ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೊಮ್ಮಾಯಿ ಮಾತ್ರವಲ್ಲ ಬೇರೆ ಯಾರೇ ಮುಖ್ಯಮಂತ್ರಿಯಾಗಿದ್ದರೂ ನಾನು ಅವರ ಸಂಪುಟದಲ್ಲಿ ಮಂತ್ರಿಯಾಗುತ್ತಿರಲಿಲ್ಲ ಎಂದು ಮಾಜಿ ಸಚಿವ ಜಗದೀಶ್ ಶೆಟ್ಟರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶೆಟ್ಟರ್, ಬೊಮ್ಮಾಯಿ ಸಂಪುಟದಲ್ಲಿ ಸಚಿವನಾಗಲ್ಲ ಎಂಬ ಹೇಳಿಕೆಗೆ ಸ್ಪಷ್ಟನೆ ನೀಡುತ್ತಾ, ನಿನ್ನೆ ನೀಡಿದ ಹೇಳಿಕೆಗೆ ಬದ್ಧನಾಗಿದ್ದು, ನಾನು ನೂತನ ಸಂಪುಟದಲ್ಲಿ ಮಂತ್ರಿಯಾಗಿ ಮುಂದುವರೆಯಲ್ಲ. ನನಗೆ ಪಕ್ಷ ಎಲ್ಲವನ್ನೂ ನೀಡಿದೆ. ಓರ್ವ ಸ್ಪೀಕರ್, ರಾಜ್ಯಾಧ್ಯಕ್ಷ, ಸಿಎಂ, ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ನಾನು ಪಕ್ಷದ ಹಿರಿಯ ನಾಯಕನಿದ್ದೇನೆ. ಮುಜುಗರವಾಗುವುದು ಬೇಡ ಎಂಬ ಕಾರಣಕ್ಕೆ ನಾನೇ ಸ್ವತ: ವೈಯಕ್ತಿಕವಾಗಿ ನಿರ್ಧಾರ ಕೈಗೊಂಡಿದ್ದೇನೆ ಎಂದರು.
ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದರಿಂದ ಸಂಪುಟದಲ್ಲಿ ಮಂತ್ರಿಯಾಗಿದ್ದೆ. ಬೊಮ್ಮಾಯಿ ಇರಲಿ ಅಥವಾ ಬೇರೆ ಯಾರೇ ಸಿಎಂ ಆಗಿದ್ದರೂ ನಾನು ಮಂತ್ರಿಯಾಗಿ ಮುಂದುವರೆಯುತ್ತಿರಲಿಲ್ಲ. ಬೇರೆಯವರಿಗೆ ಅವಕಾಶ ನೀಡುವ ಉದ್ದೇಶದಿಂದ ತೀರ್ಮಾನ ಕೈಗೊಂಡಿದ್ದೇನೆ. ನಾನು ಪಕ್ಷದ ಕಾರ್ಯಕರ್ತನಾಗಿ, ಶಾಸಕನಾಗಿ ಕೆಲಸ ಮಾಡುತ್ತೇನೆ. ಇದು ಸ್ವಾಭಿಮಾನ ಹಾಗೂ ಗೌರವದಿಂದ ತೆಗೆದುಕೊಂಡ ನಿರ್ಧಾರವಾಗಿದೆ. ನನಗೆ ಬೇರೆ ಯಾವುದೇ ಸ್ಥಾನದ ಆಕಾಂಕ್ಷೆಯೂ ಇಲ್ಲ. ಈ ಬಗ್ಗೆ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಹಾಲಿ ಸಿಎಂ ಬೊಮ್ಮಾಯಿ ಅವರಿಗೂ ತಿಳಿಸಿದ್ದೇನೆ. ಹಲವರು ನನ್ನ ನಿರ್ಧಾರ ಮೆಚ್ಚಿದ್ದಾರೆ ಎಂದು ತಿಳಿಸಿದರು.
ಯಡಿಯೂರಪ್ಪ ನಿವಾಸಕ್ಕೆ ಸಚಿವಾಕಾಂಕ್ಷಿಗಳು ದೌಡು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ