ಪ್ರಗತಿವಾಹಿನಿ ಸುದ್ದಿ, ತುಮಕೂರು- ಪೊಲೀಸ್ ಇಲಾಖೆಯಲ್ಲಿ ಮಹತ್ತರ ಬದಲಾವಣೆ ಮಾಡುವ ಯೋಚನೆ ಹೊಂದಿರುವುದಾಗಿ ನೂತನ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ತುಮಾಕೂರು ಸಿದ್ದಗಂಗಾ ಮಠಕ್ಕೆ ಭಾನುವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಪೊಲೀಸ್ ಇಲಾಖೆ ಎಷ್ಟು ಮಹತ್ವದ್ದೆನ್ನುವುದು ನಮಗೆಲ್ಲ ಗೊತ್ತಿದೆ. ಇಲಾಖೆ ಇದ್ದಿದ್ದರಿಂದಲೇ ನಾವೆಲ್ಲ ಸುರಕ್ಷಿತವಾಗಿದ್ದೇವೆ. ನಾನು ಇಲಾಖೆಯಲ್ಲಿ ಸಾಕಷ್ಟು ಅಧ್ಯಯನ ಮಾಡಬೇಕಿದೆ. ಅದಾದ ನಂತರ ಮಹತ್ತರವಾದದ್ದೇನಾದರೂ ಮಾಡುತ್ತೇನೆ ಎಂದು ತಿಳಿಸಿದರು.
ಪೊಲೀಸರ ವೇತನ ಮತ್ತು ಇತರ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಔರಾದ್ಕರ್ ಸಮಿತಿ ನೀಡಿದ ವರದಿಯನ್ನು ಅಧ್ಯಯನ ಮಾಡುತ್ತೇನೆ. ಸೂಕ್ತವಾದುದನ್ನು ಜಾರಿಮಾಡಲು ಪ್ರಯತ್ನಿಸುತ್ತೇನೆ. ಈವರೆಗೆ ಗೃಹ ಇಲಾಖೆಯ ಹೊಣೆ ಹೊತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆಗೆ ಚರ್ಚಿಸಿ ಇಲಾಖೆಯ ಸಮಸ್ಯೆಗಳನ್ನು ನಿವಾರಿಸಲಾಗುವುದು ಎಂದು ಅರಗ ಜ್ಞಾನೇಂದ್ರ ತಿಳಿಸಿದರು.
ಇಲಾಖೆಯ ಸಿಬ್ಬಂದಿ ನೆಮ್ಮದಿಯಿಂದಿರಬೇಕು. ಆ ದಿಸೆಯಲ್ಲಿ ಏನನ್ನು ಮಾಡಬಹುದು ಎನ್ನುವುದನ್ನು ಚರ್ಚಿಸಿ ಕ್ರಮ ತೆಗೆದುಕೊಳ್ಳಲಾಗುವುದು. ಸೋಮವಾರ ಹಿರಿಯ ಅಧಿಕಾರಿಗಳ ಮೊದಲ ಸಭೆ ನಡೆಸುತ್ತೇನೆ. ಆ ನಂತರ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯ ಎಂದೂ ಅವರು ತಿಳಿಸಿದರು.
ಬೊಮ್ಮಾಯಿ ಆಫರ್ ತಿರಸ್ಕರಿಸಿದ ಯಡಿಯೂರಪ್ಪ; ಸ್ವಾಗತಿಸಿದ ಸಿದ್ದರಾಮಯ್ಯ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ