ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆವರಣದಲ್ಲಿ ಪ್ರತಿ ನಿಮಿಷಕ್ಕೆ 700 ಲೀಟರ್ ಆಮ್ಲಜನಕವನ್ನು ಉತ್ಪಾದಿಸುವ ಆಧುನಿಕ ತಂತ್ರಜ್ಞಾನವನ್ನು ಹೊಂದಿದೆ ಘಟಕಕ್ಕೆ ಇಂದು ಶಾಸಕರುಗಳಾದ ಅಭಯ ಪಾಟೀಲ ಹಾಗೂ ಅನೀಲ ಬೆನಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಎಲ್&ಟಿ ಕಂಪನಿಯ ವತಿಯಿಂದ ನಿರ್ಮಾಣಗೊಳ್ಳುವ ಈ ಘಟಕವು ಸುಮಾರು 60 ಲಕ್ಷ ರೂಪಾಯಿಗಳ ಅಂದಾಜು ಮೊತ್ತವಾಗಿದ್ದು, 50 ಚದರ ಅಡಿಯ ಜಾಗದಲ್ಲಿ ಈ ಯಂತ್ರವನ್ನು ಅಳವಡಿಸಲಾಗುವುದು. ಇದರಿಂದ ಸುಮಾರು 50 ರಿಂದ 60 ಹಾಸಿಗೆಗಳಿಗೆ ನಿರಂತರ ಆಮ್ಲಜನಕ ಸರಬರಾಜು ಮಾಡಬಹುದಾಗಿದೆ ಎಂದು ಶಾಸಕ ಅಭಯ ಪಾಟೀಲ ತಿಳಿಸುತ್ತ ಜೂನ್ 10ರ ವೇಳೆಗೆ ಕಾಮಗಾರಿಯನ್ನು ಸಂಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆಯನ್ನು ನೀಡಿದ್ದಾರೆ.
ಎಲ್&ಟಿ ಎಂಬ ಖಾಸಗಿ ಕಂಪನಿಯ ವತಿಯಿಂದ ಉಚಿತವಾಗಿ ಬೆಳಗಾವಿಯ ಸರಕಾರಿ ಆಸ್ಪತ್ರೆಯಲ್ಲಿ ನಿಮಾರ್ಣಗೊಳ್ಳುತ್ತಿರುವ ಕರ್ನಾಟಕ ರಾಜ್ಯದಲ್ಲಿನ ಪ್ರಥಮ ಘಟಕ ಇದಾಗಿದ್ದು, ಕೇವಲ 20 ದಿನಗಳಲ್ಲಿಯೇ ಕಾಮಗಾರಿ ಸಂಪೂರ್ಣಗೊಂಡು ಕಾರ್ಯಾರಂಭ ಮಾಡುವುದು ಕೂಡಾ ಮತ್ತೊಂದು ವಿಶೇಷವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ