Latest

ಅಪರಾಧ ಶೋಧ ಕಾರ್ಯದಲ್ಲಿ ಹೊಸ ಯುಗ; ಪೊಲೀಸ್ ಇಲಾಖೆಗೆ ತಿರುವು ನೀಡುವ ದಿನ

ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕರ್ನಾಟಕ ಪೊಲೀಸ್  ಅಪರಾಧ ಶೋಧ ಕಾರ್ಯದಲ್ಲಿ ಹೊಸ ಯುಗ ಆರಂಭವಾಗಲಿದೆ. ಇದುವರೆಗೆ ಅಪರಾಧ ತಡೆ ಮತ್ತು ನಿಯಂತ್ರಣದಲ್ಲಿ ಮಾಡಿದ್ದೇವೆ.  ಇನ್ನು ಮುಂದೆ ಅಪರಾಧ ಶೋಧ ಕಾರ್ಯದಲ್ಲಿ ಯಶಸ್ವಿಯಾಗುತ್ತೇವೆ.
ಇವು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಅವರ ಆತ್ಮವಿಶ್ವಾಸದ ನುಡಿಗಳು.
 ಮಂಗಳವಾರ ಬೆಂಗಳೂರಿನ ವಿಧಾನಸೌಧ ಮಹಾ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗಿದ್ದ ಪೊಲೀಸ್ ಇಲಾಖೆಯ ಸಬಲೀಕರಣಕ್ಕೆ ಹೊಸ ಯೋಜನೆಗಳ ಸಮರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಈ ವಿಶ್ವಾಸದ ನುಡಿಗಳನ್ನು ಆಡಿದರು.
 ಪೊಲೀಸ್ ಇಲಾಖೆಗೆ ಇದು ತಿರುವು ನೀಡುವ ಸುದಿನ.‌ ಕಳೆದ ಎರಡು ವರ್ಷಗಳಿಂದ ಅಪರಾಧ ನಿಗ್ರಹ ಮಾಡಿದ್ದೇವೆ. ಆದರೆ ಇನ್ನು ಮುಂದೆ ಅಪರಾಧ ಶೋಧ ಕಾರ್ಯವನ್ನು ತ್ವರಿತವಾಗಿ ಮಾಡುವ ಮೂಲಕ ಯಶಸ್ವಿಯಾಗುತ್ತೇವೆ ಎಂದು ಬೊಮ್ಮಾಯಿ ಹೇಳಿದರು.
 ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕೃತ್ಯ ಸ್ಥಳ ಪರಿಶೀಲನಾ ಅಧಿಕಾರಿ’ ಹುದ್ದೆಯನ್ನು ಸೃಷ್ಟಿ ಮಾಡಲಾಗಿದೆ. ಇವರಿಗೆ ಅತ್ಯಾಧುನಿಕ ವಿಧಿವಿಜ್ಞಾನ ಪ್ರಯೋಗಾಲಯ ದಲ್ಲಿ ತರಬೇತಿ ನೀಡಲಾಗುವುದು. ಕೃತ್ಯ ನಡೆದ ಸ್ಥಳಕ್ಕೆ ಈ ಅಧಿಕಾರಿಗಳು ಭೇಟಿ ನೀಡಿ ಸಾಕ್ಷಾಧಾರಗಳನ್ನು ಸಂರಕ್ಷಣೆ ಮಾಡಲಿದ್ದಾರೆ. ವಿದೇಶದಲ್ಲಿ ಈ ರೀತಿಯ ವ್ಯವಸ್ಥೆ ಜಾರಿಯಲ್ಲಿದೆ. ಅದೇ ಮಾದರಿಯ ಹುದ್ದೆಗಳನ್ನು ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಸೃಷ್ಟಿಸಲಾಗಿದೆ.  ಇದರೊಂದಿಗೆ ಕರ್ನಾಟಕದಲ್ಲಿ ಅಪರಾಧ ಶೋಧಕಾರ್ಯದಲ್ಲಿ ಹೊಸಯುಗ ಆರಂಭವಾಗಲಿದೆ. ಇದಕ್ಕಾಗಿ ಎಲ್ಲ ರೀತಿಯ ಸಹಕಾರ ನೀಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಬೊಮ್ಮಾಯಿ ಹೇಳಿದರು.
 ಕೃತ್ಯ ನಡೆದ ಸ್ಥಳದಲ್ಲಿನ ಸಾಕ್ಷಿ ಸಂಗ್ರಹ ಬಹಳ ಮುಖ್ಯ.  ಸಾಕ್ಷಿ ನಾಶವಾದರೆ ಅಪರಾಧ ಪತ್ತೆ ಕಠಿಣ.  ಆರಂಭದಲ್ಲಿ ಅತ್ಯಂತ ಹೇಯ ಕೃತ್ಯ ಮತ್ತು ದೊಡ್ಡ ಕೃತ್ಯಗಳಿಗೆ ಈ ವಿಶೇಷ ಅಧಿಕಾರಿಗಳನ್ನು ತನಿಖೆಗೆ ಬಳಕೆ ಮಾಡಿಕೊಳ್ಳುತ್ತೇವೆ.  ಮುಂದಿನ ದಿನಗಳಲ್ಲಿ ಹಂತಹಂತವಾಗಿ ಇತರೆ ಅಪರಾಧಗಳಿಗೆ ತರಬೇತಿ ನೀಡಿದ ಅಧಿಕಾರಿಗಳನ್ನು ನಿಯೋಜಿಸಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಈ ವಿಶೇಷ ಅಧಿಕಾರಿಗಳನ್ನು ನಿಯೋಜಿಸಲಾಗುವುದು  ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಪೊಲೀಸ್ ಮಕ್ಕಳಿಗಾಗಿ ವಿದ್ಯಾನಿಧಿ ಯೋಜನೆ-೨ ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗುವುದು. ಈ ಯೋಜನೆಯಡಿ ಮಕ್ಕಳಿಗೆ ವಿವಿಧ ಶಿಕ್ಷಣ ಪಡೆಯಲು ಶಿಷ್ಯವೇತನ ನೀಡಲಾಗುವುದು.  ಮುಖ್ಯಮಂತ್ರಿಗಳು ಈ ಯೋಜನೆಯನ್ನು ಜಾರಿ ಮಾಡುವ ಮೂಲಕ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ ಎಂದು ಬೊಮ್ಮಾಯಿ ಹೇಳಿದರು. 
ಪೊಲೀಸರ ಆರೋಗ್ಯ ರಕ್ಷಣೆ ಬಹಳ ಮುಖ್ಯ.  ಹೀಗಾಗಿ ಆರೋಗ್ಯ ಭಾಗ್ಯ ಯೋಜನೆಗೆ ಈಗ ಹೊಸ ರೂಪ ನೀಡಲಾಗಿದೆ. ಆಸ್ಪತ್ರೆಗಳಿಗೆ ನೀಡಬೇಕಾದ ಹಿಂದಿನ ಬಾಕಿಯನ್ನು ತೀರಿಸಿ ಈ ಯೋಜನೆ ಬಜೆಟ್ಟನ್ನು ಡಬಲ್ ಮಾಡಲಾಗಿದೆ ಎಂದು ಬೊಮ್ಮಾಯಿ ಹರ್ಷವ್ಯಕ್ತಪಡಿಸಿದರು.
 ಪೊಲೀಸ್ ಇಲಾಖೆಗೆ 50 ಹೊಸ ಬಸ್ ಮತ್ತು ಮೋಟರ್ ಸೈಕಲ್ ಗಳನ್ನು ಇದೇ ಸಂದರ್ಭದಲ್ಲಿ ಸಮರ್ಪಿಸಲಾಯಿತು.
 ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸೂಚನೆ ಮೇರೆಗೆ ದೇಶದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕೃತ್ಯ ಸ್ಥಳ ಪರಿಶೀಲನೆ ಅಧಿಕಾರಿಗಳ ಹುದ್ದೆ ಸೃಷ್ಟಿ ಮಾಡಲಾಗಿದೆ. ದೇಶದ ಎಲ್ಲ ಪೊಲೀಸ್ ಮಹಾನಿರ್ದೇಶಕರ ಸಭೆಯಲ್ಲಿ ಅಮಿತ್ ಶಾ ಈ ರೀತಿಯ ಅಧಿಕಾರಿಗಳ ನೇಮಕದ ಸಲಹೆ ನೀಡಿದ್ದರು. ಅವರ ಕನಸು ಮತ್ತು ಇಚ್ಛೆಯಂತೆ ಈ ಹುದ್ದೆಯನ್ನು ಸೃಷ್ಟಿಸಲಾಗಿದೆ.
– ಬಸವರಾಜ ಬೊಮ್ಮಾಯಿ, ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರು

 

 ಅಪರಾಧ ಪತ್ತೆಗೆ ಆಧುನಿಕ ತಂತ್ರಜ್ಞಾನ ಬಳಸಿ

ಆಧುನಿಕ ತಂತ್ರಜ್ಞಾನವನ್ನು ದುರ್ಬಳಕೆ ಮಾಡಿಕೊಂಡು ಎಸಗಲಾಗುತ್ತಿರುವ ಆರ್ಥಿಕ ಅಪರಾಧ ಹಾಗೂ ಸೈಬರ್ ಕ್ರೈಮ್ ನಿಯಂತ್ರಣ ಮಾಡುವಂತೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಪೊಲೀಸ್ ಅಧಿಕಾರಿಗಳಿಗೆ ಕರೆ ನೀಡಿದರು.
ಮಂಗಳವಾರ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಅಗ್ನಿಶಾಮಕ, ಗೃಹ, ಪೌರ ರಕ್ಷಕ ದಳ ಹಾಗೂ ಎಸ್ ಡಿ ಆರ್ ಎಫ್ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
 ಇತ್ತೀಚಿಗೆ ಅಪರಾಧಗಳ ಸ್ವರೂಪ ಬದಲಾಗುತ್ತಿದೆ. ತಂತ್ರಜ್ಞಾನ ಬದಲಾದಂತೆ ಅದನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ.  ಆ ಮೂಲಕ ಆರ್ಥಿಕ ಅಪರಾಧಗಳು ಹೆಚ್ಚಾಗುತ್ತಿವೆ. ಇವುಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಹೊಸ ತಂತ್ರಜ್ಞಾನವನ್ನು ಮಾಡಿಕೊಳ್ಳಬೇಕು. ಈ ತಂತ್ರಜ್ಞಾನ ಬಳಕೆಗೆ ಸಂಬಂಧಪಟ್ಟಂತೆ ರೂಪಿಸಲಾಗಿರುವ ಯೋಜನೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಯನ್ನು ನೀಡಿದ್ದಾರೆ ಎಂದು ಬೊಮ್ಮಾಯಿ  ಹರ್ಷ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಅಗ್ನಿಶಾಮಕ ಇಲಾಖೆಯ ಕಾರ್ಯಗಳನ್ನು ವಿಶೇಷ ಅನುದಾನದ ಅಡಿ ರಾಜ್ಯದಲ್ಲಿ ಕೈಗೆತ್ತಿಕೊಳ್ಳಲಾಗಿದೆ.  ತುರ್ತು ಪರಿಸ್ಥಿತಿ ಮತ್ತು ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಯಂತ್ರೋಪಕರಣ ಕರಿದಿಗೆ ವಿಪತ್ತು ನಿರ್ವಹಣೆ ಇಲಾಖೆಗೆ 20 ಕೋಟಿ ರೂಪಾಯಿಗಳನ್ನು ನೀಡಲಾಗಿದೆ.‌ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಿಧಿವಿಜ್ಞಾನ ಪ್ರಯೋಗಾಲಯ ಗಳನ್ನು ಸ್ಥಾಪಿಸುವ ಮೂಲಕ ಅಪರಾಧ ಪತ್ತೆ ಕಾರ್ಯವನ್ನು ಚುರುಕುಗೊಳಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.
ಕಳೆದ ಕೆಲವರ್ಷಗಳಿಂದ ಅಗ್ನಿಶಾಮಕ ಗೃಹ ಮತ್ತು ಪೌರ ರಕ್ಷಕ ದಳದ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ವಿತರಣೆ ಮಾಡಲು ಸಾಧ್ಯವಾಗಿರಲಿಲ್ಲ. ಕೋವಿಡ್ ಹಿನ್ನೆಲೆಯಲ್ಲಿ ಕಳೆದ ವರ್ಷವೂ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಈ ವರ್ಷ 2015ರಿಂದ 2020 ರ ಅವಧಿಯ ವಾರ್ಷಿಕ ಪ್ರಶಸ್ತಿಗಳನ್ನು ವಿತರಣೆ ಮಾಡಲಾಯಿತು ಎಂದು ಅವರು ಹೇಳಿದರು.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪದಕ ಪ್ರದಾನ ಮಾಡಿದರು.
ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣೆ ಇಲಾಖೆ ಆಯೋಜಿಸಿದ್ದ ವಸ್ತುಪ್ರದರ್ಶನವನ್ನು ಅವರು ವೀಕ್ಷಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button