Latest

ಪಕ್ಷ ನಿಷ್ಠೆ, ಸರ್ಕಾರದ ಕಾರ್ಯಕ್ರಮ ಅನುಷ್ಠಾನ ನಮ್ಮ ಸಂಕಲ್ಪ

ಪ್ರಗತಿವಾಹಿನಿ ಸುದ್ದಿ; ಮೈಸೂರು: ವಿಶ್ವದಲ್ಲಿಯೇ ಅತಿಹೆಚ್ಚು ಸದಸ್ಯರಿರುವ ಪಕ್ಷ ಬಿಜೆಪಿ. ಧೀಮಂತ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಅನೇಕ ಪ್ರಮುಖರ ನಾಯಕತ್ವದಲ್ಲಿ 40 ವರ್ಷಗಳಿಂದ ಈ ಪಕ್ಷ ಕಟ್ಟಲ್ಪಟ್ಟಿದೆ. ಪಕ್ಷ, ಪಕ್ಷ ನಿಷ್ಠೆ, ಪಕ್ಷದ ಕಾರ್ಯ ಕ್ರಮಗಳ ಅನುಷ್ಠಾನ ಪಕ್ಷದ ಕಾರ್ಯಕರ್ತರಾದ ನಮ್ಮೆಲ್ಲರ ಸಂಕಲ್ಪ ಆಗಬೇಕು. ಈ ಕೆಲಸವನ್ನು ಮುಂದಿನ 2 ವರ್ಷಗಳಲ್ಲಿ ನಾವು ಪ್ರಾಮಾಣಿಕವಾಗಿ ವಿಶ್ವಾಸಪೂರ್ವಕವಾಗಿ ನಾಡಿನ ಸೇವೆ ಮಾಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಂದು ಮೈಸೂರು ನಗರದಲ್ಲಿ ಭಾರತೀಯ ಜನತಾ ಪಕ್ಷದ ಕಚೇರಿಗೆ ಭೇಟಿ ನೀಡಿ, ತಾಯಿ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ನಂತರ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದು ಆಡಳಿತ ಮಾಡಲು ಕಾರಣೀಭೂತರು, ಪ್ರತಿಯೊಬ್ಬ ಕಾರ್ಯಕರ್ತರು. ಕಾರ್ಯಕರ್ತರ ಪರಿಶ್ರಮ, ದುಡಿಮೆ, ಪಕ್ಷದ ವಿಚಾರ ಮತ್ತು ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವುದು, ಜನರಲ್ಲಿ ಮನವರಿಕೆ ಮಾಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದಾರೆ ಎಂದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಕೋವಿಡ್ ನಿಯಂತ್ರಣ ಹಾಗೂ ಸಂಕಷ್ಟಕ್ಕೆ ಒಳಗಾದವರಿಗಾಗಿ ಅನೇಕ ಕಾರ್ಯಕ್ರಮ ಗಳನ್ನು ರೂಪಿಸಿದ್ದೇವೆ. ಎಂದು ತಿಳಿಸಿದರು.

ಕೇವಲ 10 ತಿಂಗಳಲ್ಲಿ 24,000 ಹೊಸ ಬೆಡ್ ಗಳನ್ನು 6000 ಐ.ಸಿ.ಯು ಬೆಡ್ ಗಳನ್ನು ಹಾಗೂ ಔಷಧೋಪಚಾರವನ್ನು ಒದಗಿಸಲಾಗಿದೆ. 2000 ವೈದ್ಯರನ್ನು ನೇಮಕ ಮಾಡಲಾಗಿದೆ. ಕೋವಿಡ್ ವಿರುದ್ಧ ದೊಡ್ಡ ಸಮರವನ್ನೇ ನಾವು ಸಾರಿದ್ದೇವೆ. ನಾವೆಲ್ಲಾ ಇದನ್ನು ಸಾಧಿಸಲು ತಾವೆಲ್ಲರೂ ಕಾರಣೀಭೂತರು. ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ ನಮ್ಮ ದೇಶ ವಿಶ್ವದಲ್ಲಿಯೇ ಅಗ್ರಮಾನ್ಯ ದೇಶವಾಗಿದೆ. ಎಲ್ಲಾ ರಂಗದಲ್ಲೂ ಮುಂದುವರೆಯುತ್ತಿದೆ. ಕೋವಿಡ್ ಇದ್ದರೂ ಆರ್ಥಿಕ ಚಟುವಟಿಕೆಗಳು ಮತ್ತೆ ಚಿಗುರುತ್ತಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಹೆಸರು ಗೌರವ ಪಡೆದಿದೆ ಎಂದರು.

ಕೋವಿಡ್ ನಿರ್ವಹಣೆಗೆ ಪ್ರಧಾನಿಗಳ ಮಾರ್ಗದರ್ಶನ ದೊರೆಯುತ್ತಿದೆ. ಎಲ್ಲ ವರ್ಗಕ್ಕೂ ಯೋಜನೆಗಳನ್ನು ರೂಪಿಸಿದ್ದು ಕೃಷಿ, ಆರೋಗ್ಯ, ನಗರ ಮತ್ತು ಗ್ರಾಮೀಣ ಅಭಿವೃದ್ಧಿ, ಸ್ಮಾರ್ಟ್ ಸಿಟಿ ಯೋಜನೆ ಜಾರಿಗೊಳಿಸಲಾಗಿದೆ. ಕೃಷಿ ಸಮ್ಮಾನ್ ಯೋಜನೆಯಡಿ 19000 ಕೋಟಿ ರೂಗಳನ್ನು ಇಂದು ಪ್ರಧಾನಿಗಳು ವಿತರಿಸಲಿದ್ದಾರೆ ಎಂದರು.

ಸಚಿವರಾದ ಎಸ್.ಟಿ. ಸೋಮಶೇಖರ್, ಡಾ. ಕೆ ಸುಧಾಕರ, ಬೈರತಿ ಬಸವರಾಜ, ಮೈಸೂರು ಜಿಲ್ಲೆಯ ಶಾಸಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button