಿತ್ತು. ಕೃಷಿ ರಸ ಪ್ರಶ್ನೆ ಪ್ರೌಢ ಶಾಲಾ ಮಕ್ಕಳಿಗೆ ನಡೆಸಲಾಗುತ್ತಿತ್ತು. ಈ ಬಾರಿ ಆನ್ ಲೈನ್ ಮೂಲಕ ನಡೆಸಲಾಗುತ್ತದೆ. ಅದೇ ದಿನ ಸಂಜೆ ೫ರಿಂದ ಅಂತರ್ಜಾಲದಲ್ಲಿ ಹರಿಕೀರ್ತನೆ ಕೂಡ ನಡೆಯಲಿದೆ ಎಂದೂ ತಿಳಿಸಿದ್ದಾರೆ.
ರಥಗಾಣಿಕೆ ಕೊಡುವವರು ಮಠದ ಖಾತೆ ಕರ್ನಾಟಕ ಬ್ಯಾಂಕ್‌ನ ಕೆಎಆರ್‌ಬಿ 0000707, 7072500102697601 ಜಮಾ ಮಾಡಬಹುದು. ಅಂಚೆ ವಿಳಾಸ ನೀಡಿದರೆ ಅವರಿಗೆ ಪ್ರಸಾದ ಕಳಿಸುವ ವ್ಯವಸ್ಥೆ ಇರುತ್ತದೆ. ಕಳೆದ ಬಾರಿಯೂ ಜಯಂತಿ ಸಂಕ್ಷೇಪ ಈ ಬಾರಿಯೂ ಸಂಕ್ಷೇಪ ಆಗುತ್ತಿದೆ. ಮುಂದಿನ ವರ್ಷ ಕಾರ್ತೀಕ ಮಾಸದಲ್ಲಿ ರೋಗ ಕಡಿಮೆ ಆದರೆ, ವಿಶೇಷ ರಥೋತ್ಸವ ಮಾಡುವ ಚಿಂತನೆ ಇದೆ. ಈ ಬಗ್ಗೆ ಇನ್ನೊಮ್ಮೆ ಸಂದೇಶ ನೀಡಲಾಗುತ್ತದೆ ಎಂದಿದ್ದಾರೆ.
ಈ ಸಂದರ್ಭದಲ್ಲಿ ಕಳಕಳಿ ಎಂದರೆ ಕೋವಿಡ್ ನಿಯಮ ಪಾಲನೆ ಮಾಡಬೇಕು, ಆರೋಗ್ಯ ಸಂರಕ್ಷಣೆಗೆ ನಿಯಮ ಪಾಲನೆ ವಹಿಸಬೇಕು. ದೇವರ, ಜಪ ಧ್ಯಾನದಿಂದ ಆಧ್ಯತ್ಮಿಕ ಶಕ್ತಿ ಬರುತ್ತದೆ. ಇದರಿಂದ ರೋಗ ಬರದಂತೆ ತಡೆಯಬಹುದು. ಬಂದರೂ ಎದುರಿಸಹುದು. ದೇವರ ಮಂತ್ರ, ನಾಮ ಸತತ ಜಪ ಮಾಡಬೇಕು ಎಂದ ಶ್ರೀಗಳು, ಉತ್ತರ ಕನ್ನಡ ಜಿಲ್ಲೆ ಕೋವಿಡ್ ಹರಡುವಿಕೆಯಲ್ಲಿ ಮುಂಚೂಣಿಯಲ್ಲಿದೆ. ಇತಿಹಾಸದಲ್ಲಿ ಹಿಂದೆಂದೂ ಹೀಗಾಗದಂತೆ ಇಷ್ಟು ಸಾವಾಗಿದೆ. ನಾವೆಲ್ಲ ಎಷ್ಟು ಜಾಗೃತರಾದರೂ ಕಡಿಮೆಯೇ. ಮನೆ ಮನೆಗಳಲ್ಲಿ ದೇವರ ಧ್ಯಾನ ಮಾಡಬೇಕು. ಶಿವ, ವಿಷ್ಣು, ಅಮ್ಮನವರ ಯಾವುದಾದರೂ ಒಂದು ದೇವರ ಜಪ ಸತತ ಮಾಡಿ, ಉದಾಸೀನ ಮಾಡಬೇಡಿ. ರೋಗ ಬಂದ ಬಳಿಕ ಔಷಧ ಮಾಡುವದಕ್ಕಿಂತ, ಮೊದಲೇ ಎಚ್ಚರಿಕೆ ಪಡೆಯಬೇಕು. ಅದೇ ನಿಜವಾದ ಬುದ್ದಿವಂತಿಕೆ ಎಂದೂ ಮನವಿ ಮಾಡಿದ್ದಾರೆ.
ವೈಟ್ ಫಂಗಸ್ ಎಂಬ ಮತ್ತೊಂದು ಅಪಾಯಕಾರಿ ಸೋಂಕು ಪತ್ತೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ