ಬಿಜೆಪಿ ಅಂಗಳದಲ್ಲಿ ಹೀಗೊಂದು ಸುದ್ದಿ…. 3 ತಲೆ ಉರುಳಿಸಲು ನಿರ್ಧಾರ?

ಮೂರೂ ತಲೆಗಳನ್ನು ಬದಲಿಸಬೇಕೆನ್ನುವ ತೀರ್ಮಾನಕ್ಕೆ ಪಕ್ಷ ಬಂದಿದೆಯಾ?

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಲಿದೆ ಎನ್ನುವ ವಿಷಯ ಕಳೆದ ಹಲವು ತಿಂಗಳುಗಳಿಂದಲೇ ಸುದ್ದಾಗಿಯುತ್ತಿದೆ. ಆದರೆ ಬಿಜೆಪಿ ಹೈಕಮಾಂಡ್ ಈ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ.

ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಬಂದು, ಅದೆಲ್ಲ ವದಂತಿ, ಅಂತಹ ಪ್ರಸ್ತಾವನೆಯೇ ಇಲ್ಲ ಎಂದು ಹೇಳಿ ಹೊದ ನಂತರವೂ ಸುದ್ದಿ ನಿಂತಿಲ್ಲ. ಪಕ್ಷದೊಳಗಿನ ಶಾಸಕರೇ ಮತ್ತಷ್ಟು ರೆಕ್ಕೆ ಪುಕ್ಕ ಹಚ್ಚಿ ಸುದ್ದಿ ಹರಿಬಿಡುತ್ತಿದ್ದಾರೆ.

ಎರಡು ಕಾರಣಗಳಿಗಾಗಿ ಈ ಸುದ್ದಿ ತೆರೆ ಕಾಣುತ್ತಿಲ್ಲ. ಮೊದಲನೆಯದಾಗಿ, ಆ ರೀತಿ ಬಹಿರಂಗವಾಗಿ ಪಕ್ಷದ ವಿರುದ್ಧ, ಮುಖ್ಯಮಂತ್ರಿಗಳ ವಿರುದ್ಧ ಮಾತನಾಡುವವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು, ಎರಡನೆಯದಾಗಿ ಅಷ್ಟಿಷ್ಟು ದಿನಕ್ಕೆ ರಾಜ್ಯದಿಂದ ಒಬ್ಬೊಬ್ಬರನ್ನು ದೆಹಲಿ ಅಂಗಳಕ್ಕೆ ಕರೆಸಿಕೊಳ್ಳುತ್ತಿರುವುದು.

ವದಂತಿ (ಆಗಿದ್ದರೆ)ಗೆ ತೆರೆ ಎಳೆಯಬೇಕೆನ್ನುವ ಮನಸ್ಸಿದ್ದರೆ ಹೈಕಮಾಂಡ್ ಗೆ ನಿಮಿಷದ ಕೆಲಸವಾಗಿತ್ತು. ಆದರೆ ಹೈಕಮಾಂಡ್ ತೆರೆ ಎಳೆಯುವ ಕೆಲಸ ಮಾಡುತ್ತಿಲ್ಲ. ಅಂದರೆ, ಅದನ್ನು ನಿರ್ಲಕ್ಷಿಸಿರಬೇಕು, ಇಲ್ಲವೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರೋಧಿ ಬಣವನ್ನು ಜೀವಂತವಾಗಿಡುವುದು ಹೈಕಮಾಂಡ್ ಗೂ ಬೇಕಿರಬೇಕು.

ಎರಡರಲ್ಲಿ ಯಾವುದೇ ಆದರೂ ಶಿಸ್ತಿನ ಪಕ್ಷವೆಂದು ಕರೆಸಿಕೊಳ್ಳುವ ಬಿಜೆಪಿಗೆ ಶೋಭೆ ತರುವ ರೀತಿಯಂತೂ ಅಲ್ಲ. ಬದಲಾವಣೆ ಮಾಡಬೇಕಿದ್ದರೆ ಮಾಡಿಬಿಡಬೇಕು, ಇಲ್ಲವೆಂದಾದಲ್ಲಿ ಬೀದಿ ಬೀದಿಯಲ್ಲಿ ಹಲುಬುವವರ ಬಾಯಿಗೆ ಬೀಗ ಜಡಿಯಬೇಕು.

ಬಸನಗೌಡ ಪಾಟೀಲ ಯತ್ನಾಳ, ಸಿ.ಪಿ.ಯೋಗೀಶ್ವರ ಮತ್ತು ಎಚ್.ವಿಶ್ವನಾಥ ಬಾಯಿಗೆ ಬೀಗಹಾಗುವ ಕೆಲಸವನ್ನು ಮಾಡದಿರುವುದು ಬಿಜೆಪಿ ಹೈಕಮಾಂಡ್ ಸ್ಟ್ರ್ಯಾಟಜಿ ಎಂದು ಭಾವಿಸುವುದಾದಲ್ಲಿ ಹೈಕಮಾಂಡ್ ಯಡಿಯೂರಪ್ಪ ವಿರುದ್ಧ ಅಷ್ಟು ವೀಕ್ ಆಗಿದೆ ಎಂದೇ ತಿಳಿದುಕೊಳ್ಳಬೇಕು.

3 ತಲೆಗಳನ್ನು ಬದಲಾಯಿಸಲಿದೆಯಂತೆ!

ಈಗ ಬಿಜೆಪಿ ಅಂಗಳದಲ್ಲಿ ಹರಿದಾಡುತ್ತಿರುವ ಸುದ್ದಿ ಎಷ್ಟರಮಟ್ಟಿಗೆ ನಿಜ ಎನ್ನುವುದು ವಾರದೊಳಗೆ ಗೊತ್ತಾಗಲಿದೆ. ಕರ್ನಾಟಕದಲ್ಲಿ ಮೂರು ತಲೆಗಳನ್ನು ಬದಲಾಯಿಸುವ ನಿರ್ಣಯಕ್ಕೆ ಹೈಕಮಾಂಡ್ ಬಂದಿದೆಯಂತೆ. ಅದರಲ್ಲಿ ರಾಜ್ಯಪಾಲರ ಬದಲಾವಣೆಯಾಗಿದೆ. ಇನ್ನುಳಿದಿರುವುದು ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ.

ಮಂಗಳವಾರ ಸಚಿವ ಮುರುಗೇಶ ನಿರಾಣಿ ಅವರನ್ನು ದೆಹಲಿಗೆ ಕರೆಸಿಕೊಂಡಾಗ ಇಂತಹ ಸುದ್ದಿಗೆ ಮತ್ತಷ್ಟು ರೆಕ್ಕೆ ಪುಕ್ಕ ಮೂಡಿದೆ. ಉತ್ತರ ಕರ್ನಾಟಕದ ಲಿಂಗಾಯತ ನಾಯಕರೊಬ್ಬರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂಡ್ರಿಸಲಾಗುತ್ತದೆ ಎನ್ನುವ ಸುದ್ದಿಗೆ ಬಲ ಬಂದಿದೆ.

ಹಾಗೆಯೇ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲು ಅವರ ಬದಲಿಗೆ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಗಟ್ಟಿಗರೊಬ್ಬರನ್ನು ಕೂಡ್ರಿಸುವ ನಿರ್ಧಾರಕ್ಕೆ ಹೈಕಮಾಂಡ್ ಬಂದಿದೆಯಂತೆ.

ಏನೇ ಆದರೂ ಬಿಜೆಪಿಯಂತ ವಿಶ್ವದ ಅತೀ ದೊಡ್ಡ ಪಕ್ಷ ಈ ರೀತಿ ಬೀದಿ ಹಾಸ್ಯಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತಿರುವುದು ವಿಚಿತ್ರವೇ ಸರಿ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಕೆಲಸ ಮಾಡಲು ಬಿಡಬೇಕು, ಇಲ್ಲವೇ ಬದಲಿಸಿ ಬೇರೊಬ್ಬರಿಗೆ ಅಧಿಕಾರ ಕೊಡಬೇಕು. ಈ ರೀತಿ ಅಧಿಕಾರ ಪೂರ್ತಿ ಖುರ್ಚಿ ಅಲುಗಾಡದಂತೆ ನೋಡಿಕೊಳ್ಳುವುದರಲ್ಲೇ ಕಳೆಯುವಂತಾದರೆ ಅದ್ಯಾವ ಆಡಳಿತ ಎನ್ನಬೇಕು?

ರಾಜ್ಯ ರಾಜಕೀಯದಲ್ಲಿ ಮಹತ್ವದ ವಿದ್ಯಮಾನ

ಕರ್ನಾಟಕಕ್ಕೆ ನೂತನ ರಾಜ್ಯಪಾಲರ ನೇಮಕ

ನಾಳೆಯೇ ಕೇಂದ್ರ ಸಂಪುಟ ವಿಸ್ತರಣೆ: ಕರ್ನಾಟಕದಿಂದ ಮೂವರಿಗೆ ಸ್ಥಾನ ಸಾಧ್ಯತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button