Latest

ಪ್ರವಾಸಕ್ಕೆಂದು ಬಂದು ಶಿರ್ಲೆ ಜಲಪಾತದ ಬಳಿ ನಾಪತ್ತೆಯಾಗಿದ್ದ 6 ಜನ ಪ್ರವಾಸಿಗರು ಸುರಕ್ಷಿತವಾಗಿ ಪತ್ತೆ

 ಪ್ರಗತಿವಾಹಿನಿ ಸುದ್ದಿ, ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಶಿರ್ಲೇ ಜಲಪಾತಕ್ಕೆ ಗುರುವಾರ ಮಧ್ಯಾಹ್ನ ಪ್ರವಾಸಕ್ಕೆಂದು ಬಂದು ನಾಪತ್ತೆಯಾಗಿದ್ದ ಆರು ಜನ ಯುವಕರು ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಪತ್ತೆಯಾಗಿದ್ದಾರೆ.
ಶಿರ್ಲೇ ಜಲಪಾತದ ಪಕ್ಕದ ಗ್ರಾಮ ಸುಣಜೋಗದ ರಾಘವೇಂದ್ರ ಭಟ್ಟ ಎಂಬುವವರ ತೋಟದಲ್ಲಿ ಗುರುವಾರ ರಾತ್ರಿ ಆಶ್ರಯ ಪಡೆದಿದ್ದರು ಎನ್ನಲಾಗಿದೆ. ಶುಕ್ರವಾರ ಬೆಳಿಗ್ಗೆ ಮನೆಯಿಂದ ತೋಟದ ಕಡೆಗೆ ತೆರಳಿದಾಗ ಚಳಿಯಲ್ಲಿ ನಡುಗುತ್ತಾ ನಿಂತಿದ್ದ ಆರು ಜನರನ್ನು ಕಂಡ ರಾಘವೇಂದ್ರ ಭಟ್, ಪೊಲೀಸ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಯವರಿಗೆ ಒಪ್ಪಿಸಿದ್ದಾರೆ.
ಪ್ರಾಥಮಿಕ ಮಾಹಿತಿ ಪ್ರಕಾರ ಆರು ಜನ ಯುವಕರು ಮೂರು ಸ್ಕೂಟರ್ ಮೇಲೆ ಶಿರ್ಲೇ ಪ್ರವಾಸಕ್ಕೆ ಬಂದಿದ್ದರು ಅರಣ್ಯ ಇಲಾಖೆಯ ಸಿಬ್ಬಂದಿಗಳು ಜಲಪಾತ ಮತ್ತು ಹಳ್ಳಕೊಳ್ಳಗಳಲ್ಲಿ ಭಾರೀ ಮಳೆಯಿಂದಾಗಿ ನೀರು ತುಂಬಿ ಹರಿಯುತ್ತಿದ್ದು, ಪ್ರವಾಸಿಗರು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹಲವಾರು ಜನ ಶಿರ್ಲೇ ಪ್ರವಾಸಿಗರನ್ನು ತಡೆದಿದ್ದರು.
ಕೆಲವು ಜನ ಪ್ರವಾಸಿಗರು ಮರಳಿ ತಮ್ಮ ಊರುಗಳಿಗೆ ತೆರಳಿದ್ದರು. ಇನ್ನು ಕೆಲವರು ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಕ್ಯಾತೆ ತೆಗೆದು ಶಿರ್ಲೇ ಜಲಪಾತಕ್ಕೆ ತೆರಳಿದ್ದರು. ಅವರಲ್ಲಿ ಕೆಲವು ಗುಂಪಿನವರು ಸಮಯ ಇರುವಾಗಲೇ ಮರಳಿ ಬಂದಿದ್ದು, ಆರು ಜನರ ಒಂದು ತಂಡ ಮಾತ್ರ ಶೀರ್ಲೆ ಫಾಲ್ಸ್ ಬಳಿ ಸಿಲುಕಿಕೊಂಡಿತ್ತು.
ಹುಬ್ಬಳ್ಳಿಯ ನಾಪತ್ತೆಯಾದ ಈ ಆರು ಜನ ಶಿರ್ಲೇ ಜಲಪಾತಕ್ಕೆ ತೆರಳುವಾಗ ಇದ್ದ ಕಾಲು ಸಂಕ ಮರಳಿ ಬರುವಾಗ ನೀರಿಗೆ ಕೊಚ್ಚಿ ಹೋಗಿತ್ತು. ಹೀಗಾಗಿ ಹಳ್ಳವನ್ನು ದಾಟಿ ಸ್ಕೂಟರ್ ಇಟ್ಟಿರುವ ಎರಡು ಕಿ.ಮೀ ದೂರದ ಸ್ಥಳಕ್ಕೆ ಬರುವುದು ಇವರಿಗೆ ಕಷ್ಟಕರವಾಗಿದ್ದು, ಸಿಕ್ಕಿರುವ ದಾರಿಯನ್ನು ಹುಡುಕಿಕೊಂಡು ಇರುವ ಏಕೈಕ ಕಾಲು ಸಂಕವನ್ನು ದಾಟಿ ರಾಘವೇಂದ್ರ ಭಟ್‌ರವರ ತೋಟಕ್ಕೆ ತೆರಳಿ ಮತ್ತೆ ತೋಟದಲ್ಲಿ ಚಳಿಯಲ್ಲಿ ನಡುಗುತ್ತ ಕುಳಿತಿದ್ದರು.
ಹುಬ್ಬಳ್ಳಿಯ ಕುಟುಂಬಸ್ಥರಿಗೆ ವಿಷಯ ತಿಳಿದು ನಸೂಕಿನಲ್ಲಿಯೇ ಜಲಪಾತಕ್ಕೆ ಆಗಮಿಸಿದ್ದರು. ನಾಪತ್ತೆಯಾದವರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಶುಕ್ರವಾರ ಬೆಳಿಗ್ಗೆ ಸುಮಾರು 9.15 ಗಂಟೆಗೆ ನಾಪತ್ತೆಯಾಗಿರುವ ಆರು ಜನ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ಮಾಹಿತಿ ಸಿಕ್ಕ ನಂತರ ಕುಟುಂಬಸ್ಥರು ನಿರಾಳರಾದರು.
ನಾಪತ್ತೆಯಾಗಿರುವ ಆರು ಜನ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ತಹಶೀಲ್ದಾರ ಶ್ರೀಕೃಷ್ಣ ಕಾಮಕರ್ ಹಾಗೂ ಇಡಗುಂಡಿ ವಲಯ ಅರಣ್ಯಾಧಿಕಾರಿ ಪ್ರಸಾದ್ ಪೆಡ್ನೇಕರ್ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button