ಆರೋಗ್ಯ ಸರಿ ಇರುವವರೆಗೂ ಈವರೆಗೆ ನಡೆದುಕೊಂಡು ಬಂದ ರಾಜಕೀಯ ದಾರಿಯಲ್ಲೇ ಮುಂದುವರಿಯುತ್ತೇನೆ
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ನಾನು ನಾಸ್ತಿಕನಲ್ಲ, ಆಸ್ತಿಕ. ದೇವರ ಬಗ್ಗೆ ನಂಬಿಕೆ ಇದೆ, ಸ್ವಾಮಿಜಿಗಳ ಬಗ್ಗೆ ಗೌರವ ಇದೆ ಎಂದು ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಅಲ್ಲದೇ ಕೇಂದ್ರ ರಾಜಕಾರಣಕ್ಕೆ ಹೋಗುವ ಇಷ್ಟವಿಲ್ಲ, ರಾಜ್ಯ ರಾಜಕಾರಣದಲ್ಲೇ ಮುಂದುವರಿಯುತ್ತೇನೆ ಎಂದೂ ತಿಳಿಸಿದ್ದಾರೆ.
ಭಾನುವಾರ ಸಂಜೆ ವಿಶ್ವವಾಣಿ ಕ್ಲಬ್ ಹೌಸ್ ನಲ್ಲಿ ಅವರು ಮಾತನಾಡುತ್ತಿದ್ದರು. ಸುಮಾರು ಎರಡೂವರೆ ಗಂಟೆ ಸುದೀರ್ಘವಾಗಿ ತಾವು ನಡೆದುಬಂದ ದಾರಿಯನ್ನು ವಿವರಿಸಿದ ಅವರು ನಂತರ ಪ್ರಶ್ನೋತ್ತರಗಳಿಗೂ ಉತ್ತರಿಸಿದರು.
ತಾವು ಬಾಲ್ಯದಲ್ಲಿ ಎಮ್ಮೆಕಾಯುವ ಕೆಲಸ ಮಾಡಿದ್ದರಿಂದ ಹಿಡಿದು ಮುಖ್ಯಮಂತ್ರಿ ಆಗುವವರೆಗಿನ ಎಲ್ಲ ವಿವರವನ್ನೂ ಅವರು ಬಿಚ್ಚಿಟ್ಟರು.
ನಿಮ್ಮ ಆತ್ಮಕ್ಕೆ ತೃಪ್ತಿಯಾಗುವಂತೆ ಕೆಲಸ ಮಾಡುವುದೇ ಆಸ್ತಿಕತೆ, ಇನ್ನೊಬ್ಬರಿಗೆ ಸಹಾಯ ಮಾಡುವುದೇ ಆಸ್ತಿಕತೆ ಎಂದು ನಾನು ನಂಬಿದ್ದೇನೆ ಎಂದು ಅವರು ಹೇಳಿದರು.
ನಾನು ಗುಡಿಗೆ ಹೋಗುತ್ತೇನೆ. ಪ್ರಸಾದ ಸ್ವೀಕಾರ ಮಾಡುತ್ತೇನೆ. ದೇವರ ಬಗ್ಗೆ ನಂಬಿಕೆ ಇದೆ, ಸ್ವಾಮಿಜಿಗಳ ಬಗ್ಗೆ ಗೌರವ ಇದೆ. ನನ್ನನ್ನು ಅನೇಕರು ದುರಹಂಕಾರಿ ಎನ್ನುತ್ತಾರೆ. ನೇರವಾಗಿ ಮಾತನಾಡುವವರನ್ನು, ಇದ್ದುದನ್ನು ಇದ್ದಹಾಗೆ ಮಾತನಾಡುವವರನ್ನು ದುರಹಂಕಾರಿ ಎನ್ನುತ್ತಾರೆ ಎಂದು ವಿಷಾದಿಸಿದರು.
ನಾನು ಮೌಢ್ಯ, ಕಂದಾಚಾರಗಳಿಗೆ ವಿರೋಧಿ. ಹಾಗಾಗಿ ಮೌಢ್ಯವಿರೋಧಿ ಕಾನೂನು ಜಾರಿಗೆ ತಂದಿದ್ದೇನೆ. ಸಂವಿಧಾನದಲ್ಲಿ ನನಗೆ ನಂಬಿಕೆ ಇದೆ. ಸಂವಿಧಾನದ ಪ್ರಕಾರ ಕೆಲಸ ಮಾಡಬೇಕೆನ್ನುವವನು ನಾನು ಎಂದೂ ಅವರು ಹೇಳಿದರು.
ಕೋಮುವಾವದದ ಜೊತೆ ಎಂದಿಗೂ ನನ್ನ ರಾಜಿ ಇಲ್ಲ. ಧರ್ಮ ಒಡೆಯುವವರ ಜೊತೆ ರಾಜಿ ಇಲ್ಲ. ಧರ್ಮ ಸಹಿಷ್ಣುತೆ ಇರಬೇಕು. ನಮ್ಮ ಧರ್ಮದ ಬಗ್ಗೆ ನಂಬಿಕೆ, ಪರ ಧರ್ಮದ ಬಗ್ಗೆ ಗೌರವ ಇರಬೇಕು. ಇದರಲ್ಲಿ ಯಾವುದೇ ರಾಜಿ ಇಲ್ಲ. ಅಧಿಕಾರಕ್ಕಾಗಿ ಸಿದ್ದಾಂತ ಮತ್ತು ನಂಬಿಕೆ ಬದಲಾಯಿಸುವುದಿಲ್ಲ. ಈವರೆಗೆ ನಡೆದುಕೊಂಡು ಬಂದ ರಾಜಕೀಯ ದಾರಿಯಲ್ಲೇ ಮುಂದುವರಿಯುತ್ತೇನೆ ಎಂದರು.
ಆರೋಗ್ಯ ಸರಿ ಇರುವವರೆಗೂ ರಾಜಕೀಯದಲ್ಲಿ ಮುಂದುವರಿಯುತ್ತೇನೆ. ಇದೇ ದಾರಿಯಲ್ಲಿ ಮುಂದುವರಿಯುತ್ತೇನೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಮತ್ತೆ ಅಧಿಕಾರಕ್ಕೆ ಬಂದರೆ ಅವಕಾಶ ವಂಚಿತರಾದವರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಘೋಷಿಸಿದರು.
ಕೇಂದ್ರ ರಾಜಕಾರಣಕ್ಕೆ ಹೋಗುವ ಮನಸ್ಸಿಲ್ಲ, ರಾಜ್ಯ ರಾಜಕಾರಣದಲ್ಲೇ ಮುಂದುವರಿಯುತ್ತೇನೆ. ಬಾದಾಮಿ ಕ್ಷೇತ್ರದಿಂದಲೇ ಮುಂದೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು.
ದೇಶದ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ; ಪ್ರಧಾನಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ