ರಮೇಶ ಜಾರಕಿಹೊಳಿ ಅವರ ಮನವೊಲಿಸುವ ಯತ್ನ ನಡೆಸಲಾಗುತ್ತದೆಯೋ ಅಥವಾ ಅವರು ಶಾಸಕಸ್ಥಾನಕ್ಕೆ ರಾಜಿನಾಮೆ ನೀಡುವ ಹಂತಕ್ಕೆ ತಲುಪುತ್ತದೆಯೋ ಕಾದು ನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮಾಜಿ ಸಚಿವ ರಮೇಶ ಜಾರಕಿಹೊಳಿ ಇದೇ ತಿಂಗಳು 23ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡುವ ಸಾಧ್ಯತೆ ಇದೆ.
ತಮ್ಮ ಆಪ್ತರ ಬಳಿ ಅವರು ಈ ವಿಷಯವನ್ನು ತಿಳಿಸಿದ್ದು, ತಮ್ಮ ಮನದಾಳದ ನೋವನ್ನು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ಮುಂಬೈಯಿಂದ ನೇರವಾಗಿ ಬೆಂಗಳೂರಿಗೆ ಬಂದು ರಾಜಿನಾಮೆ ನೀಡಲಿರುವುದಾಗಿ ಅವರು ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಸಿಡಿ ಪ್ರಕರಣ ನಡೆದು 5 ತಿಂಗಳಾದರೂ ತಮ್ಮನ್ನು ಅದರಿಂದ ಪಾರು ಮಾಡಲು ಬಿಜೆಪಿ ನಾಯಕರು ಆಸಕ್ತಿ ತೋರಿಸುತ್ತಿಲ್ಲ. ಅನಗತ್ಯವಾಗಿ ಪ್ರಕರಣವನ್ನು ಎಳೆಯಲಾಗುತ್ತಿದೆ ಎನ್ನುವುದು ರಮೇಶ ಜಾರಕಿಹೊಳಿ ನೋವು.
ಸರಕಾರ ನಮ್ಮದಿರುವಾಗ, ನಾವೇ ತಂದ ಸರಕಾರ ನಮಗೇ ಸಪೋರ್ಟ್ ಮಾಡುತ್ತಿಲ್ಲ. ಸಚಿವಸ್ಥಾನಕ್ಕೆ ರಾಜಿನಾಮೆ ನೀಡುವ ಸಂದರ್ಭದಲ್ಲಿ ಅತೀ ಶೀಘ್ರದಲ್ಲಿ ಪ್ರಕರಣದಿಂದ ಹೊರತಂದು ಮತ್ತೆ ಮಂತ್ರಿ ಮಾಡುವ ಆಶ್ವಾಸನೆ ನೀಡಲಾಗಿತ್ತು. ಆದರೆ ಈಗ ಬಿ ರಿಪೋರ್ಟ್ ಹಾಕಿಸಿ ಮಂತ್ರಿ ಮಾಡಲು ಮನಸ್ಸು ಮಾಡುತ್ತಿಲ್ಲ ಎನ್ನುವ ಅಳಲು ಅವರದ್ದೆನ್ನಲಾಗಿದೆ.
20 ಸಾವಿರ ಕೋಟಿ ರೂ. ವಿವಾದ
ಇದರ ಜೊತೆಗೆ ಎಚ್.ವಿಶ್ವನಾಥ ಎತ್ತಿರುವ 20 ಸಾವಿರ ಕೋಟಿ ರೂ. ನೀರಾವರಿ ಯೋಜನೆ ಟೆಂಡರ್ ವಿವಾದದ ಕುರಿತು ಸಹ ರಮೇಶ ಜಾರಕಿಹೊಳಿಗೆ ಅಸಮಾಧಾನವಿದೆ ಎನ್ನಲಾಗಿದೆ. ತಾವು ಜಲಸಂಪನ್ಮೂಲ ಸಚಿವರಾಗಿ ಮರಳಿ ಬರುವ ಮೊದಲೇ 20 ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಿ ಮುಗಿಸಲು ಯೋಚನೆ ರೂಪಿಸಲಾಗಿದೆ. ಅದು ಖರ್ಚಾಗುವವರೆಗೂ ತಮ್ಮನ್ನು ಸಚಿವಸ್ಥಾನದಿಂದ ಹೊರಗಿಡಲು ಸಂಚು ರೂಪಿಸಲಾಗಿದೆ ಎನ್ನುವುದು ಅವರ ಆರೋಪ.
ಜಲಸಂಪನ್ಮೂಲ ಇಲಾಖೆಗೆ ಆಯವ್ಯಯದಲ್ಲಿ ಮೀಸಲಿಟ್ಟಿರುವ ಹಣವನ್ನೆಲ್ಲ ಖರ್ಚು ಮಾಡಿದ ನಂತರ ನನ್ನನ್ನು ಮರಳಿ ಆ ಇಲಾಖೆಗೆ ಸಚಿವನನ್ನಾಗಿಸಿದರೆ ಏನು ಪ್ರಯೋಜನ? ಬಿಜೆಪಿಯ ಅನೇಕ ನಾಯಕರು ಈ ವಿಷಯದಲ್ಲಿ ತಂತ್ರ ರೂಪಿಸುತ್ತಿದ್ದಾರೆ ಎಂದು ಅವರು ಆಪ್ತರ ಬಳಿ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
ರಮೇಶ ಜಾರಕಿಹೊಳಿ ಅವರ ಮನವೊಲಿಸುವ ಯತ್ನ ನಡೆಸಲಾಗುತ್ತದೆಯೋ ಅಥವಾ ಅವರು ಶಾಸಕಸ್ಥಾನಕ್ಕೆ ರಾಜಿನಾಮೆ ನೀಡುವ ಹಂತಕ್ಕೆ ತಲುಪುತ್ತದೆಯೋ ಕಾದು ನೋಡಬೇಕಿದೆ.
ರಮೇಶ ಜಾರಕಿಹೊಳಿ ಜೊತೆಗೆ ಸಹೋದರ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮತ್ತು ಶಾಸಕ ಮಹೇಶ ಕುಮಟಳ್ಳಿ ಮೊದಲಾದವರು ಸಹ ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ.
ಶಾಸಕ ಸ್ಥಾನಕ್ಕೂ ರಮೇಶ ಜಾರಕಿಹೊಳಿ ರಾಜಿನಾಮೆ?
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ