
ರಾಜ್ಯ ವನ್ಯಜೀವಿ ಮಂಡಳಿಗೆ ಅಧಿಕಾರೇತರ ಸದಸ್ಯರ ನೇಮಕಾತಿಯನ್ನು ಪ್ರಶ್ನಿಸಿ ಪಿಐಎಲ್
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯ ವನ್ಯಜೀವಿ ಮಂಡಳಿಗೆ ಅಧಿಕಾರೇತರ ಸದಸ್ಯರ ನೇಮಕಾತಿಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಉಚ್ಚ ನ್ಯಾಯಾಲಯ ಮುಂದಿನ ವಿಚಾರಣೆ ವೇಳೆಗೆ ಅಧಿಕಾರೇತರ ಸದಸ್ಯರ ನೇಮಕಾತಿ ಕುರಿತ ದಾಖಲಾತಿಗಳನ್ನು ಹಾಜರುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಆಗಸ್ಟ್ 3 ರಂದು ಆದೇಶ ನೀಡಿದೆ.
ರಾಜ್ಯ ವನ್ಯಜೀವಿ ಮಂಡಳಿಗೆ ಅಧಿಕಾರೇತರ ಸದಸ್ಯರ ನೇಮಕಾತಿಯನ್ನು ಪ್ರಶ್ನಿಸಿ ವನ್ಯಜೀವಿ ಕಾರ್ಯಕರ್ತ ಪ್ರಮೋದ್ ವೆಂಕಟೇಶಮೂರ್ತಿ ಎಂಬುವವರು ಕಳೆದ ವರ್ಷ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಮಂಡಳಿಗೆ ನೇಮಕ ಮಾಡಲ್ಪಟ್ಟ ಹಲವಾರು ಅಧಿಕಾರೇತರ ಸದಸ್ಯರಿಗೆ ಸೂಕ್ತ ಅರ್ಹತೆಯಿಲ್ಲ ಹಾಗೂ ಬಹುಪಾಲು ಜನರು ರಾಜಕೀಯ ಪ್ರಭಾವ ಬಳಸಿ ನೇಮಕಗೊಂಡಿದ್ದಾರೆಂದು ದೂರಲಾಗಿತ್ತು. ಈ ಕುರಿತು ಪ್ರತಿವಾದಿಗಳಾದ ಅಧಿಕಾರೇತರ ಸದಸ್ಯರಿಗೆ ನೋಟಿಸ್ ಜಾರಿ ಮಾಡಲು ಹೈಕೋರ್ಟ್ ನವೆಂಬರ್ 26, 2020 ರಂದು ಸೂಚಿಸಿತ್ತು. ಡಿಸೆಂಬರ್ 22, 2020 ರಂದು ಮತ್ತೆ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಲಯ ನೇಮಕಾತಿ ಕುರಿತ ದಾಖಲಾತಿಗಳನ್ನು ಹಾಜರುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು.
ಜನೆವರಿ 21, 2021 ರಂದು ಹೆಚ್ಚುವರಿ ಸರಕಾರಿ ವಕೀಲರು ಸದರಿ ದಾಖಲೆಗಳನ್ನು ಹಾಜರುಪಡಿಸುವುದಾಗಿ ತಿಳಿಸಿದ್ದರು. ಏಪ್ರಿಲ್ 5ರಂದು ಮತ್ತೆ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಾಲಯ ಜನೆವರಿ 21 ರಂದು ತಾನು ನೀಡಿದ್ದ ಆದೇಶವನ್ನು ಪಾಲಿಸದೆ ಇದ್ದುದನ್ನು ಗಮನಿಸಿ ಮುಂದಿನ ವಿಚಾರಣೆ ವೇಳೆ ದಾಖಲೆಗಳನ್ನು ಹಾಜರುಪಡಿಸುವ ಕುರಿತ ಆದೇಶವನ್ನು ಪಾಲಿಸದೇ ಇದ್ದರೆ ಸದರಿ ಸದಸ್ಯರ ನೇಮಕಾತಿಗೆ ರಾಜ್ಯ ಸರಕಾರವು ಯಾವುದೇ ನ್ಯಾಯಯುತ ಮತ್ತು ಪಾರದರ್ಶಕ ವಿಧಾನವನ್ನು ಅನುಸರಿಸಿಲ್ಲವೆಂಬ ತೀರ್ಮಾನವನ್ನು ತೆಗೆದುಕೊಳ್ಳಲು ನ್ಯಾಯಾಲಯವು ಮುಕ್ತವಾಗಿರುತ್ತದೆಂದು ತಿಳಿಸಿ ಆದೇಶ ಪಾಲನೆ ಮಾಡಲು ರಾಜ್ಯ ಸರಕಾರಕ್ಕೆ ಸಮಯಾವಕಾಶ ಕೊಟ್ಟು ವಿಚಾರಣೆಯನ್ನು ಮುಂದೂಡಿತ್ತು. ಏಪ್ರಿಲ್ 8ರಂದು ರಾಜ್ಯ ಸರಕಾರವು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ ಸದರಿ ಸದಸ್ಯರ ನೇಮಕಾತಿಗೆ ರಾಜ್ಯ ಸರಕಾರವು ಯಾವುದೇ ನ್ಯಾಯಯುತ ಮತ್ತು ಪಾರದರ್ಶಕ ವಿಧಾನವನ್ನು ಅನುಸರಿಸಿಲ್ಲವೆಂದು ಮೇಲ್ನೋಟಕ್ಕೆ ಕಾಣಿಸುತ್ತಿದೆ ಹಾಗೂ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಪ್ರಕಾರ ಪ್ರಖ್ಯಾತ ಸಂರಕ್ಷಣಾವಾದಿಗಳು, ಜೀವಶಾಸ್ತ್ರಜ್ಞರು ಹಾಗೂ ಪರಿಸರವಾದಿಗಳನ್ನು ವನ್ಯಜೀವಿ ಮಂಡಳಿಗೆ ನೇಮಕ ಮಾಡಲು ರಾಜ್ಯ ಸರಕಾರವು ಪ್ರಯತ್ನ ಮಾಡಿಲ್ಲವೆಂದು ಅಭಿಪ್ರಾಯಪಟ್ಟು ಈ ಕುರಿತು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ರಾಜ್ಯ ಸರಕಾರಕ್ಕೆ ಸಮಯಾವಕಾಶ ನೀಡಿ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 19ಕ್ಕೆ ಮುಂದೂಡಿತ್ತು. ಏಪ್ರಿಲ್ 19ಕ್ಕೆ ಮತ್ತೆ ಅರ್ಜಿಯ ವಿಚಾರಣೆ ಸಮಯದಲ್ಲಿ ಕೋವಿಡ್ ಕಾರಣದಿಂದ ಸರಕಾರದ ಕಡೆಯಿಂದ ಈ ಕುರಿತು ಯಾವುದೇ ತೀರ್ಮಾನ ತೆಗೆದುಕೊಳ್ಳಲಾಗಿಲ್ಲ, ಆದ ಕಾರಣದಿಂದ ಮತ್ತಷ್ಟು ಸಮಯಾವಕಾಶ ಬೇಕೆಂದು ಹೆಚ್ಚುವರಿ ಸರಕಾರಿ ವಕೀಲರು ಕೇಳಿದ್ದರಿಂದ ಅರ್ಜಿಯ ಅಂತಿಮ ವಿಲೇವಾರಿಗೆ ಜೂನ್ 1ಕ್ಕೆ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿತ್ತು. ಜೂನ್ 1ರಂದು ಹೆಚ್ಚುವರಿ ಸರಕಾರಿ ವಕೀಲರು ಮತ್ತೆ ಸಮಯಾವಕಾಶ ಕೇಳಿದ್ದರಿಂದ ಅರ್ಜಿಯ ವಿಚಾರಣೆಯನ್ನು ಮತ್ತೆ ಮುಂದೂಡಲಾಗಿತ್ತು. ಜುಲೈ 14ರಂದು ಅರ್ಜಿಯ ವಿಚಾರಣೆ ಸಮಯದಲ್ಲಿ ನ್ಯಾಯಾಲಯ ಕೇಳಿದ ದಾಖಲೆಗಳನ್ನು ನಿಗದಿತ ನಮೂನೆಯಲ್ಲಿ ಒದಗಿಸುವುದಾಗಿ ಹೇಳಿದ ಹೆಚ್ಚುವರಿ ಸರಕಾರಿ ವಕೀಲರಿಗೆ ಎರಡು ವಾರ ಕಾಲಾವಕಾಶ ನೀಡಿ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 3ಕ್ಕೆ ಮುಂದೂಡಲಾಗಿತ್ತು. ಆಗಸ್ಟ್ 3ರಂದು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಮುಂದಿನ ವಿಚಾರಣೆ ವೇಳೆಗೆ ಅಧಿಕಾರೇತರ ಸದಸ್ಯರ ನೇಮಕಾತಿ ಕುರಿತ ದಾಖಲಾತಿಗಳನ್ನು ಹಾಜರುಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿ ಅರ್ಜಿಯ ವಿಚಾರಣೆಯನ್ನು ಆಗಸ್ಟ್ 25ಕ್ಕೆ ಮುಂದೂಡಿದೆ.
ಬುಗಿಲೆದ್ದ ಅಸಮಾಧಾನ: ಶಾಸಕರ ಕಚೇರಿ ತೆರವು; ಬುಧವಾರವೇ ಆನಂದ್ ಸಿಂಗ್ ರಾಜಿನಾಮೆ?