ಪಾಲಿಕೆ ವಾರ್ಡ್ ವಿಂಗಡಣೆ ಸರಿಯಾಗಿಲ್ಲ, ಮೀಸಲಾತಿ ಸಮರ್ಪಕವಾಗಿಲ್ಲ ಎನ್ನುವ ಕಾರಣ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ರಾಜ್ಯ ಚುನಾವಣಾ ಆಯೋಗದಿಂದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಕಲಬುರಗಿ ಸೇರಿದಂತೆ ೩ ಮಹಾನಗರ ಪಾಲಿಕೆಗಳ ಚುನಾವಣೆ ದಿನಾಂಕ ಘೋಷಣೆಯಾಗಿದ್ದು, ಇದರ ವಿರುದ್ದ ಕೆಲವರು ಸುಪ್ರೀಂ ಕೋರ್ಟ್ ಕದ ತಟ್ಟಲು ಸಿದ್ಧತೆ ನಡೆಸಿದ್ದಾರೆ.
ಪಾಲಿಕೆ ಚುನಾವಣೆ ನಿರೀಕ್ಷೆಯಲ್ಲಿ ಎಲ್ಲರೂ ಇದ್ದರಾದರೂ ಇಷ್ಟು ದಿಢೀರ್ ಆಗಿ ಚುನಾವಣೆ ಘೋಷಣೆಯಾಗಿರುವುದು ಹಲವರಿಗೆ ಶಾಕ್ ನೀಡಿದ್ದು, ಇನ್ನು ಕೇವಲ ೪ ದಿನದಲ್ಲಿ ಪಾಲಿಕೆ ಚುನಾವಣೆಗೆ ಸಜ್ಜಾಗಬೇಕಿದೆ.
ಈ ಹಿನ್ನೆಲೆಯಲ್ಲಿ ಬೆಳಗಾವಿ, ಕಲಬುರಗಿ ಅಲ್ಲದೇ ಹುಬ್ಬಳ್ಳಿ ಮೂಲದ ಒಬ್ಬರು ಮೂರು ಪಾಲಿಕೆಗಳ ಚುನಾವಣೆಯನ್ನು ಡಿಸೆಂಬರ್ವರೆಗೆ ಮುಂದೂಡಬೇಕೆಂದು ಸುಪ್ರೀಂ ಕೋರ್ಟ್ನ ಮೊರೆ ಹೋಗಲಿದ್ದಾರೆನ್ನಲಾಗಿದೆ.
ಪಾಲಿಕೆ ವಾರ್ಡ್ ವಿಂಗಡಣೆ ಸರಿಯಾಗಿಲ್ಲ, ಮೀಸಲಾತಿ ಸಮರ್ಪಕವಾಗಿಲ್ಲ. ಈ ಕುರಿತ ಬೆಳಗಾವಿ ಪಾಲಿಕೆ ಸಂಬಂಧದ ವ್ಯಾಜ್ಯ ಹೈಕೋರ್ಟ್ ನಲ್ಲಿ ಪೆಂಡಿಂಗ್ ಇದೆ. ಜೊತೆಗೆ, ಪ್ರಸಕ್ತ ಕೋವಿಡ್ ಮೂರನೇ ಅಲೆ, ಅಲ್ಲದೇ ಸಚಿವ ಸಂಪುಟದ ಮುಂದೂಡಿಕೆ ನಿರ್ಣಯವನ್ನು ಮುಂದಿಟ್ಟು ಚುನಾವಣಾ ಆಯೋಗ ಪ್ರಕಟಿಸಿದ ಚುನಾವಣಾ ಪ್ರಕ್ರಿಯೆಗೆ ತಡೆಯಾಜ್ಞೆ ತರಲು ಮುಂದಾಗಿದ್ದಾರೆ ಎಂದು ಗೊತ್ತಾಗಿದೆ.
ಕಳೆದ ದಿ. ೪ರಂದು ಹೈಕೋರ್ಟ ಚುನಾವಣಾ ಆಯೋಗಕ್ಕೆ ಸ್ಪಷ್ಟ ನಿರ್ಧಾರಕ್ಕೆ ಸೂಚನೆ ನೀಡಿ ವಿಚಾರಣೆಯನ್ನು ಆ.೧೩ಕ್ಕೆ ಮುಂದೂಡಿದ್ದು, ಚುನಾವಣಾ ವೇಳಾಪಟ್ಟಿಯ ವಿವರದೊಂದಿಗೆ ಕೋರ್ಟ್ಗೆ ನಾಳೆ ಮಾಹಿತಿ ನೀಡಲಿದೆ ಎನ್ನಲಾಗಿದೆ.
ಸಂಸ್ಥೆಗಳ ಅವಧಿ ಪೂರ್ಣಗೊಂಡಿರುವ ರಾಜ್ಯದ ಕೆಲ ನಗರ ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಕಾಲಮಿತಿಯೊಳಗೆ ಚುನಾವಣೆ ನಡೆಸಲು ಸರ್ಕಾರ, ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಲು ದಾಖಲಿಸಿಕೊಂಡಿರುವ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ಎ.ಎನ್. ಓಕ್ ನೇತೃತ್ವದ ವಿಭಾಗಿಯ ಪೀಠವೇ ನಿರ್ದೇಶನ ನೀಡಿರುವುದರಿಂದ ಪಾಲಿಕೆ ಚುನಾವಣೆ ಮುಂದೂಡಲ್ಪಡುವ ಸಾಧ್ಯತೆ ಕಡಿಮೆಯಿದ್ದು, ಶುಕ್ರವಾರ ವಿಚಾರಣೆಗೆ ಬರಲಿದೆ.
ತನ್ಮಧ್ಯೆ ಧಾರವಾಡ ಹೈಕೋರ್ಟನಲ್ಲಿ ಸಲ್ಲಿಕೆಯಾಗಿರುವ ಮೀಸಲಾತಿ ನಿಗದಿ ಹಾಗೂ ಪರಿಶಿಷ್ಟರಿಗೆ ಅನ್ಯಾಯ ಕುರಿತ ಅರ್ಜಿ ವಿಚಾರಣೆ ದಿ.೧೬ಕ್ಕೆ ಮುಂದೂಡಿಕೆಯಾಗಿದೆ.
ಹೈಕೋರ್ಟ್ನ ಧಾರವಾಡ ಪೀಠದಲ್ಲಿ ಅರ್ಜಿ ಬಾಕಿ ಇರುವಾಗ ರಾಜ್ಯ ಚುನಾವಣಾ ಆಯೋಗ ಬೆಳಗಾವಿ ಪಾಲಿಕೆ ಚುನಾವಣೆ ಘೋಷಿಸಿದ್ದು, ಇದರ ವಿರುದ್ಧ ಮೆಮೊ ಸಲ್ಲಿಸಲು ಅರ್ಜಿದಾರರು ನಿರ್ಧರಿಸಿದ್ದಾರೆಂದು ತಿಳಿದುಬಂದಿದೆ.
ಈ ಹಿಂದೆ ಬಳ್ಳಾರಿ ಮಹಾನಗರಪಾಲಿಕೆ ಚುನಾವಣೆ ವೇಳೆ ಸಹ ಕೆಲವರು ಚುನಾವಣೆ ಮುಂದೂಡಿಕೆ ಸಂಬಂಧ ಕೋರ್ಟ ಮೆಟ್ಟಿಲು ಹತ್ತಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.ಒಮ್ಮೆ ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದ ನಂತರ ತಡೆ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ